ಪಲ್ಲೆಕೆಲೆ(ಶ್ರೀಲಂಕಾ):ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಗೆಲುವಿನೊಂದಿಗೆ ಕ್ರಿಕೆಟ್ ಅಭಿಯಾನ ಆರಂಭಿಸಿದೆ. ಇಲ್ಲಿನ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 43 ರನ್‌ಗಳಿಂದ ಜಯ ಸಾಧಿಸಿತು. ಭಾರತ ನೀಡಿದ 214 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಲಂಕಾ 19.2 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಆರಂಭಿಕ ಪಾಥುಮ್ ನಿಸ್ಸಾಂಕ (79 ರನ್) ಬೃಹತ್ ಇನಿಂಗ್ಸ್ ಆಡಿದರು. ಕುಶಾಲ್ ಮೆಂಡಿಸ್ (45 ರನ್) ಮಿಂಚಿದರು. ಆದರೆ, ಇತರ ಬ್ಯಾಟರ್‌ಗಳು ತಂಡಕ್ಕೆ ಆಸರೆಯಾಗಲಿಲ್ಲ.
ಭಾರತದ ಪರ ರಿಯಾನ್ ಪರಾಗ್ 3, ಅರ್ಷ್‌ದೀಪ್ ಸಿಂಗ್, ಅಕ್ಷರ್ ಪಟೇಲ್ ತಲಾ 2 ಹಾಗು ಮೊಹಮ್ಮದ್ ಸಿರಾಜ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.
26 ಎಸೆತಗಳಲ್ಲಿ 58 ರನ್ ಸಿಡಿಸಿದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕರಾದ ಯಶಸ್ವಿ ಜೈಶ್ವಾಲ್ (40 ರನ್, 21 ಎಸೆತ) ಮತ್ತು ಶುಭ್‌ಮನ್ ಗಿಲ್ (34 ರನ್, 16 ಎಸೆತ) ಉತ್ತಮ ಆರಂಭ ನೀಡಿದರು. ಪವರ್ ಪ್ಲೇನಲ್ಲಿ ಇಬ್ಬರೂ ತಂಡದ ಸ್ಕೋರ್ 70 ದಾಟಿಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ 5.6 ಓವರ್‌ಗಳಲ್ಲಿ 74 ರನ್‌ಗಳನ್ನು ಜೊತೆಯಾಟವಾಡಿದರು. ಬಳಿಕ ಕ್ರೀಸ್ಗಿಳಿದ ಸೂರ್ಯ ಅಬ್ಬರಿಸಿದರು. ಲಂಕಾ ಬೌಲರ್‌ಗಳ ಮೇಲೆ ಬೌಂಡರಿಗಳ ಮಳೆಗೆರೆದರು. ಕೇವಲ 22 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು.
ಮತ್ತೊಂದೆಡೆ, ಯುವ ಬ್ಯಾಟರ್ ರಿಷಬ್ ಪಂತ್ (49 ರನ್) ಮಿಂಚಿದರು. ನಂತರ ಬಂದ ಬ್ಯಾಟರ್‌ಗಳಾದ ಹಾರ್ದಿಕ್ ಪಾಂಡ್ಯ (9 ರನ್), ರಿಯಾನ್ ಪರಾಗ್ (7 ರನ್) ಹಾಗೂ ರಿಂಕು ಸಿಂಗ್ (1) ನಿರಾಸೆ ಮೂಡಿಸಿದರು. ಅಕ್ಷರ್ ಪಟೇಲ್ (10* ರನ್) ಉಪಯುಕ್ತ ಕೊಡುಗೆ ನೀಡಿದರು.
ಲಂಕಾ ಬೌಲರ್‌ಗಳ ಪೈಕಿ ಮತೀಶ ಪತಿರಾನ 4, ವನಿಂದು ಹಸರಂಗ, ಫೆರ್ನಾಂಡೊ ಮತ್ತು ದಿಲ್ಶಾನ್ ಮಧುಶಂಕ ತಲಾ ಒಂದೊಂದು ವಿಕೆಟ್ ಉರುಳಿಸಿದರು. ಎರಡನೇ ಟಿ20 ಭಾನುವಾರ (ಇಂದು) ನಡೆಯಲಿದೆ.
ಇದನ್ನೂ ಓದಿ:ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್: ಶ್ರೀಲಂಕಾಗೆ 214 ರನ್‌ಗಳ ಬೃಹತ್ ಗೆಲುವಿನ ಗುರಿ - India Sri Lanka first T20 match