ದೇಶವೊಂದರ ನಾಗರಿಕರು ತಮ್ಮನ್ನು ಆಳುತ್ತಿರುವ ಸರ್ಕಾರಗಳನ್ನು ಪ್ರಶ್ನಿಸುವ ಸಾಮರ್ಥ್ಯ ಹೊಂದಿರುವುದು ಆ ದೇಶವು ದೃಢವಾದ ಪ್ರಜಾಪ್ರಭುತ್ವ ಆಡಳಿತವನ್ನು ಹೊಂದಿರುವುದರ ಪ್ರಮುಖ ಸಂಕೇತವಾಗಿದೆ. ಹಾಗೆಯೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಸರ್ಕಾರಗಳನ್ನು ನಿಯಂತ್ರಣದಲ್ಲಿಡುವ ಅತ್ಯಂತ ಸ್ಪಷ್ಟ ಗುರುತುಗಳಾಗಿವೆ. ಆದರೆ ಸರ್ಕಾರವೊಂದು ಅಸ್ತಿತ್ವದಲ್ಲಿರುವಾಗ, ಮತ್ತೊಂದು ಚುನಾವಣೆಯು ಬರುವವರೆಗೆ ಆ ಸರ್ಕಾರದ ಉತ್ತರದಾಯಿತ್ವವನ್ನು ಖಚಿತಪಡಿಸಲು ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ನಾಗರಿಕರ ಮಾಹಿತಿ ಹಕ್ಕು ಕಾಯ್ದೆಯು ಅಂಥ ಒಂದು ಮಹತ್ವದ ಸಾಧನವಾಗಿದೆ.
2005 ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ ('ಆರ್ ಟಿಐ ಕಾಯ್ದೆ')ಯ ಮೂಲಕ ಈ ಹಕ್ಕನ್ನು ಜಾರಿಗೊಳಿಸುವಲ್ಲಿ ಭಾರತದ ಅನುಭವವು ಮಿಶ್ರವಾಗಿದೆ. ಈ ಕಾನೂನಿನಿಂದ ಹಲವಾರು ಪ್ರಮುಖ ಪ್ರಮುಖ ಬದಲಾವಣೆಗಳು ಕಂಡು ಬಂದಿದ್ದರೂ, ವರ್ಷಗಳು ಕಳೆದಂತೆ ಈ ಕಾನೂನು ತನ್ನ ಕಠಿಣತೆಯನ್ನು ಕಳೆದುಕೊಂಡಿರುವಂತೆ ಕಾಣಿಸುತ್ತಿದೆ.
ಮಾಹಿತಿ ಹಕ್ಕು ಕಾಯ್ದೆ ಆಂದೋಲನದ ಆರಂಭ: ಮಾಹಿತಿ ಹಕ್ಕಿನ ಚಳವಳಿಯ ಇತಿಹಾಸವು ಈ ಕಾನೂನು ಜಾರಿಗೆ ಬರುವುದಕ್ಕಿಂತ ಕೆಲ ವರ್ಷಗಳ ಹಿಂದಕ್ಕೆ ಹೋಗುತ್ತದೆ. 1994 ರಲ್ಲಿ ರಾಜಸ್ಥಾನದಲ್ಲಿ ಪ್ರಾರಂಭವಾದ ಜನಾಂದೋಲನವಾದ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ ('ಎಂಕೆಎಸ್ಎಸ್') ಯನ್ನು ಈ ಚಳುವಳಿಯ ಆರಂಭಿಕ ಹೆಜ್ಜೆಗಳಲ್ಲಿ ಒಂದನ್ನಾಗಿ ಗುರುತಿಸಲಾಗಿದೆ.
ಪ್ರಮುಖ ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್ ನೇತೃತ್ವದ ಎಂಕೆಎಸ್ಎಸ್, ಹಳ್ಳಿಗಳಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆಗೆ ಒತ್ತಾಯಿಸಿದ ರೈತರ ಮತ್ತು ಕಾರ್ಮಿಕರ ಆಂದೋಲನವಾಗಿತ್ತು ಮತ್ತು ಅಂತಿಮವಾಗಿ ಆಡಳಿತದ ಕೆಳಮಟ್ಟದಲ್ಲಿನ ಭ್ರಷ್ಟಾಚಾರದ ಘಟನೆಗಳನ್ನು ಬಹಿರಂಗಪಡಿಸಿತು. ಮಾಹಿತಿ ಹಕ್ಕಿಗಾಗಿ ಹೋರಾಡಲು ಸಂಘಟನೆಯು ಜನ ಸುನ್ವಾಯಿಗಳು ಅಥವಾ ಸಾರ್ವಜನಿಕ ವಿಚಾರಣೆಗಳು ಎಂಬ ವಿಧಾನಗಳನ್ನು ಜಾಣ್ಮೆಯಿಂದ ಬಳಸಿತು.
ಎಂಕೆಎಸ್ಎಸ್ ಬಿತ್ತಿದ ಬೀಜಗಳು ಅಂತಿಮವಾಗಿ 1996 ರಲ್ಲಿ ಜನರ ಮಾಹಿತಿ ಹಕ್ಕಿನ ರಾಷ್ಟ್ರೀಯ ಅಭಿಯಾನಕ್ಕೆ ('ಎನ್ಸಿಪಿಆರ್ಐ') ಜನ್ಮ ನೀಡಿತು. ಈ ಅಭಿಯಾನವು ಎಂಕೆಎಸ್ಎಸ್ಗೆ ಬೆಂಬಲದ ಸಂಘಟನೆಯಾಗಿ ಕಾರ್ಯನಿರ್ವಹಿಸಿತು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಜಾರಿಗಾಗಿ ಪ್ರತಿಪಾದಿಸಿತು.
ಪ್ರಮುಖ ಮಾಧ್ಯಮ ವ್ಯಕ್ತಿಗಳು, ಅಧಿಕಾರಿಗಳು ಮತ್ತು ಬಾರ್ ಮತ್ತು ನ್ಯಾಯಾಂಗದ ಸದಸ್ಯರ ನೇತೃತ್ವದಲ್ಲಿ, ಎನ್ಸಿಪಿಆರ್ಐ ಇತರ ನಾಗರಿಕ ಸಮಾಜ ಚಳವಳಿಗಳು ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದೊಂದಿಗೆ ಕರಡು ಮಾಹಿತಿ ಹಕ್ಕು ಮಸೂದೆಯನ್ನು ಭಾರತ ಸರ್ಕಾರಕ್ಕೆ ಕಳುಹಿಸಿತು. "ದಿ ಪ್ರೆಸ್ ಕೌನ್ಸಿಲ್ - ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಗ್ರಾಮೀಣಾಭಿವೃದ್ಧಿ ಮಾಹಿತಿ ಸ್ವಾತಂತ್ರ್ಯ ಕಾಯ್ದೆ, 1997" (The Press Council – National Institute of Rural Development Freedom of Information Act, 1997) ಎಂದು ಹೆಸರಿಸಲಾದ ಈ ಮಸೂದೆಯ ಕರಡನ್ನು ಸಿದ್ಧಪಡಿಸುವಲ್ಲಿ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಮತ್ತು ಆಗಿನ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ನ್ಯಾಯಮೂರ್ತಿ ಪಿ.ಬಿ. ಸಾವಂತ್ ನಿರ್ಣಾಯಕ ಪಾತ್ರ ವಹಿಸಿದರು.
2005 ರ ಆರ್ಟಿಯ ಕಾಯ್ದೆ ನಡೆದು ಬಂದ ಸುದೀರ್ಘ ಹಾದಿ:ಕೇಂದ್ರ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಅಂಗೀಕರಿಸುವ ಮುನ್ನವೇ ಹಲವಾರು ರಾಜ್ಯಗಳು ಅಂಥ ಕಾನೂನುಗಳನ್ನು ಅಂಗೀಕರಿಸುವಲ್ಲಿ ಮುಂದಾಳತ್ವ ವಹಿಸಿವೆ. ತಮಿಳುನಾಡು 1997 ರಲ್ಲಿ ಮಾಹಿತಿ ಹಕ್ಕು ಕಾನೂನನ್ನು ಅಂಗೀಕರಿಸಿದ ಮೊದಲ ಭಾರತೀಯ ರಾಜ್ಯವಾಯಿತು. ಕೇವಲ 7 ಸೆಕ್ಷನ್ಗಳನ್ನು ಹೊಂದಿದ್ದ, ಸಂಕ್ಷಿಪ್ತವಾದ 1997ರ ತಮಿಳುನಾಡು ಮಾಹಿತಿ ಹಕ್ಕು ಕಾಯ್ದೆಯು ರಕ್ಷಣೆ, ಅಂತರರಾಷ್ಟ್ರೀಯ ಸಂಬಂಧಗಳು, ಸಚಿವರು ಮತ್ತು ರಾಜ್ಯಪಾಲರ ನಡುವಿನ ಗೌಪ್ಯ ಸಂವಹನದಂತಹ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸದಂತೆ ಆ ಮಾಹಿತಿಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡಿತು.
ಗೋವಾ 1997 ರಲ್ಲಿ ಮಾಹಿತಿ ಹಕ್ಕಿನ ಕಾನೂನನ್ನು ಜಾರಿಗೆ ತಂದರೆ, ಮಧ್ಯಪ್ರದೇಶ ರಾಜ್ಯ ಸರ್ಕಾರವು ಈ ಹಕ್ಕನ್ನು ಜಾರಿಗೆ ತರಲು ಹಲವಾರು ಸರ್ಕಾರಿ ಇಲಾಖೆಗಳಿಗೆ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಿತು. ಭಾರತದ ಸರ್ವೋಚ್ಚ ನ್ಯಾಯಾಲಯವು ಕೂಡ ಪ್ರಗತಿಪರ ತೀರ್ಪುಗಳೊಂದಿಗೆ, ವಿಶೇಷವಾಗಿ ಮತದಾರರ ಹಕ್ಕುಗಳ ಕಾಯ್ದೆಯ ಜಾರಿಗೆ ಒತ್ತು ನೀಡಿತು.
ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ದಾಖಲೆಗಳು, ಆಸ್ತಿಗಳು, ಸಾಲಗಳು ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ದೆಹಲಿ ಹೈಕೋರ್ಟ್ನಲ್ಲಿ ದಾವೆ ಹೂಡಿತ್ತು.
ಈ ವಿಷಯವು ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವನ್ನು ತಲುಪಿತು. ಇದರ ಪರಿಣಾಮವಾಗಿ ಯೂನಿಯನ್ ಆಫ್ ಇಂಡಿಯಾ ವರ್ಸಸ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕರಣದ ವಿಚಾರಣೆಯ (ಕೇಸ್ ಸಂಖ್ಯೆ (2002) 5 SCC 294)) ಸಂದರ್ಭದಲ್ಲಿ ಅತ್ಯಂತ ಮಹತ್ವದ ತೀರ್ಪು ಹೊರಬಂದಿತು. ಸಂವಿಧಾನದ 19 (1) (ಎ) ವಿಧಿಯಡಿ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳುವ ಮತದಾರರ ಹಕ್ಕು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
ಅಭ್ಯರ್ಥಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಮೊದ್ದಮೆಗಳು, ಹೊಂದಿರುವ ಆಸ್ತಿಗಳು, ಸಾಲಗಳು ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಬಹಿರಂಗಪಡಿಸುವುದು ಸೇರಿದಂತೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ನಿರ್ದೇಶನಗಳನ್ನು ಹೊರಡಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ನ್ಯಾಯಾಲಯ ತೀರ್ಪು ನೀಡಿತು.
ಏತನ್ಮಧ್ಯೆ, 2000 ರಲ್ಲಿ ಸಂಸತ್ತಿನಲ್ಲಿ ಮಾಹಿತಿ ಸ್ವಾತಂತ್ರ್ಯ ಹಕ್ಕು ಮಸೂದೆಯನ್ನು ಪರಿಚಯಿಸಲಾಯಿತು. ಇದು ಎನ್ಸಿಪಿಆರ್ಐ ಮತ್ತು ಪಿಸಿಐ ಗಳು ಸಿದ್ಧಪಡಿಸಿದ ಕರಡಿನ ಅತ್ಯಂತ ದುರ್ಬಲವಾದ ಆವೃತ್ತಿಯಾಗಿತ್ತು. ಹೀಗಾಗಿ ಎನ್ಸಿಪಿಆರ್ಐ ಈ ಕರಡನ್ನು ತಿದ್ದುಪಡಿ ಮಾಡುವುದು ಅನಿವಾರ್ಯವಾಯಿತು ಮತ್ತು ಅಂತಿಮವಾಗಿ ಈ ತಿದ್ದುಪಡಿಗಳನ್ನು ಈಗ ರದ್ದುಪಡಿಸಲಾದ ರಾಷ್ಟ್ರೀಯ ಸಲಹಾ ಮಂಡಳಿಗೆ ಸಲ್ಲಿಸಲಾಯಿತು.
ಅಂತಿಮವಾಗಿ ಯುಪಿಎ ಸರ್ಕಾರವು 23 ಡಿಸೆಂಬರ್ 2004 ರಂದು ಮಾಹಿತಿ ಹಕ್ಕು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತು. ಸಂಸತ್ತಿನಲ್ಲಿ ಮಂಡಿಸಲಾದ ಈ ಕರಡು ಆವೃತ್ತಿಯು ಕೇಂದ್ರ ಸರ್ಕಾರಕ್ಕೆ ಮಾತ್ರ ಅನ್ವಯಿಸುವಂತೆ ಇದ್ದುದರಿಂದ ಇದು ತೀವ್ರ ಟೀಕೆಗೆ ಒಳಗಾಯಿತು. ಎನ್ಸಿಪಿಆರ್ಐ ಮತ್ತು ಇತರ ಚಳುವಳಿಗಳ ಮಧ್ಯಪ್ರವೇಶದ ನಂತರ, ಈ ಕಾಯ್ದೆಯನ್ನು ರಾಜ್ಯ ಸರ್ಕಾರಗಳು ಮತ್ತು ಇತರ ಸರ್ಕಾರಿ ಪ್ರಾಧಿಕಾರಗಳಿಗೂ ಅನ್ವಯಿಸಲಾಯಿತು. ಅಂತಿಮವಾಗಿ 12 ಅಕ್ಟೋಬರ್ 2005 ರಿಂದ ಮಸೂದೆಯು ಕಾನೂನಾಗಿ ಜಾರಿಗೆ ಬಂದಿತು.
ಮಾಹಿತಿ ಹಕ್ಕು ಕಾಯ್ದೆಯ ಪ್ರಯೋಜನಗಳು: ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 19 ನೇ ವಿಧಿಯನ್ನು ಸುಪ್ರೀಂ ಕೋರ್ಟ್ ಪದೇ ಪದೆ ಎತ್ತಿ ಹಿಡಿದಿದೆ. ಆರ್ಟಿಐ ಕಾಯ್ದೆ, 2005 ಈ ಹಕ್ಕಿಗೆ ಪ್ರಾಯೋಗಿಕ ಪರಿಣಾಮವನ್ನು ನೀಡುತ್ತದೆ ಮತ್ತು ಸಾರ್ವಜನಿಕ ಅಧಿಕಾರಿಗಳ ನಿಯಂತ್ರಣದಲ್ಲಿರುವ ಮಾಹಿತಿಯು ನಾಗರಿಕರಿಗೆ ಲಭ್ಯವಾಗುವ ಅವಕಾಶ ನೀಡುತ್ತದೆ.
ಈ ಕಾಯ್ದೆಯು "ಮಾಹಿತಿ" ಮತ್ತು "ಸಾರ್ವಜನಿಕ ಪ್ರಾಧಿಕಾರ" ಎಂಬ ಎರಡೂ ಪದಗಳನ್ನು ವಿಶಾಲವಾಗಿ ವ್ಯಾಖ್ಯಾನಿಸುತ್ತದೆ. ದಾಖಲೆಗಳು, ಕಡತಗಳು, ಮೆಮೊಗಳು, ಇ-ಮೇಲ್ ಗಳು, ಅಭಿಪ್ರಾಯಗಳು, ಸಲಹೆ, ಪತ್ರಿಕಾ ಪ್ರಕಟಣೆಗಳು, ಸುತ್ತೋಲೆಗಳು, ಆದೇಶಗಳು, ಲಾಗ್ ಬುಕ್ ಗಳು, ಒಪ್ಪಂದಗಳು, ವರದಿಗಳು, ಕಾಗದಗಳು ಮತ್ತು ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಇರುವ ಡೇಟಾ ಸಾಮಗ್ರಿ ಸೇರಿದಂತೆ ಯಾವುದೇ ರೂಪದಲ್ಲಿನ ಯಾವುದೇ ವಿಷಯವನ್ನು ಸೇರಿಸಲು ಮಾಹಿತಿಯನ್ನು ವ್ಯಾಖ್ಯಾನಿಸಲಾಗಿದೆ. ಸಾರ್ವಜನಿಕ ಪ್ರಾಧಿಕಾರವೊಂದು ಕಾನೂನುಬದ್ಧವಾಗಿ ಪಡೆಯಬಹುದಾದ ಯಾವುದೇ ಖಾಸಗಿ ಸಂಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಇದು ಒಳಗೊಂಡಿದೆ.
ಸಾರ್ವಜನಿಕ ಪ್ರಾಧಿಕಾರ ಎಂದರೆ ಸಂವಿಧಾನದ ಅಡಿಯಲ್ಲಿ ಅಥವಾ ಕಾನೂನು ಅಥವಾ ಕಾರ್ಯನಿರ್ವಾಹಕ ಅಧಿಸೂಚನೆಯ ಮೂಲಕ ಸ್ಥಾಪಿಸಲಾದ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆಯಾಗಿದೆ. ಈ ಪದವು ಸರ್ಕಾರದಿಂದ ಗಣನೀಯವಾಗಿ ಹಣಕಾಸು ಪಡೆಯುವ ಯಾವುದೇ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆಯನ್ನು ಸಹ ಒಳಗೊಂಡಿದೆ (ನೇರ ಅಥವಾ ಪರೋಕ್ಷ ನಿಧಿಗಳ ಮೂಲಕ).
ಆರ್ಟಿಐ ಕಾಯ್ದೆಯ ನಿಬಂಧನೆಗಳು ಸಮಾಜಕ್ಕೆ ಉಪಯುಕ್ತವಾಗಿರುವುದು ಸತ್ಯ. ಹಲವಾರು ಉನ್ನತ ಮಟ್ಟದ ಭ್ರಷ್ಟಾಚಾರದ ಪ್ರಕರಣಗಳನ್ನು ಈ ಕಾಯ್ದೆಯ ಮೂಲಕ ಹೊರಗೆಳೆಯಲು ಸಾಧ್ಯವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಆದರ್ಶ್ ಹೌಸಿಂಗ್ ಸೊಸೈಟಿ ಹಗರಣಗಳನ್ನು ಬಹಿರಂಗಪಡಿಸುವಲ್ಲಿ ಮೇಧಾ ಪಾಟ್ಕರ್ ನೇತೃತ್ವದ ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ ಮೆಂಟ್ ಪ್ರಮುಖ ಪಾತ್ರ ವಹಿಸಿತು.
ಆರ್ಟಿಐ ಅರ್ಜಿಗಳನ್ನು ಸಲ್ಲಿಸುವ ಮೂಲಕ ಮತ್ತು ರಕ್ಷಣಾ ಇಲಾಖೆ, ಮಹಾರಾಷ್ಟ್ರ ಸರ್ಕಾರ ಮತ್ತು ಇತರ ರಾಜ್ಯ ಪ್ರಾಧಿಕಾರಗಳಿಗೆ ದೂರುಗಳನ್ನು ಸಲ್ಲಿಸುವ ಮೂಲಕ ಈ ಭ್ರಷ್ಟಾಚಾರದ ಮಾಹಿತಿಗಳನ್ನು ಪಡೆಯಲಾಯಿತು. ಹಾಗೆಯೇ ಹೌಸಿಂಗ್ ಅಂಡ್ ಲ್ಯಾಂಡ್ ರೈಟ್ಸ್ ನೆಟ್ ವರ್ಕ್ ಎಂಬ ಲಾಭರಹಿತ ಸಂಸ್ಥೆ ಸಲ್ಲಿಸಿದ ಆರ್ಟಿಐ ಅರ್ಜಿಯು 2010 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಅಕ್ರಮವನ್ನು ಬಹಿರಂಗಪಡಿಸಲು ಕಾರಣವಾಯಿತು.
ಆರ್ಟಿಐ ಕಾಯ್ದೆ ಎದುರಿಸಿದ ಹಿನ್ನಡೆಗಳು: ಆದಾಗ್ಯೂ ಇದೇ ಸಮಯದಲ್ಲಿ ಆರ್ಟಿಐ ಕಾಯ್ದೆಗೆ ಕೆಲ ಹಿನ್ನಡೆಗಳು ಕೂಡ ಉಂಟಾಗಿವೆ. ಆರ್ಟಿಐ ಅರ್ಜಿಗಳಿಗೆ ತೃಪ್ತಿಕರವಲ್ಲದ ಪ್ರತಿಕ್ರಿಯೆಗಳ ವಿರುದ್ಧ ಮೇಲ್ಮನವಿಗಳ ವಿಚಾರಣೆ ನಡೆಸುವ ಮಾಹಿತಿ ಆಯುಕ್ತರು ತಮ್ಮ ಹುದ್ದೆಯಲ್ಲಿ ಎಷ್ಟು ಕಾಲ ಸೇವೆ ಸಲ್ಲಿಸಬಹುದು ಎಂಬುದನ್ನು ನಿರ್ಧರಿಸುವ ಏಕಪಕ್ಷೀಯ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲು 2019 ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಗೆ ಮೊದಲು ಮಾಹಿತಿ ಆಯುಕ್ತರು 65 ವರ್ಷ ವಯಸ್ಸಿನವರೆಗೆ ಅಥವಾ ಐದು ವರ್ಷಗಳ ನಿಗದಿತ ಅಧಿಕಾರಾವಧಿಯನ್ನು ಹೊಂದಿದ್ದರು. ಆದರೆ ಕಾಯ್ದೆಗೆ ತಿದ್ದುಪಡಿ ತಂದಿರುವುದು ಮಾಹಿತಿ ಆಯುಕ್ತರ ಕಚೇರಿಗಳ ಸ್ವಾತಂತ್ರ್ಯದ ಹರಣವಾಗಿದೆ.
ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವಿಲ್ಲದ ಸಂದರ್ಭಗಳಲ್ಲಿ ಸರ್ಕಾರವು ನಾಗರಿಕರ ವೈಯಕ್ತಿಕ ಡೇಟಾ ಬಹಿರಂಗಪಡಿಸುವುದನ್ನು ಆರ್ಟಿಐ ಕಾಯ್ದೆ ನಿಷೇಧಿಸುತ್ತದೆ. ಡಿಪಿಡಿಪಿ ಕಾಯ್ದೆಯು ಈ ನಿಷೇಧವನ್ನು ಸಂಪೂರ್ಣ ನಿಷೇಧವಾಗಿ ತಿದ್ದುಪಡಿ ಮಾಡಿದೆ. ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದರ ಮೇಲಿನ ಈ ನಿಷೇಧವನ್ನು ಸಾರ್ವಜನಿಕ ಅಧಿಕಾರಿಗಳು ಬಹಿರಂಗಪಡಿಸಲು ನಿರಾಕರಿಸಲು ಮತ್ತು ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಬಳಸಬಹುದು ಎಂದು ಎನ್ಸಿಪಿಆರ್ಐ ಸೇರಿದಂತೆ ಆರ್ಟಿಐ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ಟಿಐ ಕಾಯ್ದೆಯ ಮುಂದಿನ ದಾರಿಯೇನು?:ಕೆಲವು ಶಾಸನಾತ್ಮಕ ಮಧ್ಯಪ್ರವೇಶಗಳ ಮೂಲಕ ಆರ್ಟಿಐ ಕಾಯ್ದೆಯ ರೆಕ್ಕೆಗಳನ್ನು ಕತ್ತರಿಸಲಾಗಿದ್ದರೂ, ಈ ಕಾನೂನು ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಇದು ಕೆಳಮಟ್ಟದ ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಮತ್ತು ಉನ್ನತ ಮಟ್ಟದ ಹಗರಣಗಳನ್ನು ಅನಾವರಣಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಆರ್ಟಿಐ ಕಾಯ್ದೆಯು ನಾಗರಿಕರ ಕೈಯಲ್ಲಿ ಪ್ರಬಲ ಸಾಧನವಾಗಿದೆ ಮತ್ತು ಇದನ್ನು ಉತ್ತಮವಾಗಿ ಬಳಸಿದಾಗ, ಆಡಳಿತದಲ್ಲಿ ಹೆಚ್ಚು ಅಗತ್ಯವಾದ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಬಹುದು. ಆರ್ಟಿಐ ಕಾಯ್ದೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲವಾಗುತ್ತದೆ ಮತ್ತು ಭಾರತದಲ್ಲಿ ಉತ್ತಮ ಆಡಳಿತಕ್ಕಾಗಿ ಕೊಡುಗೆ ನೀಡಲಿದೆ ಎಂಬುದು ನಾಗರಿಕರ ಆಶಯವಾಗಿದೆ.
ಲೇಖಕರ ಬಗ್ಗೆ : ಈ ಅಂಕಣದ ಲೇಖಕಿ ರಿತ್ವಿಕಾ ಶರ್ಮಾ ಅವರು ನವದೆಹಲಿಯ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಸ್ಥೆಯಲ್ಲಿ ಚರಖಾ ಹೆಸರಿನ ಸಾಂವಿಧಾನಿಕ ಕಾನೂನು ವಿಭಾಗದ ನೇತೃತ್ವ ವಹಿಸಿದ್ದಾರೆ. ಸದ್ಯ ಅವರು ಸಂಸದೀಯ ಪ್ರಜಾಪ್ರಭುತ್ವ, ಚುನಾವಣಾ ಕ್ಷೇತ್ರಗಳ ಡಿಲಿಮಿಟೇಶನ್ ಮತ್ತು ಚುನಾವಣಾ ಸುಧಾರಣೆಯ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ತಮ್ಮ ಸಂಶೋಧನೆಗಳಿಗಾಗಿ ಸಹಾಯ ಮಾಡುತ್ತಿರುವ ಗುರು ಗೋವಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಐದನೇ ವರ್ಷದ ವಿದ್ಯಾರ್ಥಿನಿ ಶ್ರೀಮತಿ ಶಾಂಜಲಿ ಗುಪ್ತಾ ಅವರಿಗೆ ರಿತ್ವಿಕಾ ಶರ್ಮಾ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ : ತೈವಾನ್ ಸುತ್ತ ಸಮರಾಭ್ಯಾಸ: ಚೀನಾದ ಉದ್ದೇಶವೇನು? ಯುದ್ಧದ ಸಾಧ್ಯತೆಗಳೆಷ್ಟು? - China Threatening Taiwan