ಮಂಗಳೂರು: ನಗರದ ಅಧಿದೇವತೆ ಶ್ರೀ ಮಂಗಳಾದೇವಿ ಸಾವಿರಾರು ಚೆಂಡು ಮಲ್ಲಿಗೆಯ ಪುಷ್ಪರಾಶಿಗಳ ಮೆತ್ತನೆಯ ಶಯ್ಯೆಯಲ್ಲಿ ಮಲಗಿ ಸುಖನಿದ್ರೆಗೆ ಜಾರಿದಳು. ಸೋಮವಾರ ರಾತ್ರಿ ದೇವಸ್ಥಾನದಲ್ಲಿ ದೇವಿಗೆ ಶಯನೋತ್ಸವದ ಸಂಭ್ರಮ ನೆರವೇರಿತು.
ಸಂಜೆಯಾಗುತ್ತಲೇ ದೇವಿಯ ಶಯನಕ್ಕೆಂದು ಚೆಂಡು, ಅಟ್ಟೆಗಳಂತೆ ಮಲ್ಲಿಗೆ ಹೂಗಳನ್ನು ಭಕ್ತರು ಹರಕೆ ರೂಪದಲ್ಲಿ ನೀಡಲಾರಂಭಿಸಿದ್ದರು. ಹೀಗೆ ಹರಕೆಯ ರೂಪದಲ್ಲಿ ಸಾವಿರಾರು ಮಲ್ಲಿಗೆ ಚೆಂಡುಗಳು ಅರ್ಪಣೆಯಾದಲು. ದೇವಾಲಯ ಪೂರ್ತಿ ಮಲ್ಲಿಗೆಯ ಗಮ್ಮನೆಯ ಸುವಾಸನೆ ಬೀರುತ್ತಿತ್ತು.
ಕಟೀಲು, ಬಪ್ಪನಾಡು ದೇವಾಲಯಗಳಂತೆ ಮಂಗಳಾದೇವಿಯಲ್ಲೂ ಜಾತ್ರಾಮಹೋತ್ಸವದ ಕೊನೆಗೆ ಶಯನೋತ್ಸವಕ್ಕೆ ವಿಶೇಷ ಮಹತ್ವವಿದೆ. ಶಯನೋತ್ಸವ ಎಂದರೆ ಮಲಗುವುದು ಎಂದರ್ಥ. ರಥೋತ್ಸವದ ಬಳಿಕ ದೇವಿಗೆ ಶಯನೋತ್ಸವದ ಸಂಭ್ರಮ ಜರುಗಿದೆ.
ನಡುರಾತ್ರಿಯಾಗುತ್ತಿದ್ದಂತೆ ಮಹಾಪೂಜೆ ನೆರವೇರಿಸಿ ಭಕ್ತರು ಹರಕೆ ರೂಪದಲ್ಲಿ ತಂದಿರುವ ಮಲ್ಲಿಗೆಯನ್ನು ಗರ್ಭಗುಡಿಯೊಳಗೆ ದೇವಿಯ ಬಿಂಬ, ಉತ್ಸವ ಮೂರ್ತಿ, ಪಾಣಿಪೀಠ ಹಾಗೂ ಸಂಪೂರ್ಣ ಗರ್ಭಗುಡಿಯನ್ನೇ ಆವರಿಸುವಂತೆ ಅಲಂಕರಿಸಲಾಯಿತು. ಹೀಗೆ ದೇವಿ ಮಲ್ಲಿಗೆಯ ರಾಶಿಯಲ್ಲಿ ಸುಖನಿದ್ರೆಗೆ ಜಾರುತ್ತಾಳೆ ಎಂಬ ನಂಬಿಕೆಯಿದೆ. ಬಳಿಕ ಕವಾಟ ಬಂಧನ ಮಾಡುತ್ತಾರೆ. ಅಂದರೆ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.
ಇಂದು ಬೆಳಗ್ಗೆ 6.30 ಸುಮಾರಿಗೆ ಕವಾಟೋದ್ಘಾಟನೆ ನಡೆದು ಅಂದರೆ ಗರ್ಭಗುಡಿ ಬಾಗಿಲು ತೆರೆದು ದೇವಿಗೆ ಮಹಾಪೂಜೆ ನೆರವೇರಿತು. ಆ ಬಳಿಕ ಅಷ್ಟಾವಧಾನ ಸೇವೆಯೊಂದಿಗೆ ದೇವಿಯ ಬಲಿ ಹೊರಟು, ದೇವಾಲಯದ ಒಳ ಹಾಗೂ ಹೊರ ಆವರಣಕ್ಕೆ ಶಯನದ ಹೂಗಳ ಸಂಪ್ರೋಕ್ಷಣೆ ನಡೆಯಿತು. ಆ ಬಳಿಕ ಭಕ್ತಾದಿಗಳಿಗೆ ಶಯನದ ಹೂಗಳನ್ನು ಪ್ರಸಾದರೂಪವಾಗಿ ನೀಡಲಾಯಿತು. ಭಕ್ತರು ತಾಯಿ ಮಂಗಳಾದೇವಿಯ ದರ್ಶನ ಪಡೆದು ಪುನೀತರಾದರು.
ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ 117ನೇ ಜನ್ಮದಿನಾಚರಣೆ: ಶ್ರೀಗಳ ಗದ್ದುಗೆಗೆ ವಿವಿಧ ಹಣ್ಣುಗಳಿಂದ ಅಲಂಕಾರ - Shivakumar Swamiji