ರಷ್ಯಾ - ಉಕ್ರೇನ್ ಯುದ್ಧವು ದೂರದ ಏಷ್ಯಾದಲ್ಲಿ ಅಂಥ ಪರಿಣಾಮ ಬೀರದಿದ್ದರೂ ಯುರೋಪ್ನಲ್ಲಿ ನಿರ್ಣಾಯಕ ಹಂತದಲ್ಲಿದೆ. ಅತ್ಯಂತ ಕನಿಷ್ಠ ಯಶಸ್ಸು ಸಿಕ್ಕಿದ್ದರೂ ರಷ್ಯಾದ ಪಡೆಗಳು ಉಕ್ರೇನ್ನ ಅತ್ಯಂತ ಪ್ರಮುಖ ನಗರವಾದ ಖಾರ್ಕಿವ್ ಕಡೆಗೆ ಸಾಗುತ್ತಿವೆ. ಯುದ್ಧಭೂಮಿಯಲ್ಲಿನ ಕಾರ್ಯತಂತ್ರಗಳು ಕ್ರಮೇಣವಾಗಿ ಬದಲಾಗುತ್ತಿದ್ದು, ರಷ್ಯಾ ಉಕ್ರೇನ್ನ ಪೂರ್ವ ಭಾಗದಲ್ಲಿ ಅಧಿಪತ್ಯ ಸ್ಥಾಪಿಸಬಹುದು. ಮತ್ತೊಂದೆಡೆ, ಏಪ್ರಿಲ್ನಲ್ಲಿ ಯುಎಸ್ ಕಾಂಗ್ರೆಸ್ ಉಕ್ರೇನ್ಗೆ 60 ಬಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಪೂರೈಸಲು ಅನುಮೋದನೆ ನೀಡಿರುವುದರಿಂದ ಉಕ್ರೇನ್ಗೆ ಪಾಶ್ಚಿಮಾತ್ಯ ದೇಶಗಳ ಶಸ್ತ್ರಾಸ್ತ್ರಗಳು ಮತ್ತಷ್ಟು ಬಲ ತುಂಬಬಹುದು. ಆದಾಗ್ಯೂ ಸದ್ಯದ ಪರಿಸ್ಥಿತಿಯಲ್ಲಿ ಯುದ್ಧವು ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲವಾದ್ದರಿಂದ ವಿಶ್ವದ ರಾಷ್ಟ್ರಗಳು ಯುದ್ಧದಿಂದ ತಮ್ಮ ಮೇಲೆ ಯಾವ ಪರಿಣಾಮವಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿವೆ.
ರಷ್ಯಾ - ಉಕ್ರೇನ್ ಯುದ್ಧವು ಮುಂದುವರಿದಂತೆ ಭಾರತದ ಮೇಲೆ ಜಾಗತಿಕ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಭಾರತವನ್ನು ಸಂಭಾವ್ಯ ಮಧ್ಯವರ್ತಿಯಾಗಿ ನೋಡುವುದರಿಂದ ಹಿಡಿದು ಉಕ್ರೇನ್ ಮತ್ತು ರಷ್ಯಾ ಎರಡರಲ್ಲೂ ಹಿತಾಸಕ್ತಿಗಳನ್ನು ಹೊಂದಿರುವ ದೇಶವಾಗಿ ಭಾರತ ಗುರುತಿಸಿಕೊಳ್ಳುತ್ತಿದೆ. ಯುದ್ಧವು ದೀರ್ಘವಾಗುತ್ತಿದ್ದಂತೆ ಈ ನಿರೀಕ್ಷೆಗಳು ಮತ್ತೆ ಕಾಣಿಸಿಕೊಂಡಿವೆ. ಮುಖ್ಯವಾಗಿ ಜೂನ್ 15-16 ರಂದು ಸ್ವಿಟ್ಜರ್ಲೆಂಡ್ನಲ್ಲಿ ನಡೆಯಲಿರುವ ಮುಂಬರುವ ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ಭಾರತದ ಭಾಗವಹಿಸುವಿಕೆ ಮತ್ತು ಅದು ವಹಿಸಬಹುದಾದ ಪಾತ್ರದ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.
ರಷ್ಯಾ - ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉದ್ಭವಿಸಿದ ಪರಿಸ್ಥಿತಿಗಳನ್ನು ಭಾರತವು ಹೆಚ್ಚು ಕಷ್ಟವಿಲ್ಲದೇ ಎದುರಿಸುತ್ತಿರುವಂತೆ ಕಾಣಿಸುತ್ತಿದೆ. ಆದರೆ ಭಾರತದ ಮುಂದಿರುವ ಸೂಪ್ತ ಸವಾಲುಗಳು ಯಾವುವು ಮತ್ತು ಭೌಗೋಳಿಕವಾಗಿ ಬಹಳ ದೂರದಲ್ಲಿ ನಡೆಯುತ್ತಿರುವ ಯುರೋಪಿಯನ್ ಯುದ್ಧವು ಭಾರತದ ಕಾರ್ಯತಂತ್ರದ ಲೆಕ್ಕಾಚಾರದಲ್ಲಿ ಹೇಗೆ ಲಾಭಕರವಾಗಬಹುದು ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಭಾರತ ಮತ್ತು ರಷ್ಯಾ ದೇಶಗಳು 70 ವರ್ಷಗಳ ಸುದೀರ್ಘ ಕಾಲದಿಂದ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿವೆ. ರಕ್ಷಣಾ ಆಮದಿನಿಂದ ಹಿಡಿದು ಕಾರ್ಯತಂತ್ರದ ಪಾಲುದಾರಿಕೆಯವರೆಗೆ ಈ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಆಳವಾಗಿವೆ. ರಕ್ಷಣಾ ಉಪಕರಣಗಳು ಮತ್ತು ನಿರ್ವಹಣೆಗಾಗಿ ಭಾರತವು ರಷ್ಯಾವನ್ನು ಅವಲಂಬಿಸಿರುವುದು ಗಮನಾರ್ಹ. ಆದರೆ, ಜಾಗತಿಕವಾಗಿ ಪರಿಣಾಮ ಬೀರುವಂಥ ವಿಷಯಗಳ ಬಗ್ಗೆ ನಿರ್ಧಾರ ತಳೆಯಲು ಈ ಅಂಶಗಳು ಮಾತ್ರ ಸಾಕಾಗುತ್ತವೆಯೇ ಎಂಬ ಪ್ರಶ್ನೆಯೂ ಇದೆ.
ಈ ಸಂಬಂಧದ ಸೂಕ್ಷ್ಮತೆಗಳನ್ನು ರಕ್ಷಣೆ ಅಥವಾ ಇತಿಹಾಸಕ್ಕೆ ಮಾತ್ರ ಸೀಮಿತಗೊಳಿಸುವುದು ಅಷ್ಟೊಂದು ಸುಲಭವಲ್ಲ. ಮೊದಲನೆಯದಾಗಿ, ಶೀತಲ ಸಮರದ ಯುಗದಿಂದ ದ್ವಿಪಕ್ಷೀಯ ಸಂಬಂಧವು ಗಣನೀಯವಾಗಿ ವಿಕಸನಗೊಂಡಿದೆ. ಎರಡನೆಯದಾಗಿ, ಭಾರತದ ಕಾರ್ಯತಂತ್ರ ಮತ್ತು ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಬದಲಾಗಿದೆ ಮತ್ತು ಅದರ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಪ್ರಭಾವವನ್ನು ಬದಲಾಯಿಸಿದೆ.
ಕಾರ್ಯತಂತ್ರದ ಸ್ವಾಯತ್ತತೆ : ರಷ್ಯಾ - ಉಕ್ರೇನ್ ಯುದ್ಧ ಪ್ರಾರಂಭವಾಗುವ ಮೊದಲು, ಭಾರತವು ಉಕ್ರೇನ್ ಮತ್ತು ರಷ್ಯಾ ಎರಡರೊಂದಿಗೂ ಕ್ರಿಯಾತ್ಮಕ ವ್ಯಾಪಾರ ಸಂಬಂಧಗಳನ್ನು ಹೊಂದಿತ್ತು. ಪ್ರಸ್ತುತ ನಡೆಯುತ್ತಿರುವ ಯುದ್ಧವು ಎರಡೂ ದೇಶಗಳೊಂದಿಗಿನ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸಿದೆ. ಇದು ಭಾರತದ ಇಂಧನ ಮತ್ತು ಆಹಾರ ಭದ್ರತೆ ಮೇಲೆ ಪರಿಣಾಮ ಬೀರಿದೆ. ವಿಶ್ವದ ಬಹುತೇಕ ರಾಷ್ಟ್ರಗಳ ರೀತಿಯಲ್ಲಿಯೇ ಭಾರತವು ಈ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಿದೆ.
ಈಗಿನ ಪರಿಸ್ಥಿತಿಯಲ್ಲಿ ಯಾವ ದೇಶಗಳೂ ಯುದ್ಧಕ್ಕೆ ಮುಂದಾಗಬಾರದು ಎಂಬುದು ಭಾರತದ ನಿಲುವಾಗಿದೆ. ಆದಾಗ್ಯೂ ಯುದ್ಧದ ವಿಷಯದಲ್ಲಿ ಯಾವುದೇ ಒಂದು ದೇಶವನ್ನು ಬೆಂಬಲಿಸುವುದಕ್ಕಿಂತ ಹೆಚ್ಚಾಗಿ ಭಾರತವು ತನ್ನ ಹಿತಾಸಕ್ತಿಯ ಬಗ್ಗೆ ಹೆಚ್ಚಿನ ಒಲವು ಹೊಂದಿದೆ. ಪ್ರಸ್ತುತ ನಡೆಯುತ್ತಿರುವ ರಷ್ಯಾ - ಉಕ್ರೇನ್ ಯುದ್ಧದಲ್ಲಿ ತನ್ನ ಹಿತಾಸಕ್ತಿಗಳ ಬಗ್ಗೆ ಭಾರತದ ವಸ್ತುನಿಷ್ಠ ಮೌಲ್ಯಮಾಪನವು ಮೂರು ಅಂಶಗಳನ್ನು ಆಧರಿಸಿರಬಹುದು: ತನ್ನ ಕಾರ್ಯತಂತ್ರದ ಸ್ವಾಯತ್ತತೆ, ಜಾಗತಿಕ ಕ್ರಮದ ಮಹಾನ್ ಶಕ್ತಿಯ ಪುನರ್ ರಚನೆ ಮತ್ತು ತನ್ನ ಇಂಧನ ಮತ್ತು ರಕ್ಷಣಾ ಅಗತ್ಯಗಳು.
ರಷ್ಯಾ - ಉಕ್ರೇನ್ ಸಂಘರ್ಷದ ಮಧ್ಯೆ ಭಾರತವು ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ. ಈ ನಿಲುವಿಗೆ ಹಲವಾರು ಪ್ರಮುಖ ಅಂಶಗಳು ಕಾರಣವಾಗಿವೆ. ಮೊದಲನೆಯದಾಗಿ, ಐತಿಹಾಸಿಕವಾಗಿ ನೋಡಿದರೆ ಯುರೋಪಿಯನ್ ಖಂಡದ ವಿವಾದಗಳಲ್ಲಿ ಭಾರತವು ನೇರವಾಗಿ ಭಾಗವಹಿಸದಿರುವುದು ಗಮನಾರ್ಹ. ಏಷ್ಯಾದ ಸಂಘರ್ಷಗಳಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಭಾರತ ಹೇಗೆ ಮೆಚ್ಚುವುದಿಲ್ಲವೋ, ಹಾಗೆಯೇ ಅದು ಯುರೋಪಿಯನ್ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಯುರೋಪಿಯನ್ ಖಂಡದ ಇತಿಹಾಸ ಹೊಂದಿದೆ. ಹೀಗಾಗಿ ಇದರಲ್ಲಿ ಭಾರತದ ಪಾತ್ರ ಏನೂ ಇಲ್ಲ.
ರಷ್ಯಾ - ಉಕ್ರೇನ್ ಯುದ್ಧದಲ್ಲಿ ಕಾರ್ಯತಂತ್ರದ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಭಾರತದ ನಿರ್ಧಾರವು ಹಲವಾರು ಕಾರಣಗಳಿಗಾಗಿ ವಿವೇಕಯುತವಾಗಿದೆ. ಮೊದಲನೆಯದಾಗಿ, ಯಾವುದೇ ಒಂದು ದೇಶದ ಪರ ವಹಿಸುವುದು ಭಾರತವನ್ನು ದೂರಗಾಮಿ ಪರಿಣಾಮಗಳೊಂದಿಗೆ ಸಂಘರ್ಷದಲ್ಲಿ ಸಿಲುಕಿಸುವ ಅಪಾಯವಿದೆ. ಮೈತ್ರಿಗಳು ಮತ್ತು ಹಿತಾಸಕ್ತಿಗಳ ಸಂಕೀರ್ಣ ಜಾಲವನ್ನು ಗಮನಿಸಿದರೆ, ತಟಸ್ಥತೆಯು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮತ್ತು ರಾಜತಾಂತ್ರಿಕ ಸ್ಥಾನಮಾನವನ್ನು ರಕ್ಷಿಸುತ್ತದೆ.
ಜಾಗತಿಕ ವ್ಯವಸ್ಥೆಯ ಪುನರ್ ರಚನೆ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಸ್ವರೂಪವು ವಾಸ್ತವದಲ್ಲಿ ಒಂದು ಬೃಹತ್ ಹೋರಾಟವಾಗಿದ್ದು, ಜಗತ್ತನ್ನು ವಿರೋಧಿ ಬಣಗಳಾಗಿ ವಿಭಜಿಸುವ ಅಪಾಯಗಳನ್ನು ಹುಟ್ಟು ಹಾಕಿದೆ. ಒಂದು ಕಡೆ ರಷ್ಯಾ ಮತ್ತು ಮತ್ತೊಂದೆಡೆ ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲ ಪಡೆದಿರುವ ಉಕ್ರೇನ್ ಇರುವುದರಿಂದ, ಫಲಿತಾಂಶವು ದೀರ್ಘಕಾಲೀನ ಪರಿಣಾಮ ಬೀರುವಂಥದ್ದಾಗಿ ಮತ್ತು ಅಪಾಯಕಾರಿಯಾಗಿ ಕಾಣುತ್ತದೆ. ಇದು ವಿಶ್ವದ ಶಕ್ತಿ ಕ್ರಮವನ್ನು ಬದಲಾಯಿಸಬಲ್ಲದು.
ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳಿಂದ ಪಾರಾಗುವಲ್ಲಿ ಭಾರತದ ಹಿತಾಸಕ್ತಿಗಳಿವೆ. ವಿಕಸನಗೊಳ್ಳುತ್ತಿರುವ ಜಾಗತಿಕ ಕ್ರಮವು ಯಾವುದೇ ಒಂದು ಶಕ್ತಿ ಬಣದೊಂದಿಗೆ ಹೊಂದಾಣಿಕೆಯಾಗುವ ಬದಲು ಬಹು-ಜೋಡಣೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಪಕ್ಷಪಾತಿ ನಿಲುವುಗಳಿಂದ ದೂರವಿರುವ ಮೂಲಕ, ಭಾರತವು ತನ್ನ ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳನ್ನು ರಕ್ಷಿಸುವ ಮಧ್ಯೆ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳನ್ನು ಕೂಡ ನಿಭಾಯಿಸಬೇಕಾಗುತ್ತದೆ.