ಭಾರತ ಮತ್ತು ಚೀನಾದ ಮಧ್ಯೆ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಉಭಯ ರಾಷ್ಟ್ರಗಳ ನಡುವಿನ ಗಡಿವಿವಾದ ಬಗೆಹರಿದಿಲ್ಲ. ಜೊತೆಗೆ ಎರಡು ಮಹತ್ವಾಕಾಂಕ್ಷಿ ರಾಷ್ಟ್ರಗಳ ನಡುವಿನ ಸ್ಪರ್ಧೆಯು ಮತ್ತಷ್ಟು ಹೆಚ್ಚಿದೆ. ಹೀಗಾಗಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಸಾಂಪ್ರದಾಯಿಕವಾಗಿ ಶುಭಾಶಯಗಳನ್ನೂ ಕೋರಿಲ್ಲ. ಇದು ಭಾರತದ ಮೇಲೆ ಚೀನಾದ ಅಸಂತುಷ್ಟ ಭಾವವನ್ನು ತೋರಿಸುತ್ತದೆ.
ಕೆಲ ದಿನಗಳ ಹಿಂದೆ ಕಝಾಕಿಸ್ತಾನದ ಅಸ್ತಾನಾದಲ್ಲಿ ನಡೆದ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯಿ ಭೇಟಿಯಾಗಿದ್ದರು. ಮಾತುಕತೆಯ ಬಳಿಕ ಕೊನೆಯಲ್ಲಿ ಇಬ್ಬರೂ ಜಂಟಿ ಹೇಳಿಕೆ ನೀಡುತ್ತಾರೆ ಎಂಬ ನಿರೀಕ್ಷೆ ಎಂದಿನಂತೆ ಹುಸಿಯಾಯಿತು. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಮೂರನೇ ಅವಧಿಯ ಮೋದಿ ಸರ್ಕಾರದಲ್ಲಿನ ಮೊದಲ ಸಭೆಯು ಕೆಲವು ಸಕಾರಾತ್ಮಕ ಫಲಿತಾಂಶವನ್ನು ಉಂಟುಮಾಡುತ್ತದೆ ಎಂಬ ಭರವಸೆ ಇತ್ತು.
ಉಭಯ ರಾಷ್ಟ್ರಗಳ ಸಂವಾದದ ಬಳಿಕ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ವಿದೇಶಾಂಗ ಸಚಿವ ಜೈಶಂಕರ್ ಅವರು, ‘ಗಡಿ ಪ್ರದೇಶಗಳಲ್ಲಿ ಉಳಿದಿರುವ ಸಮಸ್ಯೆಗಳ ಶೀಘ್ರ ಪರಿಹಾರದ ಕುರಿತು ಚರ್ಚಿಸಲಾಗಿದೆ. ರಾಜತಾಂತ್ರಿಕತೆ ಮತ್ತು ಸೇನಾ ಪಡೆಗಳ ಮೂಲಕ ಸಮಸ್ಯೆ ಪರಿಹಾರ ಯತ್ನಗಳನ್ನು ನಡೆಸಲಾಗುವುದು. ಎರಡು ರಾಷ್ಟ್ರಗಳ ನಡುವಿನ ಗಡಿಯನ್ನು ಗೌರವಿಸುವುದು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವುದು ಅತ್ಯಗತ್ಯ. ಪರಸ್ಪರ ಗೌರವ, ಸಂವೇದನಾಶೀಲತೆ ಮತ್ತು ಹಿತಾಸಕ್ತಿಯನ್ನು ಕಾಪಾಡುವುದು ದ್ವಿಪಕ್ಷೀಯ ಸಂಬಂಧಗಳಿಗೆ ಸಹಕಾರಿ ಎಂದು ಹೇಳಿದ್ದರು.
ವಿದೇಶಾಂಗ ಇಲಾಖೆಯು ಹೇಳಿಕೆ ಬಿಡುಗಡೆ ಮಾಡಿ, "ಗಡಿ ಪ್ರದೇಶಗಳಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವುದು ಎರಡೂ ಕಡೆಯ ಹಿತಾಸಕ್ತಿಯಲ್ಲ ಎಂದು ಇಬ್ಬರು ಸಚಿವರು ಒಪ್ಪಿಕೊಂಡಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಗೌರವಿಸಬೇಕು. ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕು" ಎಂದು ಹೇಳಿತ್ತು.
ಆದರೆ, ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಾಮ್ಯತೆ ಇರಲಿಲ್ಲ. ಚೀನಾ ರಾಯಭಾರ ಕಚೇರಿ ಹೇಳಿಕೆ ಪ್ರಕಾರ, 'ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ದೃಷ್ಟಿಕೋನದಿಂದ ನೋಡಬೇಕು. ಸಂವಹನವನ್ನು ಬಲಪಡಿಸಬೇಕು. ಚೀನಾ-ಭಾರತ ಸಂಬಂಧಗಳ ಉತ್ತಮ ಮತ್ತು ಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಭಿನ್ನಾಭಿಪ್ರಾಯಗಳನ್ನು ನಿರ್ವಹಿಸಬೇಕು. ಎರಡೂ ಕಡೆಯವರು ಸಕಾರಾತ್ಮಕ ಚಿಂತನೆಗೆ ಬದ್ಧರಾಗಿರಬೇಕು. ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಬೇಕು ಎಂದಿತ್ತು.
ಗಡಿ ಸಮಸ್ಯೆ ಬಗ್ಗೆ ಮೋದಿ ಹೇಳಿದ್ದಿಷ್ಟು:18ನೇ ಲೋಕಸಭೆ ಚುನಾವಣಾ ಪೂರ್ವದಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಡಿ ಬಿಕ್ಕಟ್ಟನ್ನು ಪರಿಹರಿಸುವ ಬಗ್ಗೆ ಮೋದಿ ಸುಳಿವು ನೀಡಿದ್ದರು. "ನಮ್ಮ ಗಡಿಯಲ್ಲಿನ ದೀರ್ಘಕಾಲದ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ದ್ವಿಪಕ್ಷೀಯ ಸಂವಹನವನ್ನು ಹೆಚ್ಚಿಸಬೇಕು. ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಧನಾತ್ಮಕ ಮತ್ತು ರಚನಾತ್ಮಕ ದ್ವಿಪಕ್ಷೀಯ ಮಾತುಕತೆ ನಡೆಸಬೇಕು. ನಮ್ಮ ಗಡಿಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ" ಎಂದಿದ್ದರು.
ಪ್ರಧಾನಿ ಮೋದಿ ಮೂರನೇ ಬಾರಿಗೆ ಪುನರಾಯ್ಕೆಯಾದ ನಂತರ ಚೀನಾದ ಸರ್ಕಾರಿ ಪತ್ರಿಕೆಯಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯು ಭಾರತ-ಚೀನಾ ಸಂಬಂಧಗಳನ್ನು ಒಳಗೊಂಡ ಸಂಪಾದಕೀಯ ಪ್ರಕಟಿಸಿತು. ಎಲ್‌ಎಸಿ ವಿವಾದವು ಇತ್ತೀಚಿನ ವಿಷಯವಲ್ಲ, ದಶಕಗಳಿಂದಲೂ ಅಸ್ತಿತ್ವದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಭಾರತವು ದೇಶೀಯ ನೀತಿಗಳ ಮೇಲೆ ನಿಗ್ರಹ ಸೇರಿದಂತೆ ಚೀನಾ ವಿರೋಧಿ ಕ್ರಮಗಳನ್ನು ತೆಗೆದುಕೊಂಡಿದೆ. ಅರ್ಥಾತ್ ಚೀನೀ ಕಂಪನಿಗಳ ಮೇಲೆ ನಿರ್ಬಂಧ, ವೀಸಾ ಅಮಾನತಿನಂತಹ ಕ್ರಮಗಳು ಋಣಾತ್ಮಕ ಮನೋಭಾವವನ್ನು ತೋರಿಸುತ್ತದೆ ಎಂದು ಪ್ರಸ್ತಾಪಿಸಿತ್ತು.