ಕರ್ನಾಟಕ

karnataka

ETV Bharat / opinion

ಮೋದಿ ಬ್ರ್ಯಾಂಡ್​ಗೆ ಮಿತ್ರ ಪಕ್ಷಗಳ ಅಡ್ಡಿ: 3.0 ಸರ್ಕಾರದ ಸವಾಲುಗಳೇನು? - Modi 3rd Term Govt - MODI 3RD TERM GOVT

ಮೋದಿ ಅವರಿಗೆ ತಮ್ಮ ರಾಜಕೀಯ ಜೀವನದಲ್ಲಿ ಸಮ್ಮಿಶ್ರ ಸರ್ಕಾರವನ್ನು ನಡೆಸಿದ ಅನುಭವವಿಲ್ಲ. ಆದರೀಗ ಇದೇ ಮೊದಲ ಸಲ ಇಂಥದ್ದೊಂದು ಸರ್ಕಾರದ ಮುಂದಾಳತ್ವ ವಹಿಸಿದ್ದಾರೆ. ಆದರೆ, ಅವರ ಪ್ರಖರ ನಿಲುವುಗಳಿಗೆ ಮಿತ್ರಪಕ್ಷಗಳ ಚೌಕಾಸಿ ಸಹಜವಾಗಿಯೇ ಹಿನ್ನಡೆ ತರಬಹುದು. ಮೋದಿ-ಶಾ ಜೋಡಿ ಮುಂದಿನ ಪ್ಲಾನ್​ ಏನಾಗಿರಲಿದೆ ಎಂಬುದನ್ನು ಲೇಖಕ ಪ್ರೊ.ಪ್ರವೀಣ್​ ಮಿಶ್ರಾ ವಿಶ್ಲೇಷಿಸಿದ್ದಾರೆ.

ಮೋದಿ ಬ್ರ್ಯಾಂಡ್​ಗೆ ಮಿತ್ರ ಪಕ್ಷಗಳ ಅಡ್ಡಿ
ಮೋದಿ ಬ್ರ್ಯಾಂಡ್​ಗೆ ಮಿತ್ರ ಪಕ್ಷಗಳ ಅಡ್ಡಿ (PIB)

By ETV Bharat Karnataka Team

Published : Jun 19, 2024, 5:58 PM IST

"ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿನಂತೆ ಪೂರ್ಣ ಬಲದಿಂದ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲಾರರು". ಇದು ರಾಜಕೀಯ ಪಡಸಾಲೆಯಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಮಾತು. ಇದಕ್ಕೆ ಕಾರಣ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಪಕ್ಷವಾಗಿ ಬಹುಮತ ಪಡೆಯದೇ ಇರುವುದು.

ಜೂನ್​ 4ರಂದು ಬಂದ ಚುನಾವಣಾ ಫಲಿತಾಂಶ ವಿಪಕ್ಷಗಳಿಗೆ ಸಿಹಿ ತಂದರೂ, ಪೂರ್ಣ ಗೆಲುವಿನ ಹುಮ್ಮಸ್ಸಿನಲ್ಲ. ಇತ್ತ ಬಿಜೆಪಿ ಗೆದ್ದರೂ ವಿಕ್ರಮ ಸಾಧಿಸಿದ ನಗೆಯಿಲ್ಲ. ಈ ಸಮ್ಮಿಶ್ರ ಫಲಿತಾಂಶವು ಕೆಲವರಿಗೆ ಲಾಭ-ನಷ್ಟಗಳನ್ನು ತಂದುಕೊಟ್ಟಿದೆ. ಅದರಲ್ಲೂ 2 ಅವಧಿ (10 ವರ್ಷ) ವಿಕ್ರಮನಂತೆ ಮೆರೆದಿದ್ದ ಮೋದಿಗೆ ಇದು ತುಸು ಕಸಿವಿಸಿಯ ಸಮಯ. ಕಾರಣ ಮಿತ್ರಪಕ್ಷಗಳನ್ನೂ ಜೊತೆಯಾಗಿಸಿಕೊಂಡು ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಹೀಗಾಗಿ ಭಾರತದ ಮುಂದಿನ ಐದು ವರ್ಷಗಳು ಬಹಳ ಬಹಳ ದೀರ್ಘವಾಗಿರುತ್ತದೆ ಎಂಬುದು ವಿಧಿತವಾಗುತ್ತದೆ.

ಮೋದಿ ಅವರ ಮೊದಲ ಮತ್ತು ಎರಡನೇ ಅವಧಿಯಲ್ಲಿ ದೊಡ್ಡ ಬದಲಾವಣೆಗಳೇನೂ ಕಾಣಲಿಲ್ಲ. ಆದರೆ, 3.0 ಸರ್ಕಾರದಲ್ಲಿ ಮಿತ್ರಪಕ್ಷಗಳಿಗೆ ಅವಕಾಶ ಕಲ್ಪಿಸುವುದು ಅನಿವಾರ್ಯವಾಗಿದೆ. ಆದಾಗ್ಯೂ, ಅವರು ತಮ್ಮ ಪ್ರಮುಖ ತಂಡವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಎಲ್ಲವೂ ಮೊದಲಿನಂತೆ ಉತ್ತಮವಾಗಿದೆ ಎಂಬುದು ಸುಳ್ಳೇನೂ ಅಲ್ಲ. ಆದರೆ ವಾಸ್ತವ ಸಂಗತಿ ಗಮನಿಸಿದರೆ, ಮೋದಿ ಅವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಪರಿಚಯವಿಲ್ಲದ ಆಡಳಿತವನ್ನು ಈಗ ನಡೆಸಬೇಕಿದೆ.

ಸದ್ಯದ ಬಿಜೆಪಿ ಅವರ ಏಕನಾಯಕತ್ವದಲ್ಲಿ ಮುನ್ನುಗ್ಗುತ್ತಿದೆ. ಅವರ ಆಡಳಿತ ಶೈಲಿ ಮತ್ತು ಕಾರ್ಯತಂತ್ರಗಳೂ ಏಕ ಪಕ್ಷದ ಪ್ರಾಬಲ್ಯದ ಸುತ್ತಲೇ ಇದ್ದವು. 2024 ರ ಜನಾದೇಶವು ಈ ಸನ್ನಿವೇಶವನ್ನು ಬದಲಾಯಿಸಿದೆ. ಮೊದಲ ದೇಹಭಾಷೆ ಮತ್ತು ಗತ್ತು ಈಗ ತುಸು ತಗ್ಗುವ ಸಾಧ್ಯತೆ ಇದೆ.

ಯಾವ ಬದಲಾವಣೆ ಕಾಣಬಹುದು?:ಮಿತ್ರ ಪಕ್ಷಗಳು ತಮ್ಮ ಪಾಲನ್ನು ಬಯಸುವುದು ಸಹಜ. ಅವರ ಚೌಕಾಶಿತನವು ಬ್ರ್ಯಾಂಡ್ ಮೋದಿಯ ಅಬ್ಬರವನ್ನು ತುಸು ಕಡಿಮೆ ಮಾಡಲಿದೆ. ಈ ಹಿಂದಿನ ಪ್ರಜ್ವಲಿಸುವ ಮೋದಿಯನ್ನು ಅವರ ಬೆಂಬಲಿಗರು ಕಾಣಲು ಸಾಧ್ಯವಿಲ್ಲ. 12 ವರ್ಷಗಳ ಕಾಲ ಅವರು ಸಂಪೂರ್ಣ ಬಹುಮತದೊಂದಿಗೆ ಗುಜರಾತ್ ರಾಜ್ಯವನ್ನು ಆಳಿದ್ದರು. 10 ವರ್ಷ ದೇಶದ ಚುಕ್ಕಾಣಿ ಹಿಡಿದಿದ್ದರು. ಇದೇ ಮೊದಲ ಬಾರಿಗೆ ಬಿಜೆಪಿಗೆ ಸರಳ ಬಹುಮತದ ಕೊರತೆ ಎದುರಾಗಿ, ಮಿಶ್ರ ಆಡಳಿತ ನಡೆಸಬೇಕಿದೆ.

ಮೋದಿಯವರ ಆಡಳಿತ ಶೈಲಿಯು ಬಲವಾದ ಕೇಂದ್ರೀಕೃತ ನಿರ್ಧಾರಗಳಿಂದ ಕೂಡಿತ್ತು. ಪಕ್ಷದಲ್ಲಿ ಭಿನ್ನಾಭಿಪ್ರಾಯಗಳನ್ನು ಸುಲಭವಾಗಿ ನಿರ್ವಹಿಸುವ ಶಕ್ತಿ ಇತ್ತು. ಇದನ್ನೂ ಗುಜರಾತ್​ನಲ್ಲೂ ನಾವು 2001 ರಿಂದ 2014 ರವರೆಗಿನ ಸರ್ಕಾರದಲ್ಲಿ ಕಾಣಬಹುದು. ಅವರ ಶೈಲಿಯು ಗರಿಷ್ಠ ಅಧಿಕಾರವನ್ನು ಚಲಾಯಿಸುವುದು. ಮಾಧ್ಯಮ ನಿರೂಪಣೆಗಳ ಮೇಲೆ ಸಂಪೂರ್ಣ ನಿಯಂತ್ರಣ. ಸರ್ಕಾರಿ ಸಂಸ್ಥೆಗಳ ಮೇಲೆ ಸಂಪೂರ್ಣ ನಿಯಂತ್ರಣ, ಸಾಮಾಜಿಕ ಚಿಂತಕರು, ಪ್ರತಿಭಟನಾಕಾರರನ್ನು ಅಪಹಾಸ್ಯ ಮಾಡುವುದು ಇತ್ಯಾದಿಗಳಿಂದ ಕೂಡಿತ್ತು. ಇದರಿಂದ ಅವರು ನಾನಾ ಟೀಕೆಗಳಿಗೂ ಗುರಿಯಾಗಿದ್ದರು.

ಎರಡು ಪ್ರಮುಖ ಮಿತ್ರ ಪಕ್ಷಗಳ ನಾಯಕರಾದ ಜೆಡಿಯುನ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಅವರು ಈ ಹಿಂದೆ ತಮ್ಮ ವಿರುದ್ಧವೇ ದೊಡ್ಡ ಧ್ವನಿಯಲ್ಲಿ ಟೀಕಿಸಿದ್ದೂ ಮೋದಿ ಅವರಿಗೆ ಗೊತ್ತಿದೆ. ಇಂಡಿಯಾ ಕೂಟ ದೊಡ್ಡ ಆಫರ್​ ನೀಡಿದಲ್ಲಿ ಅವರಿಬ್ಬರೂ ಬಣ ಬದಲಿಸಿದರೂ ಅಚ್ಚರಿಯೇನಲ್ಲ.

ಬ್ರ್ಯಾಂಡ್​ ಮೋದಿ ಉದಯವಾಗಿದ್ದು ಯಾವಾಗ?:2002ರ ಗುಜರಾತ್ ಕೋಮು ಹಿಂಸಾಚಾರದ ಬಳಿಕ ಬ್ರ್ಯಾಂಡ್ ನರೇಂದ್ರ ಮೋದಿ ಉದಯವಾಯಿತು. ಗುಜರಾತ್ ಸಿಎಂ ಕೇಶುಭಾಯ್ ಪಟೇಲ್ ಅವರ ಸ್ಥಾನಕ್ಕೆ ನರೇಂದ್ರ ಮೋದಿ ಬಂದಾಗ ಅವರ ಬಗ್ಗೆ ಅರಿತವರು ಬಹಳ ಕಡಿಮೆ. ಆಗಿನ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ನಿಕಟವರ್ತಿಯಾಗಿ ಗುರುತಿಸಿಕೊಂಡಿದ್ದರು. 1990ರಲ್ಲಿ ಅಡ್ವಾಣಿಯವರ ರಥಯಾತ್ರೆಯನ್ನು ಆಯೋಜಿಸುವಲ್ಲಿ ಮೋದಿ ಬಹಳ ಮಹತ್ವದ ಪಾತ್ರ ವಹಿಸಿದ್ದರು. ಅದು ಅಂತಿಮವಾಗಿ 1992ರಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾಯಿತು. ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರವನ್ನೂ ತಂದುಕೊಟ್ಟಿತು.

ಪ್ರಖ್ಯಾತ ನಾಯಕರೂ ಕೂಡ ಸಂಸತ್ತಿನಲ್ಲಿ ದುರ್ಬಲ ನಾಯಕತ್ವ ಮತ್ತು ರಾಜಕೀಯ ಅಸ್ಥಿರತೆ ಕಾರಣಕ್ಕೆ ಅಧಿಕಾರ ಕಳೆದುಕೊಂಡ ಉದಾಹರಣೆಗಳೂ ಇವೆ. ಅದರಲ್ಲಿ ಪ್ರಮುಖವಾಗಿ ಇಂಗ್ಲೆಂಡ್​ನ ಮಾಜಿ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ (1979-1990) ಮೊದಲಿದ್ದಾರೆ. ಅವರನ್ನು "ದಿ ಐರನ್ ಲೇಡಿ" ಎಂದು ಕರೆಯಲಾಗುತ್ತಿತ್ತು. 1987ರಲ್ಲಿ ಮೂರನೇ ಅವಧಿಗೆ ಮರು ಚುನಾಯಿಸಲ್ಪಟ್ಟರು. ಆದರೆ ಯುರೋಪಿಯನ್ ಸಮುದಾಯದ ಬಗ್ಗೆ ಅವರ ಯುರೋಸೆಪ್ಟಿಕ್ ದೃಷ್ಟಿಕೋನಕ್ಕೆ ಅವರ ಕ್ಯಾಬಿನೆಟ್‌ನಲ್ಲೇ ಸಹಮತ ಸಿಗಲಿಲ್ಲ. ಇದರಿಂದ ಅವರು 1990ರಲ್ಲಿ ಪ್ರಧಾನಮಂತ್ರಿ ಮತ್ತು ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕಾಯಿತು.

ಕೇಂದ್ರದಲ್ಲೂ ಗುಜರಾತ್​ ಮಾದರಿ ಬಲೆ:ಬಿಜೆಪಿಗೆ ತಮ್ಮದೇ ಆದ ಸಂಖ್ಯಾಬಲ ಇಲ್ಲ ಎಂಬುದು ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಅವರಿಗೆ ತಿಳಿದಿದೆ. ಇಂಥದ್ದೇ ಪರಿಸ್ಥಿತಿಯನ್ನು ಗುಜರಾತ್‌ನಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ ಕಂಡಿದ್ದರು. ಅಂದು ಬಿಜೆಪಿ 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಪಡೆದುಕೊಂಡು ಬಹುಮತ ಪಡೆದಿತ್ತು. ಆದರೆ, ಇದು ಅಧಿಕಾರದ ಹಿಡಿತಕ್ಕೆ ಸಾಲದು ಎಂದು ತಮ್ಮ ಪ್ರಸಿದ್ಧ 'ಗುಜರಾತ್ ಮಾದರಿ' ಘೋಷಣೆ ಜಾರಿಗೆ ತಂದರು. ಮುಂದಿನ ಐದು ವರ್ಷಗಳಲ್ಲಿ ಕಾಂಗ್ರೆಸ್​ನ ಹಲವು ನಾಯಕರು ಬಿಜೆಪಿ ಸೇರುವಂತೆ ಮಾಡಿದರು.

ಹಲವಾರು ಉಪಚುನಾವಣೆಗಳು ನಡೆದು, ಅದರಲ್ಲಿ ಬಿಜೆಪಿ ಗೆಲುವು ಸಾಧಿಸಿತು. 2022 ರ ವಿಧಾನಸಭಾ ಚುನಾವಣೆಗೂ ಮೊದಲು ಈ ಸಂಖ್ಯಾಬಲ 99 ರಿಂದ 112 ಸ್ಥಾನಗಳಿಗೆ ಏರಿತು. 2022 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಪಡೆದು ಸೂಪರ್ ಪವರ್​ ಆಗಿ ಹೊರಹೊಮ್ಮಿತು. ಇದು ಗುಜರಾತ್ ಇತಿಹಾಸದಲ್ಲಿ ಯಾವುದೇ ಪಕ್ಷವು ಸಾಧಿಸದ ಗೆಲುವಾಗಿತ್ತು.

ಹೀಗಾಗಿ ಮೋದಿ ಮತ್ತು ಶಾ ಜೋಡಿ ತಮ್ಮ ಪಕ್ಷದ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಕೇಂದ್ರದಲ್ಲೂ 'ಗುಜರಾತ್ ಮಾದರಿ'ಯನ್ನು ಜಾರಿಗೆ ತರುವ ಸಾಧ್ಯತೆಯಿದೆ. ಇದರಲ್ಲಿ ಯಶಸ್ವಿಯಾಗದಿದ್ದರೆ, ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇರಬಹುದು. ಅಥವಾ ಪ್ರಧಾನಿ ಸ್ಥಾನದಿಂದ ಮೋದಿಯನ್ನು ಕೆಳಗಿಳಿಸುವ ಮಾತುಗಳೂ ಕೇಳಿಬರಬಹುದು.

ಮುಂದಿನ ಚುನಾವಣೆಗಳಲ್ಲಿ ಸತ್ವಪರೀಕ್ಷೆ:ಬಿಜೆಪಿಯೊಳಗಿನ ಆಂತರಿಕ ಕಲಹವೇ ಮೋದಿ ಮತ್ತು ಶಾ ಅವರಿಗೆ ಈಗಿರುವ ದೊಡ್ಡ ತಲೆನೋವು. ಹೆಚ್ಚಾಗಿ ಇದು ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ಕೇಳಿಬರುತ್ತಿದೆ. ಪರಿಣಾಮಕಾರಿ ಆಡಳಿತಕ್ಕಾಗಿ ಸಂಖ್ಯಾಬಲ ಅಗತ್ಯವಾಗಿದೆ. ಜೊತೆಗೆ ಹಣದುಬ್ಬರ, ನಿರುದ್ಯೋಗ ಮತ್ತು ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಗಳೂ 2024 ರ ಫಲಿತಾಂಶದ ಮೇಲೆ ಪರಿಣಾಮ ಬೀರಿದವು. ಇದರಿಂದ ಎನ್‌ಡಿಎ ಶೇಕಡಾ 43.7 ಮತ್ತು ಇಂಡಿಯಾ ಕೂಟ ಶೇಕಡಾ 41.4 ಮತ ಪ್ರಮಾಣ ದಾಖಲಿಸಿತು. ಆದರೂ ಇದು ಕೇವಲ ಶೇಕಡಾ 2.3 ರಷ್ಟು ಮತಗಳ ಅಂತರವಾಗಿದೆ. ಹರಿಯಾಣ, ಮಹಾರಾಷ್ಟ್ರ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳು ಮೋದಿ ಬ್ರ್ಯಾಂಡ್ ಅನ್ನು ಮತ್ತಷ್ಟು ಪರೀಕ್ಷಿಗೆ ಒಳಪಡಿಸಲಿವೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ ಫಲಿತಾಂಶ: ಗೆದ್ದವರಿಗೆ ಸೋತ ಮನೋಭಾವ, ಸೋತವರಿಗೆ ಗೆದ್ದಷ್ಟೇ ಖುಷಿ - Lok Sabha Election Results

ABOUT THE AUTHOR

...view details