ಕರ್ನಾಟಕ

karnataka

ETV Bharat / opinion

ಬೈಲಿ ಸೇತುವೆ ಎಂದರೇನು? ಇದರ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು? - Bailey Bridge

ಕೇರಳದಂತಹ ದುರಂತ ಸ್ಥಳದಲ್ಲಿ 'ಬೈಲಿ' ಸೇತುವೆ ಅವಶ್ಯಕ. ತುರ್ತು ಸಮಯದಲ್ಲಿ ಈ ಸೇತುವೆಯನ್ನು ಹೆಚ್ಚಾಗಿ ಉಪಯೋಗ ಮಾಡಲಾಗುತ್ತದೆ. ವಿಪತ್ತು ಸಮಯದಲ್ಲಿ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಇದನ್ನು ನಿರ್ಮಿಸಲಾಗುತ್ತದೆ. ಕಬ್ಬಿಣ ಅಥವಾ ಮರದ ಬಿಡಿ ಭಾಗಗಳನ್ನು ಜೋಡಿಸುತ್ತ ಈ ಸೇತುವೆ ನಿರ್ಮಾಣ ಮಾಡಬಹುದು. ಅದು ಅತ್ಯಂತ ಕಡಿಮೆ ಅವಧಿಯಲ್ಲಿ! ಇದು ತಾತ್ಕಾಲಿಕ ಸೇತುವೆಯಾಗಿದ್ದು, ಈ ಬೈಲಿ ಸೇತುವೆ ಮೂಲಕ ಸಣ್ಣ ವಾಹನ ಸಹಿತ ಭಾರವನ್ನು ಸಾಗಿಸಬಹುದಾಗಿದೆ.

BAILEY BRIDGE
ವಯನಾಡಿನಲ್ಲಿ ಭಾರತೀಯ ಸೇನೆ ನಿರ್ಮಿಸಿದ ಬೈಲಿ ಸೇತುವೆ (AP)

By ETV Bharat Karnataka Team

Published : Aug 3, 2024, 6:17 PM IST

ಕೇರಳದ ಭೂಕುಸಿತ ಪೀಡಿತ ವಯನಾಡ್​ನಲ್ಲಿ ಭಾರತೀಯ ಸೇನೆಯು ತನ್ನ ಇಂಜಿನಿಯರ್ ಘಟಕದ ನೆರವಿನೊಂದಿಗೆ ಒಂದೇ ಒಂದು ದಿನದಲ್ಲಿ ಚೂರಲ್ಮಲಾ ಮತ್ತು ಮುಂಡಕೈಗೆ ಸಂಪರ್ಕ ಕಲ್ಪಿಸುವ 'ಬೈಲಿ' ಎಂಬ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ಹೆಚ್ಚಿನ ಜನರ ಪ್ರಾಣ ರಕ್ಷಣೆ ಮಾಡಿದೆ. ಒಂದು ದಿನದಲ್ಲಿ 'ಬೈಲಿ' ಸೇತುವೆ ನಿರ್ಮಿಸಬಹುದಾ? ಅದು ಹೇಗಿರುತ್ತದೆ? ಎಷ್ಟು ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ? ಬೈಲಿ ಬ್ರಿಡ್ಜ್ ಅಂದ್ರೆ ಏನು? ಇದರ ಇತಿಹಾಸ ಮತ್ತು ಇದನ್ನು ಮೊದಲು ಯಾರು ಪರಿಚಯ ಮಾಡಿಕೊಟ್ಟರು? ಇದರ ಉದಯ ಹೇಗೆ ಮತ್ತು ಯಾವಾಗ ಆಯಿತು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ವಯನಾಡಿನಲ್ಲಿ ಭಾರತೀಯ ಸೇನೆ ನಿರ್ಮಿಸಿದ ಬೈಲಿ ಸೇತುವೆ (AP)

ಬೈಲಿ ಬ್ರಿಡ್ಜ್ ಅಂದ್ರೆ ಏನು: ಬೈಲಿ ಸೇತುವೆಯು ಒಂದು ರೀತಿಯ ಪೋರ್ಟಬಲ್, ಪೂರ್ವ-ನಿರ್ಮಿತ, ಟ್ರಸ್ ಸೇತುವೆಯಾಗಿದ್ದು ಇದನ್ನು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಹೆಚ್ಚಾಗಿ ಬಳಸಲಾಯಿತು. ಟ್ಯಾಂಕ್‌ಗಳು ಮತ್ತು ಇತರ ಮಿಲಿಟರಿ ವಾಹನಗಳಂತಹ ಭಾರವಾದ ಹೊರೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ತಾತ್ಕಾಲಿಕ ಸೇತುವೆ ಇದಾಗಿದೆ. ನುರಿತ ಮಿಲಿಟರಿ ಎಂಜಿನಿಯರಿಂಗ್ ಘಟಕ ಆಗ ತಕ್ಷಣಕ್ಕೆ ಸಿದ್ಧಪಡಿಸಿ ಹಲವು ಅನುಕೂಲತೆಗೆ ಸಾಕ್ಷಿಯಾಗುತ್ತಿತ್ತು. ಇದರ ವಿನ್ಯಾಸಗೊಳಿಸುವ ಸಂಪೂರ್ಣ ಹೊಣೆಯು ತನ್ನದೇಯಾಗಿತ್ತು. ಬೈಲಿ ಸೇತುವೆಯು ಯಾವುದೇ ವಿಶೇಷ ಉಪಕರಣಗಳಿಲ್ಲದೇ, ತಕ್ಷಣಕ್ಕೆ ಬೇಕಾದಾಗ ಮತ್ತು ತುರ್ತು ಸಮಯದಲ್ಲಿ ತೀರಾ ಸರಳ ಮಾರ್ಗ ಇದಾಗಿದ್ದರಿಂದ ಎರಡನೇ ಮಹಾಯುದ್ಧದ ಸಮಯದಿಂದ ಹಿಡಿದು ಈಗಿನ ವಯನಾಡ್​ ಭೂಕುಸಿತವರೆಗೂ ಇದರ ವರ್ಚಸ್ಸು ಕಡಿಕೆಯಾಗಿಲ್ಲ.

ಕೇರಳದ ಭೂಕುಸಿತ ಪೀಡಿತ ವಯನಾಡ್ (AP)

'ಬೈಲಿ' ಹೆಸರು ಬಂದಿದ್ದು ಹೀಗೆ: 'ಬೈಲಿ' ಸೇತುವೆಯನ್ನು ಬ್ರಿಟಿಷ್ ಯುದ್ಧ ಕಚೇರಿಯಲ್ಲಿ ನಾಗರಿಕ ಸೇವಕ ಸರ್ ಡೊನಾಲ್ಡ್ ಕೋಲ್ಮನ್ ಬೈಲಿ ಕಂಡುಹಿಡಿದಿದ್ದಾರೆ ಎಂದು ಹೇಳಲಾಗುತ್ತದೆ. ಬೈಲಿ ಒಬ್ಬ ಇಂಜಿನಿಯರ್ ಆಗಿದ್ದು, ಅಂದಿನ ಯುದ್ಧ ವಲಯಗಳಲ್ಲಿ ಭಾರವಾದ ಹೊರೆಗಳನ್ನು ಸಾಗಿಸುವ ಸರಳ ಮತ್ತು ತ್ವರಿತ ಸೇತುವೆಯಾಗಿ ಇದನ್ನು ವಿನ್ಯಾಸಗೊಳಿಸಲಾಯಿತು. ಆರಂಭದಲ್ಲಿ ಕೈಗೂಡದಿದ್ದರೆ ಸತತ ಪ್ರಯತ್ನದಿಂದ ಇದು ಆಗಿನ ಕಾಲಘಟ್ಟದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿತು. ಸೇತುವೆಗಳು ಸಂದಿಗ್ಧ ಮತ್ತು ವಿವಿಧ ಸನ್ನಿವೇಶಗಳಲ್ಲಿ ಅಗತ್ಯವೆಂದು ತಿಳಿದ ಬಳಿಕ ಈ ಸರಳ ಸೇತುವೆಗೆ 'ಬೈಲಿ' ಅಂತ ಹೆಸರು ಇಡಲಾಯಿತು.

ಮೊದಲ ಬಾರಿ ಬಳಕೆ:ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲದೇ ಸರಳವಾಗಿ ಮತ್ತು ತ್ವರಿತವಾಗಿ ನಿರ್ಮಾಣ ಮಾಡಲಾಗುವ 'ಬೈಲಿ' ಸೇತುವೆಯನ್ನು ಆಗ ನೈಸರ್ಗಿಕ ವಿಕೋಪಗಳು, ದೊಡ್ಡ ದೊಡ್ಡ ನಿರ್ಮಾಣ ಯೋಜನೆಗಳು ಮತ್ತು ರಕ್ಷಣಾ ಪಡೆಗಳ ಚಲನೆಯ ಸಮಯದಲ್ಲಿ ಬಳಕೆ ಮಾಡಲು ಪ್ರಾರಂಭಿಸಲಾಯಿತು. 1942ರ ವಿಶ್ವ ಸಮರದಲ್ಲಿ ಉತ್ತರ ಆಫ್ರಿಕಾದ ಕಾರ್ಯಾಚರಣೆಯಲ್ಲಿ ಬ್ರಿಟಿಷ್ ಸೇನೆಯು ಮೊದಲ ಬಾರಿ ಈ 'ಬೈಲಿ' ಸೇತುವೆಯನ್ನು ಬಳಸಿತು. ಅವರು ಆಗ ಹೆಚ್ಚು ಪರಿಣಾಮಕಾರಿ ಅನ್ನಿಸಿತು. ಮಿತ್ರ ಪಡೆಗಳಿಂದ ವ್ಯಾಪಕವಾದ ಅಳವಡಿಕೆಗೂ ಕಾರಣವಾಯಿತು. ಬ್ರಿಟನ್‌ನ ದಿವಂಗತ ಫೀಲ್ಡ್ ಮಾರ್ಷಲ್ ವಿಸ್ಕೌಂಟ್ ಬರ್ನಾರ್ಡ್ ಮಾಂಟ್ಗೊಮೆರಿ ಎಂಬುವರು "ಬೈಲಿ ಸೇತುವೆ ಇಲ್ಲದೆಯೇ ನಾವು ಯುದ್ಧವನ್ನು ಗೆಲ್ಲುತ್ತಿರಲಿಲ್ಲ" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಮುಂದೆ ಇದರ ಉಪಯೋಗ ಮತ್ತು ಬಳಿಸಿಕೊಂಡಿದ್ದು ಇತಿಹಾಸ.

ವಯನಾಡಿನಲ್ಲಿ ಭಾರತೀಯ ಸೇನೆ ನಿರ್ಮಿಸಿದ ಬೈಲಿ ಸೇತುವೆ (AP)

'ಬೈಲಿ' ಸೇತುವೆಯ ಉಪಯೋಗ: ಪೂರ್ವನಿರ್ಮಿತ ಪ್ಯಾನೆಲ್‌ಗಳನ್ನು ವಿಭಾಗಗಳಾಗಿ ಜೋಡಿಸುವುದರೊಂದಿಗೆ ಅವುಗಳನ್ನು ಸೇತುವೆಯ ವ್ಯಾಪ್ತಿಯನ್ನು ರೂಪಿಸಲು ಸಂಪರ್ಕಿಸಲಾಗುತ್ತದೆ. ಸೇತುವೆಗಳು ಮಾಡ್ಯುಲರ್ ಸ್ಟೀಲ್ ಪ್ಯಾನೆಲ್‌ಗಳಿಂದ ಮಾಡಲ್ಪಟ್ಟಿದ್ದರಿಂದ ಇವುಗಳನ್ನು ಮಾನವಶಕ್ತಿಯನ್ನು ಬಳಸಿ ಸುಲಭವಾಗಿ ಸಾಗಿಸಬಹುದು ಮತ್ತು ಜೋಡಿಸಬಹುದು. ಅವುಗಳ ಮಾಡ್ಯುಲಾರಿಟಿ, ಪೋರ್ಟಬಿಲಿಟಿ, ಅಧಿಕ ಸಾಮರ್ಥ್ಯ ಒಳಗೊಂಡಿರುವುದರಿಂದ ಹತ್ತಾರು ಜನ ಇರುವ ಚಿಕ್ಕದಾದ ತಂಡದಿಂದ ತ್ವರಿತವಾಗಿ ಜೋಡಣೆ ಮಾಡಿ ಸೇತುವೆಯಾಗಿ ಮಾಡಬಹದು. ಟ್ರಕ್‌, ಲಾರಿ, ಭಾರೀ ವಾಹನ ಸೇರಿದಂತೆ ಹೆಲಿಕಾಪ್ಟರ್‌ಗಳನ್ನು ಬಳಸಿಯೂ ಇವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ಭಾರತದಲ್ಲಿ, 'ಬೈಲಿ' ಸೇತುವೆಗಳು ದೂರದ ಮತ್ತು ಸಂದಿಗ್ಧ ಸ್ಥಳ ಸಂಪರ್ಕಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.

ವಿಶೇಷವಾಗಿ ಹಿಮಾಲಯ ಪ್ರದೇಶ ಮತ್ತು ಲಡಾಖ್​ಗಳಂತಹ ಪ್ರದೇಶದಲ್ಲಿ ಇದರ ಅವಶ್ಯಕತೆ ಅಧಿಕ. ಪ್ರವಾಹ, ಭೂಕುಸಿತಗಳಂತಹ ನೈಸರ್ಗಿಕ ವಿಪತ್ತುಗಳ ನಂತರ ಸಂಪರ್ಕವನ್ನು ಪುನಃಸ್ಥಾಪಿಸಲು ಈ ಸೇತುವೆಗಳನ್ನು ಆಗಾಗ್ಗೆ ಬಳಸಲಾಗುತ್ತದೆ. ಗಡಿ ಪ್ರದೇಶಗಳಲ್ಲಿ, ಈ ಸೇತುವೆಗಳು ಸೇನಾ ಪಡೆ ಮತ್ತು ಸರಬರಾಜುಗಳ ಚಲನೆಗೆ ಸಹಕಾರಿಯಾಗಿದೆ. ದೂರದ ರಮಣೀಯ ಸ್ಥಳಗಳ ಸಂಪರ್ಕಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಪ್ರವಾಸೋದ್ಯಮವನ್ನು ಸಹ ಬೈಲಿ ಸೇತುವೆಗಳು ಸುಗಮಗೊಳಿಸಿವೆ. ಇದೇ ರೀತಿಯ ಹತ್ತಾರು ಸಂದಿಗ್ಧ ಸಮಯದಲ್ಲಿ ಬೈಲಿ ಸೇತುವೆ ನಿರ್ಮಿಸಿ ತಾತ್ಕಾಲಿಕ ಸಂಪರ್ಕ ಸಾಧಿಸುವುದು ಇತ್ತೀಚೆಗೆ ಹೆಚ್ಚಾಗಿದೆ.

ವಯನಾಡಿನಲ್ಲಿ ಭಾರತೀಯ ಸೇನೆ ನಿರ್ಮಿಸಿದ ಬೈಲಿ ಸೇತುವೆ (AP)

ಕೇರಳದ ಮೊದಲ ಬೈಲಿ ಸೇತುವೆ:ಬೈಲಿ ಸೇತುವೆಯನ್ನು ನಿರ್ಮಿಸುತ್ತಿರುವುದು ಇದೇ ಮೊದಲಲ್ಲ. 1996ರಲ್ಲಿ ಕೇರಳದ ಪಂಪಾ ನದಿಯಲ್ಲಿ ಅಸ್ತಿತ್ವದಲ್ಲಿದ್ದ ಸೇತುವೆಯೊಂದು ಹಾನಿಗೊಳಗಾಯಿತು. ಬಳಿಕ ಪಂಪಾ ನದಿಯ ಮೇಲಿನ ರಾನ್ನಿ ಎಂಬ ಪ್ರದೇಶದಲ್ಲಿ ನಿರ್ಮಿಸಲಾದ ಮೊದಲ ಬೈಲಿಯನ್ನು ಸೇನೆಯು ಐದು ದಿನಗಳಲ್ಲಿ ಪೂರ್ಣಗೊಳಿಸಿ ಸೈ ಅನ್ನಿಸಿಕೊಂಡಿತು. ಅದೇ ವರ್ಷದಲ್ಲಿ ವಲಿಯಪಾಲಂ ಸೇತುವೆಯು ಕುಸಿದು, ಪಂಪಾ ನದಿಯ ಎರಡೂ ಬದಿಯಲ್ಲಿರುವ ಪಥನಂತಿಟ್ಟದ ರನ್ನಿ ಪಟ್ಟಣವನ್ನು ವಿಭಜಿಸಿತು. ಎರಡು ವರ್ಷಗಳ ಕಾಲ, ಸೈನ್ಯವು ನಿರ್ಮಿಸಿದ ಬೈಲಿ ಸೇತುವೆಯನ್ನು ಬಳಸಿಕೊಂಡು ಹತ್ತಾರು ಜನರನ್ನು ನದಿಗೆ ಅಡ್ಡಲಾಗಿ ಸಾಗಿಸಲಾಯಿತು. ರಾನ್ನಿಯಲ್ಲಿರುವ ಈ ಸೇತುವೆ ಕೇರಳದ ಮೊದಲ ಬೈಲಿ ಸೇತುವೆಯಾಗಿದೆ. 1996ರ ನವೆಂಬರ್ 8ರಂದು ಅಂದಿನ ಮುಖ್ಯಮಂತ್ರಿ ಇ.ಕೆ. ನಾಯನಾರ್ ಈ ಸೇತುವೆಯನ್ನು ಉದ್ಘಾಟಿಸಿದರು.

2011ರಲ್ಲಿಯೂ ಶಬರಿಮಲೆಯಲ್ಲಿ ಬೈಲಿ ಸೇತುವೆಯನ್ನು ಸ್ಥಾಪಿಸಲಾಯಿತು. ಇದು ಸನ್ನಿಧಾನಂ-ಚಂದ್ರನಂದನ್ ರಸ್ತೆಯನ್ನು ಸಂಪರ್ಕಿಸುತ್ತದೆ. ಶಬರಿಮಲೆಯಲ್ಲಿರುವ ಯಾತ್ರಾರ್ಥಿಗಳು ಇಂದಿಗೂ ಬೆಟ್ಟದ ದೇಗುಲಕ್ಕೆ ಚಾರಣ ಮಾಡುವ ಮೂಲಕ ಇದನ್ನು ಬಳಸುತ್ತಾರೆ.

2017ರಲ್ಲಿ ಏನಾತು-ಕೊಟ್ಟಾರಕ್ಕರದೊಂದಿಗೆ ಸಂಪರ್ಕ ಮಾಡುವ ಬೈಲಿ ಸೇತುವೆಯನ್ನು ನಿರ್ಮಾಣ ಮಾಡಲಾಯುತು. ಪಥನಂತಿಟ್ಟದ ಏನಾತು ಎಂಬಲ್ಲಿ ಕಲ್ಲಡಾ ನದಿಗೆ ಅಡ್ಡಲಾಗಿ ಸಾಗಣೆಗಾಗಿ ಸೇತುವೆಯನ್ನು ಸೇನೆಯು ನಿರ್ಮಿಸಿದೆ. 50 ಸೈನಿಕರ ತಂಡ ಕಲ್ಲಡ ನದಿಗೆ ಅಡ್ಡಲಾಗಿ ಕೇವಲ 36 ಗಂಟೆಗಳಲ್ಲಿ ಈ ಸೇತುವೆ ನಿರ್ಮಿಸಿತು. 54.50 ಮೀ ಉದ್ದದ ಈ ಸೇತುವೆಯನ್ನು ಅಸ್ತಿತ್ವದಲ್ಲಿರುವ ಸೇತುವೆ ನಂತರ ನಿರ್ಮಿಸಲಾಗಿದೆ. ಸೇತುವೆಯು ಅದರ ಮಧ್ಯದ ಕಂಬಗಳು ಮುಳುಗಿದ ಕಾರಣ ಸುರಕ್ಷಿತವಾಗಿಲ್ಲ. ಹಾಗಾಗಿ ಸೆಪ್ಟೆಂಬರ್ 2017ರಲ್ಲಿ ಈ ಸೇತುವೆಯನ್ನು ಕಿತ್ತುಹಾಕಲಾಯಿತು.

ಇತ್ತೀಚಿನ ಬೈಲಿ ಸೇತುವೆ: ಮುಂಬೈನ ಸಬರ್ಬನ್ ರೈಲು ನಿಲ್ದಾಣದ ಬಳಿಯ ಕಾಲ್ತುಳಿತದಲ್ಲಿ ಭಾರೀ ಸಾವು-ನೋವುಗಳಾದ ನಂತರ, ಸೆಪ್ಟೆಂಬರ್ 2017 ರಂದು ಸೇನೆಯು ಹೊಸ ಫುಟ್ ಓವರ್‌ಬ್ರಿಡ್ಜ್ (ಎಫ್‌ಒಬಿ-ಕಾಲು ಸೇತುವೆ) ಅನ್ನು ನಿರ್ಮಿಸಿ ಸಾರ್ವಜನಿಕರಿಗೆ ನೀಡಿತು. 29 ಸೆಪ್ಟೆಂಬರ್ 2017 ರಂದು ಬೆಳಗ್ಗೆ ಜನದಟ್ಟಣೆಯ ಸಮಯದಲ್ಲಿ ಕಿರಿದಾದ ಬ್ರಿಡ್ಜ್​ನ ಕಾಲ್ತುಳಿತದಲ್ಲಿ 23 ಜನರು ಸಾವನ್ನಪ್ಪಿದ್ದರು.

2023ರ ಸಿಕ್ಕಿಂ ಪ್ರವಾಹ: 10.10.2023ರಲ್ಲಿ ಹಠಾತ್ ಪ್ರವಾಹದಿಂದ ಧ್ವಂಸಗೊಂಡ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಒಂಬತ್ತು 'ಬೈಲಿ' ಸೇತುವೆಗಳ ನಿರ್ಮಾಣಕ್ಕೆ ಸಿಕ್ಕೀಂ ಸರ್ಕಾರ ಅನುಮೋದನೆ ನೀಡಿದೆ. ತ್ರಿಶಕ್ತಿ ಕಾರ್ಪ್ಸ್‌ನ ಆರ್ಮಿ ಇಂಜಿನಿಯರ್‌ಗಳು ಈ ಸೇತುಗಳ ನಿರ್ಮಾಣದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ವಯನಾಡ್ ಭೂಕುಸಿತ; 22 ಮಕ್ಕಳು ಸೇರಿ 243 ಮಂದಿ ಸಾವು; ರಕ್ಷಣಾ ಕಾರ್ಯಕ್ಕೆ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸಿದ ಸೇನೆ - Wayanad landslides

ABOUT THE AUTHOR

...view details