Dehli Premier League: ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್)ನಲ್ಲಿ ಯುವ ಬ್ಯಾಟರ್ ಹೊಸ ದಾಖಲೆ ಬರೆದಿದ್ದಾರೆ. ಇಂದು ನಡೆಯುತ್ತಿರುವ ಸೌತ್ ದೆಹಲಿ ಮತ್ತು ನಾರ್ತ್ ದೆಹಲಿ ನಡುವಿನ ಟಿ20 ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಸೌತ್ ದೆಹಲಿಯ ಪ್ರಿಯಾಂಶ್, ಯುವರಾಜ್ ಸಿಂಗ್ರಂತೆ ಬಿರುಸಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಪಂದ್ಯದ 12ನೇ ಓವರ್‌ನಲ್ಲಿ ಮನನ್ ಭಾರದ್ವಾಜ್ ಬೌಲಿಂಗ್ ವೇಳೆ ಪ್ರಿಯಾಂಶ್ ಸ್ಫೋಟಕ ಬ್ಯಾಟಿಂಗ್ ಮೂಲಕ ಒಂದೇ ಓವರ್‌ನಲ್ಲಿ 36 ರನ್ ಕಲೆಹಾಕಿದ್ದಾರೆ. ಓವರ್ನ ಮೊದಲ ಎಸೆತವನ್ನು ಲಾಂಗ್ ಆಫ್ ಬೌಂಡರಿಗೆ ಅಟ್ಟುವ ಮೂಲಕ ಸಿಕ್ಸ್ ಸಿಡಿಸಿದರು. ಎರಡನೇ ಎಸೆತದಲ್ಲಿ ಅವರು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಭಾರಿಸಿದರೇ, ಮೂರನೇ ಎಸೆತದಲ್ಲಿ ಲಾಂಗ್ ಆನ್ ಕಡೆಗೆ ಮತ್ತು ನಂತರ ಉಳಿದ ಮೂರು ಎಸೆತಗಳಲ್ಲೂ ಇದೇ ರೀತಿ ಸಿಕ್ಸರ್ ಸಿಡಿಸಿದರು.
ಈ ಮೂಲಕ ಪ್ರಿಯಾಂಶ್ ಆರ್ಯ ಡಿಪಿಎಲ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದರು. ರವಿಶಾಸ್ತ್ರಿ ಮತ್ತು ಯುವರಾಜ್ ಸಿಂಗ್ ನಂತರ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಭಾರಿಸಿದ ಮೂರನೇ ಭಾರತೀಯ, ದೇಶಿಯ ಲೀಗ್ನ ಮೊದಲ ಆಟಗಾರ ಎನಿಸಿಕೊಂಡರು. ಒಟ್ಟಾರೆ ದೇಶಿಯ ಲೀಗ್ನಲ್ಲಿ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ರಾಸ್ ವೈಟ್ಲಿ (2017), ಹಜರತುಲ್ಲಾ ಝಜೈ (2018) ಮತ್ತು ಲಿಯೊ ಕಾರ್ಟರ್ (2020) ದೇಶಿಯ ಟಿ20 ಪಂದ್ಯಗಳಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ್ದರು.