ಕರ್ನಾಟಕ

karnataka

ETV Bharat / opinion

ಭಾರತದ ಜಾಗತಿಕ ಸ್ಥಾನಮಾನ ಹೆಚ್ಚಿಸಿದ ಮನಮೋಹನ್ ಸಿಂಗ್​ ವಿದೇಶಾಂಗ ನೀತಿ - MANMOHAN SINGH

ಮನಮೋಹನ್ ಸಿಂಗ್ ಅಳವಡಿಸಿಕೊಂಡಿದ್ದ ಭಾರತದ ವಿದೇಶಾಂಗ ನೀತಿಯ ಬಗ್ಗೆ ಅಂಕಣಕಾರ ಅರೂನಿಮ್ ಭುಯಾನ್ ಅವರ ಅವಲೋಕನ ಇಲ್ಲಿದೆ.

ಮನಮೋಹನ್ ಸಿಂಗ್​
ಡಾ.ಮನಮೋಹನ್ ಸಿಂಗ್​ (IANS)

By ETV Bharat Karnataka Team

Published : Dec 27, 2024, 6:33 PM IST

ನವದೆಹಲಿ: ಭಾರತದ ಮಾಜಿ ಪ್ರಧಾನಿ ತಮ್ಮ 92ನೇ ವಯಸ್ಸಿನಲ್ಲಿ ಗುರುವಾರ ನಿಧನರಾಗಿದ್ದಾರೆ. 2010ರಲ್ಲಿ ರಿಯಾದ್​ನಿಂದ ನವದೆಹಲಿಗೆ ಏರ್ ಇಂಡಿಯಾ ಒನ್ ವಿಮಾನದಲ್ಲಿ ಪ್ರಯಾಣಿಸಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಆ ದಿನಗಳಲ್ಲಿ ರೂಢಿಯಲ್ಲಿದ್ದಂತೆ, ಸೌದಿ ಅರೇಬಿಯಾ ಭೇಟಿಯ ಬಗ್ಗೆ ಮಾಹಿತಿ ನೀಡಲು ಪ್ರಧಾನಿಯವರು ವಿಮಾನದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿದ್ದರು.

ನಾವು ದೆಹಲಿಗೆ ಬರುತ್ತಿರುವ ಸಮಯವು ಹೋಳಿ ಹಬ್ಬದ ಸಮಯವೂ ಆಗಿತ್ತು. ಹೀಗಾಗಿ ಪತ್ರಿಕಾಗೋಷ್ಠಿಯ ನಂತರ ನಾನು ಅವರ ಬಳಿಗೆ ಹೋಗಿ, "ಹ್ಯಾಪಿ ಹೋಳಿ, ಸರ್" ಎಂದು ಹೇಳಿದೆ. ಅವರು ತಮ್ಮ ಬಲ ಅಂಗೈಯನ್ನು ನನ್ನ ತಲೆಯ ಮೇಲೆ ಇರಿಸಿ ಮೃದುವಾದ ಧ್ವನಿಯಲ್ಲಿ "ಮಗನೇ ದೇವರು ನಿನಗೆ ಆಶೀರ್ವದಿಸಲಿ" ಎಂದು ಹಾರೈಸಿದರು.

ಭಾರತದ ವಿದೇಶಾಂಗ ನೀತಿಯ ದೃಷ್ಟಿಕೋನದಿಂದ ಸೌದಿ ಅರೇಬಿಯಾ ಭೇಟಿ ಪ್ರಾಮುಖ್ಯತೆ ಪಡೆದಿತ್ತು. ಆ ಭೇಟಿಯ ಸಮಯದಲ್ಲಿಯೇ 'ರಿಯಾದ್ ಘೋಷಣೆ - ಕಾರ್ಯತಂತ್ರದ ಸಹಭಾಗಿತ್ವದ ಹೊಸ ಯುಗ' ಎಂಬ ಘೋಷಣೆಯನ್ನು ಬಿಡುಗಡೆ ಮಾಡಲಾಯಿತು. 2006 ರಲ್ಲಿ ಆಗಿನ ಸೌದಿ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಭಾರತ ಭೇಟಿಯ ಸಮಯದಲ್ಲಿ ಸಹಿ ಹಾಕಿದ ದೆಹಲಿ ಘೋಷಣೆಯ ಆಧಾರದ ಮೇಲೆ ರಿಯಾದ್ ಘೋಷಣೆಯು ಭಾರತ-ಸೌದಿ ಅರೇಬಿಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿತು.

ಸೌದಿ ಅರೇಬಿಯಾದಲ್ಲಿರುವಾಗ ಮನಮೋಹನ್ ಸಿಂಗ್ ಅವರು ಮಜ್ಲಿಸ್ ಅಲ್-ಶೌರಾವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಸೌದಿ ವಿದೇಶಾಂಗ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ಖನಿಜ ಸಂಪನ್ಮೂಲಗಳು ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರನ್ನು ಭೇಟಿಯಾದರು. ಆವಾಗ ಕಿಂಗ್ ಸೌದ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಪಿ.ವಿ.ನರಸಿಂಹ ರಾವ್ ಅವರು ಪ್ರಾರಂಭಿಸಿದ ಮತ್ತು ಭಾರತೀಯ ಜನತಾ ಪಕ್ಷದ ಅಟಲ್ ಬಿಹಾರಿ ವಾಜಪೇಯಿ ಅವರು ಮುಂದುವರಿಸಿದ ಪ್ರಾಯೋಗಿಕ ವಿದೇಶಾಂಗ ನೀತಿಯನ್ನು ಮನಮೋಹನ್ ಸಿಂಗ್ ಮುಂದುವರಿಸಿದರು.

ಮನಮೋಹನ್ ಸಿಂಗ್ ಅವರ ವಿದೇಶಾಂಗ ನೀತಿಯ ಅತ್ಯಂತ ಪ್ರಮುಖ ಅಂಶ ಏನೆಂದರೆ 2005 ರಲ್ಲಿ ಸಹಿ ಹಾಕಿದ ಭಾರತ-ಯುಎಸ್ ನಾಗರಿಕ ಪರಮಾಣು ಒಪ್ಪಂದ. ಈ ಹೆಗ್ಗುರುತು ಒಪ್ಪಂದವು ಭಾರತದ ಪರಮಾಣು ಪ್ರತ್ಯೇಕತೆಯನ್ನು ಕೊನೆಗೊಳಿಸಿತು ಮತ್ತು ನಾಗರಿಕ ಉದ್ದೇಶಗಳಿಗಾಗಿ ಪರಮಾಣು ತಂತ್ರಜ್ಞಾನ ಮತ್ತು ಇಂಧನದ ಬಳಕೆಯನ್ನು ಪ್ರವೇಶವನ್ನು ಸುಗಮಗೊಳಿಸಿತು ಹಾಗೂ ಇಂಧನ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಟ್ಟಿತು.

ಭಾರತ-ಯುಎಸ್ ಸಂಬಂಧಗಳನ್ನು ಬಲಪಡಿಸುವಲ್ಲಿ ಮನಮೋಹನ್ ಸಿಂಗ್ ವಹಿಸಿದ ಪಾತ್ರದ ಮಹತ್ವವನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಮಾಜಿ ಪ್ರಧಾನಿಯ ನಿಧನದ ನಂತರ ತಮ್ಮ ಸಂತಾಪ ಸಂದೇಶದಲ್ಲಿ ಬಹಳ ಸೂಕ್ತವಾಗಿ ಹೇಳಿದ್ದಾರೆ. "ಡಾ.ಸಿಂಗ್ ಅವರು ಯುಎಸ್-ಭಾರತ ಕಾರ್ಯತಂತ್ರದ ಪಾಲುದಾರಿಕೆಯ ಶ್ರೇಷ್ಠ ಚಾಂಪಿಯನ್​ಗಳಲ್ಲಿ ಒಬ್ಬರಾಗಿದ್ದರು ಮತ್ತು ಅವರ ಕೆಲಸವು ಕಳೆದ ಎರಡು ದಶಕಗಳಲ್ಲಿ ನಮ್ಮ ದೇಶಗಳು ಒಟ್ಟಾಗಿ ಸಾಧಿಸಿದ ಬಹಳಷ್ಟು ವಿಚಾರಗಳಿಗೆ ಅಡಿಪಾಯ ಹಾಕಿತು" ಎಂದು ಬ್ಲಿಂಕೆನ್ ಹೇಳಿದ್ದಾರೆ.

"ಯುಎಸ್-ಭಾರತ ನಾಗರಿಕ ಪರಮಾಣು ಸಹಕಾರ ಒಪ್ಪಂದವನ್ನು ಮುನ್ನಡೆಸುವಲ್ಲಿ ಅವರ ನಾಯಕತ್ವವು ಮಹತ್ವದ ಪಾತ್ರ ವಹಿಸಿದೆ. ಸ್ವದೇಶದಲ್ಲಿ, ಭಾರತದ ತ್ವರಿತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿದ ಆರ್ಥಿಕ ಸುಧಾರಣೆಗಳಿಗಾಗಿ ಡಾ. ಸಿಂಗ್ ಅವರನ್ನು ಸ್ಮರಿಸಲಾಗುತ್ತದೆ. ಡಾ.ಸಿಂಗ್ ಅವರ ನಿಧನಕ್ಕೆ ನಾವು ಶೋಕಿಸುತ್ತೇವೆ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವನ್ನು ಹತ್ತಿರ ತರುವಲ್ಲಿ ಅವರ ಸಮರ್ಪಣೆಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

2004 ರಿಂದ 2014 ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಭಾರತದ ವಿದೇಶಾಂಗ ನೀತಿಯು ವಾಸ್ತವಿಕತೆ ಮತ್ತು ಆದರ್ಶವಾದದ ಮಿಶ್ರಣದಿಂದ ಗುರುತಿಸಲ್ಪಟ್ಟಿತ್ತು. ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನವನ್ನು ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಸಿಂಗ್ ಅವರ ಅಧಿಕಾರಾವಧಿಯು ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಾಗ ಆರ್ಥಿಕ ರಾಜತಾಂತ್ರಿಕತೆ, ಕಾರ್ಯತಂತ್ರದ ಪಾಲುದಾರಿಕೆ ಮತ್ತು ಬಹುಪಕ್ಷೀಯತೆಗೆ ಒತ್ತು ನೀಡಿತು.

ಸಿಂಗ್ ಅವರು 1990 ರ ದಶಕದ ಆರಂಭದಲ್ಲಿ ಅಂದಿನ ಪ್ರಧಾನಿ ನರಸಿಂಹ ರಾವ್ ಅವರ ಅಡಿಯಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾಗ ಪ್ರಾರಂಭವಾದ ಭಾರತದ 'ಲುಕ್ ಈಸ್ಟ್ ಪಾಲಿಸಿ'ಯ ಬಲವಾದ ಪ್ರತಿಪಾದಕರಾಗಿದ್ದರು. ಈ ನೀತಿಯು ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್), ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಆಳಗೊಳಿಸುವ ಉದ್ದೇಶ ಹೊಂದಿದೆ.

ಭಾರತ-ಆಸಿಯಾನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (2009) ಅಂಕಿತ ಹಾಕಿದ್ದು ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ ಮಹತ್ವದ ಸಾಧನೆಯಾಗಿದೆ. ಸೇವೆಗಳು ಮತ್ತು ಹೂಡಿಕೆಗಳ ಒಪ್ಪಂದಗಳ ಮಾತುಕತೆಗಳ ನಂತರ ಹಲವಾರು ಆಸಿಯಾನ್ ಸದಸ್ಯ ರಾಷ್ಟ್ರಗಳೊಂದಿಗೆ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ)ಗಳನ್ನು ಮಾಡಿಕೊಳ್ಳಲಾಯಿತು.

ಸಿಂಗ್ ಅವರ ಅಧಿಕಾರಾವಧಿಯಲ್ಲಿ ಆಸಿಯಾನ್ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ವ್ಯಾಪಾರವು ಗಣನೀಯವಾಗಿ ಬೆಳೆಯಿತು. ಇದು 2004 ರಲ್ಲಿ ಇದ್ದ 13 ಬಿಲಿಯನ್ ಡಾಲರ್ ನಿಂದ 2014 ರ ವೇಳೆಗೆ 70 ಬಿಲಿಯನ್ ಡಾಲರ್ ಗೆ ಏರಿತು. ಭಾರತವು ಪೂರ್ವ ಏಷ್ಯಾದ ಆರ್ಥಿಕತೆಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಹೂಡಿಕೆಯನ್ನು ಆಕರ್ಷಿಸಿತು.

ಸಿಂಗ್ ಅವರ ಅಧಿಕಾರಾವಧಿಯಲ್ಲಿ ಚೀನಾದೊಂದಿಗಿನ ಗಡಿ ವಿವಾದವನ್ನು ಕೊನೆಗೊಳಿಸುವ ಪ್ರಯತ್ನಗಳು ನಡೆದವು. ನವೆಂಬರ್ 2006 ರಲ್ಲಿ, ಆಗಿನ ಚೀನಾದ ಅಧ್ಯಕ್ಷ ಹು ಜಿಂಟಾವೊ ಭಾರತಕ್ಕೆ ಭೇಟಿ ನೀಡಿದರು. ನಂತರ ಜನವರಿ 2008 ರಲ್ಲಿ ಸಿಂಗ್ ಬೀಜಿಂಗ್​​ಗೆ ಭೇಟಿ ನೀಡಿದರು. ಚೀನಾ-ಭಾರತ ಸಂಬಂಧಗಳಲ್ಲಿನ ಒಂದು ಪ್ರಮುಖ ಬೆಳವಣಿಗೆಯೆಂದರೆ- ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮುಚ್ಚಲ್ಪಟ್ಟ ನಂತರ 2006 ರಲ್ಲಿ ನಾಥುಲಾ ಪಾಸ್ ಅನ್ನು ಮತ್ತೆ ತೆರೆಯಲಾಯಿತು.

ಸಿಂಗ್ 2013 ರಲ್ಲಿ ಚೀನಾಕ್ಕೆ ಮತ್ತೊಮ್ಮೆ ಅಧಿಕೃತ ಭೇಟಿ ನೀಡಿದರು. ದೆಹಲಿ-ಬೀಜಿಂಗ್, ಕೋಲ್ಕತಾ-ಕುನ್ಮಿಂಗ್ ಮತ್ತು ಬೆಂಗಳೂರು-ಚೆಂಗ್ಡು ನಡುವೆ ಸಹೋದರಿ-ನಗರ (ಸಿಸ್ಟರ್ ಸಿಟಿ) ಸಹಭಾಗಿತ್ವವನ್ನು ಸ್ಥಾಪಿಸುವ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. 2010 ರ ಹೊತ್ತಿಗೆ, ಚೀನಾ ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಮಾರ್ಪಟ್ಟಿತ್ತು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಫ್ಘಾನಿಸ್ತಾನದೊಂದಿಗಿನ ಸಂಬಂಧವೂ ಗಣನೀಯವಾಗಿ ಸುಧಾರಿಸಿತು. ಅಲ್ಲದೆ ಭಾರತವು ಅಫ್ಘಾನಿಸ್ತಾನಕ್ಕೆ ಅತಿದೊಡ್ಡ ಪ್ರಾದೇಶಿಕ ದಾನಿಯಾಯಿತು. ಆಗಸ್ಟ್ 2008 ರಲ್ಲಿ ಆಗಿನ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜೈ ನವದೆಹಲಿಗೆ ಭೇಟಿ ನೀಡಿದಾಗ, ಮನಮೋಹನ್ ಸಿಂಗ್ ಅವರು ಶಾಲೆಗಳು, ಆರೋಗ್ಯ ಚಿಕಿತ್ಸಾಲಯಗಳು, ಮೂಲಸೌಕರ್ಯ ಮತ್ತು ರಕ್ಷಣಾ ಅಭಿವೃದ್ಧಿಗಾಗಿ ಅಫ್ಘಾನಿಸ್ತಾನಕ್ಕೆ ಸಹಾಯ ಪ್ಯಾಕೇಜ್ ಅನ್ನು ಹೆಚ್ಚಿಸಿದರು.

ಮನಮೋಹನ್ ಸಿಂಗ್ ಅವರು ಅಟಲ್ ಬಿಹಾರಿ ವಾಜಪೇಯಿ ಪ್ರಾರಂಭಿಸಿದ ಪಾಕಿಸ್ತಾನದೊಂದಿಗಿನ ಶಾಂತಿ ಪ್ರಕ್ರಿಯೆಯನ್ನು ಮುಂದುವರಿಸಿದರು. ಪಾಕಿಸ್ತಾನದೊಂದಿಗಿನ ಸಂಬಂಧಗಳನ್ನು ಸಾಮಾನ್ಯಗೊಳಿಸುವ ಪ್ರಯತ್ನಗಳಲ್ಲಿ ಸಂಯೋಜಿತ ಮಾತುಕತೆಗಳನ್ನು ಪುನರಾರಂಭಿಸುವುದು ಸೇರಿದೆ. ಆದಾಗ್ಯೂ, 2008 ರ ಮುಂಬೈ ದಾಳಿಯಂತಹ ಘಟನೆಗಳು ದ್ವಿಪಕ್ಷೀಯ ಸಂಬಂಧಗಳನ್ನು ಹದಗೆಡಿಸಿತು.

ಹಿಂದೂ ಮಹಾಸಾಗರ ದ್ವೀಪ ರಾಷ್ಟ್ರದಲ್ಲಿ ಅಂತರ್ಯುದ್ಧದ ಅಂತಿಮ ಹಂತದಲ್ಲಿ ಭಾರತವು ಶ್ರೀಲಂಕಾದೊಂದಿಗೆ ತೊಡಗಿಸಿಕೊಂಡಿತು. ಭಾರತವು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳನ್ನು ತಮಿಳು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಕಾಳಜಿಯೊಂದಿಗೆ ಸಮತೋಲನಗೊಳಿಸಿತು. ಇಂಧನ ಸಹಕಾರ, ವ್ಯಾಪಾರ ಒಪ್ಪಂದಗಳು ಮತ್ತು ಗಡಿ ನಿರ್ವಹಣೆಯಂತಹ ಉಪಕ್ರಮಗಳ ಮೂಲಕ ನೇಪಾಳ ಮತ್ತು ಬಾಂಗ್ಲಾದೇಶದೊಂದಿಗಿನ ಸಂಬಂಧಗಳು ಸುಧಾರಿಸಿದವು.

ಭಾರತದ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಗುರುತಿಸಿದ ಮನಮೋಹನ್ ಸಿಂಗ್ ಅವರು ರಾಜತಾಂತ್ರಿಕತೆಯ ಮೂಲಕ ಇಂಧನ ಸಂಪನ್ಮೂಲಗಳನ್ನು ಭದ್ರಪಡಿಸಿಕೊಳ್ಳಲು ಆದ್ಯತೆ ನೀಡಿದರು. ಭಾರತವು ತೈಲ ಮತ್ತು ಅನಿಲಕ್ಕಾಗಿ ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ ಮತ್ತು ಆಫ್ರಿಕಾದಲ್ಲಿ ಪಾಲುದಾರಿಕೆಯನ್ನು ರೂಪಿಸಿತು. ಇರಾನ್ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗಿನ ಒಪ್ಪಂದಗಳು ಈ ಪ್ರಯತ್ನದ ಭಾಗವಾಗಿತ್ತು. ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ, ಭಾರತವು ಸಮುದ್ರ ಮಾರ್ಗಗಳನ್ನು ರಕ್ಷಿಸಲು ಮತ್ತು ಕಡಲ್ಗಳ್ಳತನವನ್ನು ಎದುರಿಸಲು ಕಡಲ ಭದ್ರತೆಯ ಮೇಲೆ ಗಮನ ಹರಿಸಿತು. ಅದೇ ಸಮಯದಲ್ಲಿ ಈ ಪ್ರದೇಶದಲ್ಲಿ ತನ್ನ ನೌಕಾ ಉಪಸ್ಥಿತಿಯನ್ನು ಭಾರತ ವಿಸ್ತರಿಸಿಕೊಂಡಿತು.

ಮನಮೋಹನ್ ಸಿಂಗ್ ಅವರು ಬಹುಧ್ರುವೀಯ ವಿಶ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದರು. ಈ ವ್ಯವಸ್ಥೆಯಲ್ಲಿ ಭಾರತವು ಮಹತ್ವದ ಪಾತ್ರ ವಹಿಸಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಅವರ ಸರ್ಕಾರವು ಬಹುಪಕ್ಷೀಯ ವೇದಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಅನುಸರಿಸಿತು. ಭಾರತವು ತನ್ನ ಬೆಳೆಯುತ್ತಿರುವ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ಪ್ರಯತ್ನಗಳನ್ನು ಮುಂದುವರೆಸಿತು.

ನವದೆಹಲಿ ಹವಾಮಾನ ಬದಲಾವಣೆ ಮಾತುಕತೆಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡು ಜಾಗತಿಕ ಒಪ್ಪಂದಗಳಲ್ಲಿ ಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಪ್ರತಿಪಾದಿಸಿತು. ವಿಶ್ವದ ಪ್ರಮುಖ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಾಗ, ಭಾರತವು ಅಲಿಪ್ತ ಚಳುವಳಿ (ನಾಮ್) ತತ್ವಗಳಿಗೆ ತನ್ನ ಬದ್ಧತೆಯನ್ನು ಉಳಿಸಿಕೊಂಡಿದೆ. ಇದು ಸಾರ್ವಭೌಮತ್ವ ಮತ್ತು ಹಸ್ತಕ್ಷೇಪವಿಲ್ಲದ ಬಗ್ಗೆ ತನ್ನ ಐತಿಹಾಸಿಕ ನಿಲುವನ್ನು ಪ್ರತಿಬಿಂಬಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮನಮೋಹನ್ ಸಿಂಗ್ ಅವರ ವಿದೇಶಾಂಗ ನೀತಿ ಪರಂಪರೆಯು ಕಾರ್ಯತಂತ್ರದ ವಾಸ್ತವಿಕತೆ, ಆರ್ಥಿಕ ಏಕೀಕರಣ ಮತ್ತು ಬಹುಪಕ್ಷೀಯ ತೊಡಗಿಸಿಕೊಳ್ಳುವಿಕೆಯಾಗಿದೆ. ದೇಶೀಯ ಅಭಿವೃದ್ಧಿಯ ಆದ್ಯತೆಗಳನ್ನು ಸಾಧಿಸುತ್ತಲೇ ಅವರು ಭಾರತವನ್ನು ಜವಾಬ್ದಾರಿಯುತ ಜಾಗತಿಕ ರಾಷ್ಟ್ರವಾಗಿ ಉಳಿಸಿಕೊಂಡರು. ಅವರ ಅಧಿಕಾರಾವಧಿಯು ಭಾರತದ ಅಂತರರಾಷ್ಟ್ರೀಯ ಸ್ಥಾನಮಾನವನ್ನು ಹೆಚ್ಚಿಸಲು ಮುಂದಿನ ಸರ್ಕಾರಗಳಿಗೆ ಅಡಿಪಾಯವನ್ನು ಹಾಕಿತು.

ಲೇಖನ: ಅರೂನಿಮ್ ಭುಯಾನ್, ಈಟಿವಿ ಭಾರತ್

ABOUT THE AUTHOR

...view details