ನವದೆಹಲಿ:ಭಾರತ ಮತ್ತು ಪಾಕಿಸ್ತಾನದ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಉಭಯ ರಾಷ್ಟ್ರಗಳ ನಡುವೆ ಯಾವುದೇ ಸಂಬಂಧಗಳು ಗಟ್ಟಿಯಾಗಿಲ್ಲ. ಈ ಮಧ್ಯೆ ಸಿಂಧು ಜಲ ಒಪ್ಪಂದವೂ (ಐಡಬ್ಲ್ಯುಟಿ) ಒಂದಾಗಿದೆ. ಸಿಂಧು ನದಿ ನೀರು ಹಂಚಿಕೆ ವಿಷಯದ ಬಗ್ಗೆ ಮಾತುಕತೆಗೆ ಪಾಕಿಸ್ತಾನ ಮುಂದಾಗಿದ್ದರೂ, ಭಾರತ ಕೆಲ ನಿಯಮಗಳು ಮತ್ತು ಷರತ್ತುಗಳು ಕೈಬಿಡುವವರೆಗೂ ಮಾತುಕತೆ ಸಾಧ್ಯವಿಲ್ಲ ಎಂದು ಖಡಕ್ಕಾಗಿ ತಿಳಿಸಿದೆ.
ಸಿಂಧು ಜಲ ಒಪ್ಪಂದವು ಕಳೆದ ಹಲವು ದಶಕಗಳಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಪ್ರಮುಖ ಒಪ್ಪಂದವಾಗಿದೆ. ನೀರು ಹಂಚಿಕೆಯ ದ್ವಿಪಕ್ಷೀಯ ಒಪ್ಪಂದಗಳ ಮಾತುಕತೆಗಳು ಇಂದಿನ ಅಗತ್ಯವಾಗಿದೆ. ಪಾಕಿಸ್ತಾನವು ಅದರ ಅನುಷ್ಠಾನಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಭಾರತವು ಸಹ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದರು.
ಏನಿದು ಸಿಂಧು ಜಲ ಒಪ್ಪಂದ?:ಸಿಂಧು ನದಿ ಮತ್ತು ಅದರ ಉಪನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಲು ಸಿಂಧು ಜಲ ಒಪ್ಪಂದವು (ಐಡಬ್ಲ್ಯೂಟಿ) ಭಾರತ ಮತ್ತು ಪಾಕಿಸ್ತಾನದ ನಡುವಿನ ನೀರಿನ ವಿತರಣಾ ಒಪ್ಪಂದವಾಗಿದೆ. 1960 ರಲ್ಲಿ ಕರಾಚಿಯಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನಿ ಅಧ್ಯಕ್ಷ ಅಯೂಬ್ ಖಾನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಒಪ್ಪಂದದಂತೆ ಪೂರ್ವದಿಂದ ಭಾರತದೊಳಕ್ಕೆ ಹರಿಯುವ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್, ಪಾಕಿಸ್ತಾನದೊಳಕ್ಕೆ ಹರಿಯುವ ಮೂರು ಪಶ್ಚಿಮದ ನದಿಗಳಾದ ಸಿಂಧು, ಚೆನಾಬ್ ಮತ್ತು ಝೀಲಂ ನದಿಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಾಗಿದೆ. ಈ ಒಪ್ಪಂದವು ಪಾಕಿಸ್ತಾನಕ್ಕೆ ಹಂಚಿಕೆಯಾದ ಪಶ್ಚಿಮ ನದಿಗಳು ಮತ್ತು ಭಾರತಕ್ಕೆ ಹಂಚಿಕೆಯಾದ ಪೂರ್ವ ನದಿಗಳ ಬಳಕೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಮಾಹಿತಿ ವಿನಿಮಯಕ್ಕಾಗಿ ಸಹಕಾರ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ.
ಒಪ್ಪಂದವು ಸಿಂಧು ನದಿಯ ನೀರಿನ ಗರಿಷ್ಠ ಬಳಕೆಯಲ್ಲಿ ಎರಡೂ ದೇಶಗಳ ಹಕ್ಕಿದೆ. ಭಾರತವು ಪಶ್ಚಿಮ ನದಿ ನೀರನ್ನು ಸೀಮಿತ ನೀರಾವರಿ ಬಳಕೆಗೆ, ವಿದ್ಯುತ್ ಉತ್ಪಾದನೆ, ನ್ಯಾವಿಗೇಷನ್, ಮೀನುಗಾರಿಕೆಗೆ ಬಳಸಲು ಅನುಮತಿಸುತ್ತದೆ. ಒಪ್ಪಂದದ ಪ್ರಕಾರ, ಶಾಶ್ವತ ಸಿಂಧು ಆಯೋಗವನ್ನು ಸ್ಥಾಪಿಸಲಾಗಿದೆ. ಪ್ರತಿ ದೇಶದಿಂದ ಆಯುಕ್ತರನ್ನು ಹೊಂದಿರುವ ಈ ಆಯೋಗವು ಪರಸ್ಪರ ಸಹಕಾರ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಸೃಷ್ಟಿಯಾಗುವ ಸಮಸ್ಯೆಗಳನ್ನು ಚರ್ಚಿಸಲು ಎರಡು ದೇಶಗಳು ವಾರ್ಷಿಕವಾಗಿ ಸಭೆ ನಡೆಸುತ್ತವೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವಾರು ಯುದ್ಧಗಳು ಮತ್ತು ಉದ್ವಿಗ್ನತೆಯ ನಡುವೆಯೂ ಈ ಒಪ್ಪಂದ ಸಾಗಿಕೊಂಡು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ, ನೀರಿನ ಬಳಕೆ, ಅಣೆಕಟ್ಟು ನಿರ್ಮಾಣ ಮತ್ತು ಒಪ್ಪಂದದ ಅನುಷ್ಠಾನದ ಮೇಲಿನ ಬಹು ವಿವಾದಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.