ಹೈದರಾಬಾದ್: ಶನಿವಾರ ಟೀಂ ಇಂಡಿಯಾ ಪಾಲಿಗೆ ಅದೃಷ್ಟದ ದಿನವಾಗಿದೆ. ಏಕೆಂದರೇ ಇದೇ ದಿನದಂದು ಈವರೆಗೆ ಭಾರತ 3 ಐಸಿಸಿ ಟ್ರೋಫಿಗಳನ್ನು ಗೆದ್ದುಕೊಂಡಿದೆ. 1983ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್, 2011ರಲ್ಲಿ ಎರಡನೇ ಏಕದಿನ ವಿಶ್ವಕಪ್, ಇದೀಗ ನಿನ್ನೆ (ಜೂ.29) ಎರಡನೇ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಮೂರು ಟ್ರೋಫಿಗಳು ಶನಿವಾರದಂದೇ ಗೆದ್ದಿರುವುದರಿಂದ ಟೀಂ ಇಂಡಿಯಾಗೆ ಈ ದಿನ ವಿಶೇಷವಾಗಿದೆ ಎಂಬ ಚರ್ಚೆ ಶುರುವಾಗಿದೆ.
ಚೊಚ್ಚಲ ವಿಶ್ವಕಪ್: 1983 ಜೂನ್ 25ರಂದು ಭಾರತ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ವೇಳೆ ಆ ದಿನ ಶನಿವಾರ ಆಗಿತ್ತು. ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಪ್ ಗೆಲ್ಲುವ ಫೆವರೆಟ್ ತಂಡವಾಗಿ ಗುರುತಿಸಿಕೊಂಡಿರಲಿಲ್ಲ. ಆದರೆ ನಾಯಕ ಕಪಿಲ್ ದೇವ್ ನೇತೃತ್ವದ ತಂಡ ಸತತ ಹೋರಾಟದ ಫಲವಾಗಿ ಫೈನಲ್ಗೆ ತಲುಪಿತ್ತು.
ಈ ಫೈನಲ್ ಪಂದ್ಯ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದಿತ್ತು. ಭಾರತ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮತ್ತ ಕಪ್ ಗೆಲ್ಲುವ ಫೆವರೆಟ್ ತಂಡ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಫೈನಲ್ ಕದನಕ್ಕಿಳಿದಿತ್ತು. ವೆಸ್ಟ್ ಇಂಡೀಸ್ ಈ ಪಂದ್ಯ ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆಯನ್ನು ಹುಸಿಗೊಳಿಸಿದ ಭಾರತ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಜಯಿಸಿತ್ತು.