ಚೆನ್ನೈ: ಹಂಗೇರಿಯಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಸ್ವದೇಶಕ್ಕೆ ಮರುಳಿದ್ದಾರೆ. ಈ ಪೈಕಿ ಚೆಸ್ ಚಾಂಪಿಯನ್ಗಳಾದ ಗುಕೇಶ್, ಪ್ರಜ್ಞಾನಂದ, ವೈಶಾಲಿ, ಶ್ರೀನಾಥ್ ಅವರನ್ನು ತವರೂರು ಚೆನ್ನೈನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯುವ ಚಾಂಪಿಯನ್ನರಿಗೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಕ್ರೀಡಾ ಪ್ರಾಧಿಕಾರದಿಂದ ಸ್ವಾಗತ ಕೋರಲಾಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀನಾಥ್, “45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿವೆ. ಇದರಿಂದ ನಮಗೆ ತುಂಬಾ ಹೆಮ್ಮೆ ಇದೆ, ನಾವು ಹೆಚ್ಚು ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿದ್ದೇವೆ. ಇದಕ್ಕೂ ಮುನ್ನ ರಷ್ಯಾ ಜೊತೆಗೂಡಿ ಚಿನ್ನದ ಪದಕವನ್ನು ಗೆದ್ದಿದ್ದೇವೆ. ಆದರೆ ಇದೀಗ ಏಕಾಂಗಿಯಾಗಿ ಪದಕವನ್ನು ಜಯಿಸಿದ್ದೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ಮಹಿಳಾ ವಿಜೇತ ತಂಡದ ಆಟಗಾರ್ತಿ ವೈಶಾಲಿ, ನಮಗೆ ತುಂಬಾ ಸಂತೋಷವಾಗಿದೆ. ಕಳೆದ ಬಾರಿ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದೆವು. ಆಗ ಚಿನ್ನದ ಪದಕ ಗೆಲ್ಲದಿರುವುದಕ್ಕೆ ತುಂಬಾ ಬೇಸರವಾಗಿತ್ತು. ಆದರೆ ಈಗ ಚಿನ್ನದ ಪದಕ ಗೆದ್ದಿರುವುದು ಅತೀವ ಸಂತಸ ತಂದಿದೆ. ಭಾರತ ಪುರುಷರ ತಂಡ ಅತ್ಯಧಿಕ ಅಂಕಗಳ ಅಂತರದಿಂದ ಗೆದ್ದಿದೆ. ಆದರೆ ಮಹಿಳಾ ತಂಡ ಒಂದು ಪಂದ್ಯದಲ್ಲಿ ಸೋತು ಇನ್ನೆರಡು ಪಂದ್ಯಗಳನ್ನು ಪದಕ ಗೆದ್ದುಕೊಂಡಿತು ಎಂದು ಹೇಳಿದರು.