ಬ್ರಹ್ಮ ಮುಹೂರ್ತ ಸಮಯ, ಇದನ್ನು ಅಮೃತ ಕಲಾಮಣಿ ಮತ್ತು ಬ್ರಹ್ಮ ಸಮಯಮಣಿ ಎಂದೂ ಕರೆಯಲಾಗುತ್ತದೆ. ಬ್ರಹ್ಮ ದೇವರಿಗೆ ಸಂಬಂಧಿಸಿದ ಸಮಯ ಆಗಿರುವುದರಿಂದ ಈ ಹೆಸರು ಬಂದಿದೆ. ಬೆಳಗಿನ ಜಾವ 3:30 ರಿಂದ 5:30ರ ನಡುವಿನ ಅವಧಿಯನ್ನು ಬ್ರಹ್ಮಮುಹೂರ್ತ ಎಂದು ಕರೆಯಲಾಗುತ್ತದೆ. ಈ ಹಿಂದೆ ಋಷಿಗಳು ತಮ್ಮ ಆಧ್ಯಾತ್ಮಿಕ ಧ್ಯಾನಕ್ಕಾಗಿ ಈ ಮಂಗಳಕರ ಸಮಯವನ್ನು ಆರಿಸಿಕೊಳ್ಳುತ್ತಿದ್ದರು. ಒಂದಾನೊಂದು ಕಾಲದಲ್ಲಿ ಮನೆಗಳಲ್ಲಿ ಹಿರಿಯರೂ ಕೂಡ ಮಕ್ಕಳನ್ನು ಬ್ರಹ್ಮ ಮುಹೂರ್ತದಲ್ಲಿ ಎಬ್ಬಿಸಿ ಸಂಗೀತಾಭ್ಯಾಸ ಹಾಗೂ ಓದಲು ಹಚ್ಚುತ್ತಿದ್ದರು.
ಸೂರ್ಯೋದಯಕ್ಕೂ ಒಂದೂವರೆಗಂಟೆ ಮುನ್ನ ಏಳುವುದು:ಸೂರ್ಯೋದಯಕ್ಕೆ ಸುಮಾರು ಒಂದೂವರೆ ಗಂಟೆ ಮೊದಲು ನೀವು ಎಚ್ಚರಗೊಂಡರೆ ಹಾಗೂ ಆಗಿನಿಂದಲೇ ನಿಮ್ಮ ಆಚರಣೆಗಳನ್ನು ಶುರು ಮಾಡಿದರೆ ತುಂಬಾ ಒಳ್ಳೆಯದು ಎಂಬುದು ಬಹುತೇಕ ಮನೆ ಹಿರಿಯರ ಮಾತು. ಆಗ ಎದ್ದು ಯೋಗಾದಿ ಕರ್ಮಗಳನ್ನು ಮಾಡಿ, ಸೂರ್ಯೋದಯವನ್ನು ವೀಕ್ಷಿಸಿದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ಪ್ರತೀತಿ ಇದೆ. ಸೂರ್ಯ ಹುಟ್ಟುವುದಕ್ಕೂ ಮುಂಚಿತವಾಗಿ, ಪ್ರಕಟವಾದ ನಾರಾಯಣನ ಸಾರಥಿ ಎಂದು ಕರೆಯಲ್ಪಡುವ ಅರುಣ, ತನ್ನ ಕೆಂಪು ಕಿರಣಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಉದಯಿಸುವ ಸೂರ್ಯನ ಕಿರಣಗಳೊಂದಿಗೆ ಸ್ವಲ್ಪ ಸಮಯದವರೆಗೆ ಮಾತ್ರ ಕಾಣುವ ಈ ಸುಂದರ ನೋಟವು ಆಹ್ಲಾದಕರವಾಗಿರುತ್ತದೆ ಮತ್ತು ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಅನ್ನು ಒದಗಿಸುತ್ತದೆ.
ಆ ಸಮಯದಲ್ಲಿ ಎದ್ದರೆ ಎಷ್ಟೊಂದು ಪ್ರಯೋಜನ ಗೊತ್ತಾ?: ಹಾಗೆಯೇ ಬ್ರಹ್ಮಮುಹೂರ್ತದಲ್ಲಿ ಏಳುವುದರಿಂದ ದೊಡ್ಡ ಪ್ರಮಾಣದ ಲಾಭಗಳಿವೆ. ಈ ಸಮಯದಲ್ಲಿ ಎದ್ದು ನಮ್ಮ ನಿತ್ಯದ ಬದುಕು ಆರಂಭಿಸಿದರೆ ಶಾಂತಿ ನೆಲೆಸುತ್ತದೆ. ಆಹ್ಲಾದಕರ ಹಾಗೂ ನಿಶಬ್ದದ ವಾತಾವರಣದಲ್ಲಿ ದೇವರ ಪೂಜೆಯಾಗಲಿ, ವಿದ್ಯಾರ್ಥಿಗಳು ಓದುವುದಾಗಲಿ, ಅಥವಾ ಇನ್ನಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಲಿ ಏಕಾಗ್ರತೆಯಿಂದ ಪೂರ್ಣಗೊಳಿಸಬಹುದು. ಉತ್ತಮ ಮನಸ್ಸಿನ ಕೆಲಸ ಮಾಡುವುದರಿಂದ ದೇಹ ಉನ್ನತಿಯಾಗುತ್ತದೆ. ಇಂದ್ರಿಯಗಳೂ ಎಚ್ಚರದಿಂದ ಕೆಲಸ ಮಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಮೆದುಳಿನ ಕಾರ್ಯವು ಸಕ್ರಿಯಗೊಳ್ಳುತ್ತದೆ. ಈ ಸಮಯದಲ್ಲಿ ನಿತ್ಯವೂ ಏಳುವುದರಿಂದ ಉಲ್ಲಸಿತರಾಗಿ ಕೆಲಸ ಮಾಡಬಹುದು ಅಂತಾರೆ ವಿಜ್ಞಾನಿಗಳು.