Kasapuram Anjaneya Swamy Temple History : ಆಂಧ್ರಪ್ರದೇಶದ ಅತಿದೊಡ್ಡ ಹನುಮಾನ್ ದೇವಾಲಯವಾದ ನೆಟ್ಟಿ ಕಂಟಿ ಆಂಜನೇಯಸ್ವಾಮಿ ದೇವಾಲಯವು ಅನಂತಪುರ ಜಿಲ್ಲೆಯ ಗುಂತಕಲ್ಲು ಪಟ್ಟಣದ ಕಸಪುರಂ ಗ್ರಾಮದಲ್ಲಿದೆ. ಈ ದೇವರ ದರ್ಶನಕ್ಕೆ ತೆಲುಗು ರಾಜ್ಯ ಮಾತ್ರವಲ್ಲದೆ ನೆರೆಯ ತೆಲಂಗಾಣ, ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ದೇವಾಲಯದ ಇತಿಹಾಸ: ಕಸಪುರಂ ನೆಟ್ಟಿ ಕಂಟಿ ದೇವಸ್ಥಾನದ ಇತಿಹಾಸವನ್ನು ಗಮನಿಸಿದರೆ ಕ್ರಿ.ಶ.1521ರ ಸುಮಾರಿಗೆ ಶ್ರೀ ವ್ಯಾಸರಾಯರು ತುಂಗಭದ್ರಾ ನದಿಯ ದಡದಲ್ಲಿ ಪ್ರತಿನಿತ್ಯ ಧ್ಯಾನ ಮಾಡುತ್ತಿದ್ದರು. ಹಾಗೆ ಧ್ಯಾನಿಸುತ್ತಿರುವಾಗ ತಾವು ಧರಿಸಿದ್ದ ಶ್ರೀಗಂಧದಿಂದ ಶ್ರೀ ಆಂಜನೇಯ ಸ್ವಾಮಿಯ ರೂಪವನ್ನು ಕಲ್ಲಿನ ಮೇಲೆ ಚಿತ್ರಿಸುತ್ತಿದ್ದರು. ಪ್ರತಿ ಬಾರಿ ವ್ಯಾಸರಾಯರು ಚಿತ್ರಿಸಿದಾಗ ಹನುಮಂತನು ತನ್ನ ನಿಜರೂಪವನ್ನು ಧರಿಸಿ ಅಲ್ಲಿಂದ ಹೊರಟು ಹೋಗುತ್ತಿದ್ದ. ಇದನ್ನು ಗಮನಿಸಿದ ವ್ಯಾಸರಾಯರು ಹನುಮಂತನ ಶಕ್ತಿಯನ್ನು ಬೇರೆಡೆಗೆ ಹೋಗದಂತೆ, ಸ್ವಾಮಿಯ ದ್ವಾದಶ ನಾಮಗಳ ಬೀಜಾಕ್ಷರಗಳಿಂದ ಯಂತ್ರವನ್ನು ರಚಿಸಿ, ಅದರಲ್ಲಿ ಶ್ರೀ ಆಂಜನೇಯ ಸ್ವಾಮಿ ಅವರ ನಿಜ ರೂಪವನ್ನು ಚಿತ್ರಿಸಿದ್ದರು. ಅದರಿಂದಾಗಿ ಸ್ವಾಮಿ ಆ ಯಂತ್ರದಲ್ಲಿ ಸಿಕ್ಕಿಹಾಕಿಕೊಂಡು ಅದರಲ್ಲೇ ಉಳಿದರು ಎಂಬ ಮಾತುಗಳು ಇಲ್ಲಿನ ಭಕ್ತರದ್ದು.
ವ್ಯಾಸರಾಯರ ಕನಸು ನನಸು:ಒಂದು ದಿನ ವ್ಯಾಸರಾಯರು ಈಗ ಕರ್ನೂಲು ಎಂದು ಕರೆಯಲ್ಪಡುವ ಚಿಪ್ಪಗಿರಿ ತಾಲೂಕಿನಲ್ಲಿರುವ ಶ್ರೀ ಭೋಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಮಲಗಿದ್ದಾಗ, ಆಂಜನೇಯ ಸ್ವಾಮಿ ಅವರ ಕನಸಿನಲ್ಲಿ ಬಂದು ನಾನು ನಿರ್ದಿಷ್ಟ ಪ್ರದೇಶದಲ್ಲಿ ಇದ್ದೇನೆ, ನನಗೆ ದೇವಸ್ಥಾನವನ್ನು ನಿರ್ಮಿಸಿ ಎಂದು ಹೇಳಿದ್ದರಂತೆ. ಆದರೆ ಆ ಪ್ರದೇಶ ಎಲ್ಲಿದೆ ಎಂದು ಹೇಳಲು ವ್ಯಾಸರಾಯರು ಕೇಳಿದಾಗ ಸ್ವಾಮಿ ಹೀಗೆಂದರು! ಇಲ್ಲಿಂದ ದಕ್ಷಿಣಕ್ಕೆ ಹೋದರೆ ಒಣ ಬೇವಿನ ಮರ ಕಾಣಿಸುತ್ತದೆ, ಯಾವಾಗ ನೀವು ಆ ಮರದ ಬಳಿ ಹೋಗುತ್ತಿರಾ ಆಗ ಮರ ಚಿಗುರುತ್ತದೆ. ಅಲ್ಲಿ ಅಗೆದರೆ ನಾನು ಇರುತ್ತೇನೆ ಎಂದು ಹೇಳಿ ಸ್ವಾಮಿ ಕಣ್ಮರೆಯಾಗುತ್ತಾರಂತೆ.
ಒಂದು ಕಣ್ಣಿನ ಆಂಜನೇಯಸ್ವಾಮಿ ದರ್ಶನ:ವ್ಯಾಸರಾಯರು ಬಹಳ ಸಂತೋಷದಿಂದ ಮರುದಿನ ಬೆಳಗ್ಗೆ ಬೇಗನೆ ಎದ್ದು ದಕ್ಷಿಣ ಕಡೆ ಪ್ರಯಾಣಿಸಿದರು. ಅಂತಿಮವಾಗಿ ಒಣಗಿದ ಬೇವಿನ ಮರವನ್ನು ಕಂಡುಕೊಂಡರು. ಆ ಮರವನ್ನು ತಲುಪಿದಾಗ ಮರವು ಚಿಗುರಿತು. ಅದನ್ನು ಕಂಡು ಅಚ್ಚರಿಗೊಂಡ ವ್ಯಾಸರಾಯರು ಕೂಡಲೇ ಅಲ್ಲಿ ಭೂಮಿಯನ್ನು ಅಗೆದು ಉತ್ಖನನ ನಡೆಸಿದಾಗ ಆಂಜನೇಯ ಸ್ವಾಮಿಯ ಒಂದು ಕಣ್ಣಿನ ಮೂರ್ತಿಯ ದರ್ಶನವಾಯಿತು. ವ್ಯಾಸರಾಯರು ಅತ್ಯಂತ ಭಕ್ತಿಯಿಂದ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದರು. ಅಂದಿನಿಂದ ಸ್ವಾಮಿಯನ್ನು ನೆಟ್ಟಿಕಂಟಿ ಆಂಜನೇಯ ಸ್ವಾಮಿಯಾಗಿ ಪ್ರತಿಷ್ಠಾಪಿಸಿ ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಆರಂಭಿಸಲಾಯ್ತು ಎಂಬುದು ಐತಿಹ್ಯ.