Gurbaz Breaks Kohli-Sachin Tendulkar Records:ಬಾಂಗ್ಲಾದೇಶ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ಭರ್ಜರಿ ಗೆಲುವು ಸಾಧಿಸಿದೆ. ಶಾರ್ಜಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನ್ ತಂಡ 5 ವಿಕೆಟ್ಗಳಿಂದ ಜಯಭೇರಿ ಬಾರಿಸಿ, 2-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿತ್ತು. ಮಹಮುದುಲ್ಲಾ (98) 2 ರನ್ಗಳಿಂದ ಶತಕ ವಂಚಿತರಾದರೆ, ನಾಯಕ ಮೆಹದಿ ಹಸನ್ ಮೀರಜ್ (66) ಅರ್ಧಶತಕ ಸಿಡಿಸಿದರು. ಉಳಿದ ಬ್ಯಾಟರ್ಗಳು ಹೇಳಿಕೊಳ್ಳುವ ಪ್ರದರ್ಶನ ತೋರಲಿಲ್ಲ. ಅಫ್ಘಾನ್ ಪರ ಒಮರ್ಜಾಯ್ 4 ವಿಕೆಟ್ ಪಡೆದರು.
ಗುರ್ಬಾಝ್ ಶತಕದಾಟ:245 ರನ್ಗಳ ಗುರಿ ಪಡೆದ ಅಫ್ಘಾನಿಸ್ತಾನ 10 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದುಕೊಂಡಿತು. ಆರಂಬಿಕ ಬ್ಯಾಟರ್ ಆಗಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್ ಭರ್ಜರಿ ಪ್ರದರ್ಶನ ತೋರಿ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 120 ಎಸೆತಗಳನ್ನು ಎದುರಿಸಿದ ಅವರು, 5 ಬೌಂಡರಿ ಮತ್ತು 7 ಸಿಕ್ಸರ್ ಸಹಾಯದಿಂದ 101 ರನ್ ಪೇರಿಸಿದರು. ಇದರೊಂದಿಗೆ ಹೊಸ ದಾಖಲೆ ಬರೆದಿದ್ದಾರೆ.
ಗುರ್ಬಾಝ್ ದಾಖಲೆ:ಗುರ್ಬಾಝ್ 22 ವರ್ಷ 349 ದಿನಗಳಲ್ಲಿ 8ನೇ ಶತಕ ಸಿಡಿಸಿದ್ದಾರೆ. ಇದರ ಜೊತೆಗೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಬಾಬರ್ ಅಜಂ ಅವರ ದಾಖಲೆಗಳನ್ನೂ ಮುರಿದರು. ಈ ಹಿಂದೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 8ನೇ ಶತಕ ಸಿಡಿಸಿದ್ದಾಗ ಅವರಿಗೆ 22 ವರ್ಷ 357 ದಿನ ವಯಸ್ಸಾಗಿತ್ತು. ಕೊಹ್ಲಿ 23 ವರ್ಷ 27 ದಿನ, ಪಾಕಿಸ್ತಾನದ ಬಾಬರ್ ಅಜಂ 23 ವರ್ಷ 280 ದಿನಕ್ಕೆ 8ನೇ ಶತಕ ಸಿಡಿಸಿದ್ದರು. ಇದೀಗ ಗುರ್ಬಾಝ್ ಎಲ್ಲರನ್ನೂ ಹಿಂದಿಕ್ಕಿದ್ದಾರೆ. ಗುರ್ಬಾಝ್ ಅಫ್ಘಾನ್ ಪರ ಅತೀ ಹೆಚ್ಚು ಶತಕ ಸಿಡಿಸಿದ ಮೊಹ್ಮದ್ ಶಹಜಾದ್ (6) ನಂತರದ ಸ್ಥಾನದಲ್ಲಿದ್ದಾರೆ.