ಭಾರತದ ಜಿಡಿಪಿಯ ಪ್ರಕಾರ ದೇಶವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, 52 ಪ್ರತಿಶತದಷ್ಟು ಭಾರತೀಯರು ತಮ್ಮ ಆರೋಗ್ಯ ರಕ್ಷಣೆಗಾಗಿ ಸ್ವತಃ ತಾವೇ ಖರ್ಚು ಮಾಡಬೇಕಾಗುತ್ತದೆ ಹಾಗೂ ಇದರ ಪರಿಣಾಮವಾಗಿ ಪ್ರತಿವರ್ಷ ಆರು ಕೋಟಿಗೂ ಹೆಚ್ಚು ಜನ ಬಡತನಕ್ಕೆ ತಳ್ಳಲ್ಪಡುತ್ತಾರೆ.
ಭಾರತವು ಇತ್ತೀಚೆಗೆ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮಾನದಂಡದ ಪ್ರಕಾರ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನು ಪಡೆದುಕೊಂಡಿದೆ. ಇದು ಯುನೈಟೆಡ್ ಕಿಂಗ್ಡಮ್ ಅನ್ನು ಮೀರಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ದೃಢಪಡಿಸಿದೆ. ಇದೊಂದು ಅತ್ಯುತ್ತಮ ಸಾಧನೆಯಾಗಿದ್ದು, ಭಾರತವು ತನ್ನ ಅಭಿವೃದ್ಧಿಯನ್ನು ಮುಂದುವರಿಸಲು ಸಜ್ಜಾಗಿದೆ ಎಂದು ಹೆಚ್ಚಿನ ಅಂದಾಜುಗಳು ಸೂಚಿಸುತ್ತವೆ.
ಎಸ್ &ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಪ್ರಕಾರ, ಭಾರತವು 2030 ರ ವೇಳೆಗೆ ಸುಮಾರು 7.3 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜರ್ಮನಿ ಮತ್ತು ಜಪಾನ್ ಅನ್ನು ಹಿಂದಿಕ್ಕಿ ಮೂರನೇ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ. ಇದು ಪ್ರಸ್ತುತ ಮಟ್ಟವಾದ 3.5 ಟ್ರಿಲಿಯನ್ ಡಾಲರ್ಗಳಿಗಿಂತ ಗಮನಾರ್ಹ ಹೆಚ್ಚಳವಾಗಿದೆ. ಈ ಗಮನಾರ್ಹ ಬೆಳವಣಿಗೆಯ ಪಥವು ಭಾರತವನ್ನು ಭರವಸೆಯ ಸ್ಥಾನಕ್ಕೆ ಏರಿಸಲಿದೆ. ಪ್ರಸ್ತುತ ಜಾಗತಿಕ ಆರ್ಥಿಕ ವೇದಿಕೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಮಾತ್ರ ಮುಂದಿವೆ.
ಅದೇನೇ ಇದ್ದರೂ, ಈ ಆರ್ಥಿಕ ಉತ್ಸಾಹದ ನಡುವೆ ಮತ್ತೊಂದು ಹೆಚ್ಚು ಸೂಕ್ಷ್ಮವಾದ ನಿರೂಪಣೆ ನಮಗೆ ಕಂಡು ಬರುತ್ತದೆ. ತಲಾ ಜಿಡಿಪಿಯನ್ನು ಪರಿಗಣಿಸುವಾಗ, ಭಾರತವು ಕಡಿಮೆ ಮಧ್ಯಮ ಆದಾಯದ ರಾಷ್ಟ್ರವೆಂದು ವರ್ಗೀಕರಿಸಲ್ಪಟ್ಟಿದೆ. ಈ ವ್ಯತಿರಿಕ್ತತೆಯು ದೇಶದೊಳಗಿನ ಗಣನೀಯ ಆದಾಯ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ. 1.4 ಬಿಲಿಯನ್ ನಾಗರಿಕರನ್ನು ಹೊಂದಿರುವ ಭಾರತವು ಜಿ 20 ಯೊಳಗೆ ಅತ್ಯಂತ ಬಡ ರಾಷ್ಟ್ರವಾಗಿ ಉಳಿದಿದೆ. ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ 2018 ರಲ್ಲಿ 19 ಕೋಟಿಯಿಂದ 2022 ರಲ್ಲಿ 35 ಕೋಟಿಗೆ ಏರಿಕೆಯಾಗಲಿದೆ ಎಂದು ಆಕ್ಸ್ಫಾಮ್ ಮುನ್ಸೂಚನೆ ನೀಡಿರುವುದು ಜನರು ಎದುರಿಸುತ್ತಿರುವ ಕಠಿಣ ವಾಸ್ತವವನ್ನು ಎತ್ತಿ ತೋರಿಸುತ್ತದೆ.
ಆರ್ಥಿಕ ಬೆಳವಣಿಗೆಯ ಆಚೆಗೆ, ಹಲವಾರು ಸವಾಲುಗಳು ಮುಂದುವರಿದಿವೆ. ಅನೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳು ಮೂಲಭೂತ ವೈಯಕ್ತಿಕ ನೈರ್ಮಲ್ಯ ಸೌಲಭ್ಯಗಳಿಂದ ವಂಚಿತವಾಗಿವೆ. ಆರೋಗ್ಯ ಸೇವೆಗಳು ಸಹ ಇವರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಕೋವಿಡ್ -19 ರ ನಂತರ ದಿನಗೂಲಿ ಕಾರ್ಮಿಕರಿಗೆ ನಾಮಮಾತ್ರ ವೇತನ ಸುಧಾರಣೆಗಳ ಹೊರತಾಗಿಯೂ, ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಅವರ ನಿಜವಾದ ಆದಾಯ ಕ್ಷೀಣಿಸಿದೆ. ಜಿಡಿಪಿಯಲ್ಲಿನ ಪ್ರಗತಿಯ ವಿರೋಧಾಭಾಸವು ಜನಸಂಖ್ಯೆಯ ಗಮನಾರ್ಹ ಭಾಗವು ಎದುರಿಸುತ್ತಿರುವ ಕಷ್ಟಗಳೊಂದಿಗೆ ಮಾರ್ಮಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅನೇಕರ ದೈನಂದಿನ ಅಸ್ತಿತ್ವವು ಅಸ್ತವ್ಯಸ್ತವಾಗಿರುವಾಗ ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಹೆಮ್ಮೆ ಪಡುವುದಾದರೂ ಹೇಗೆ?