ಯುನೈಟೆಡ್ ಕಿಂಗಡಮ್ (ಯುಕೆ)ನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವು ಅದ್ಭುತ ಚುನಾವಣಾ ವಿಜಯ ದಾಖಲಿಸಿದೆ. ಹೌಸ್ ಆಫ್ ಕಾಮನ್ಸ್ನ 650 ಸಂಸತ್ ಸದಸ್ಯ ಸ್ಥಾನಗಳಲ್ಲಿ, ಕೈರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಸುಮಾರು 412 ಸ್ಥಾನಗಳನ್ನು ಗೆದ್ದಿದೆ. ಲೇಬರ್ ಪಕ್ಷವು 14 ವರ್ಷಗಳ ಅಂತರದ ನಂತರ ಮತ್ತೆ ಅಧಿಕಾರಕ್ಕೆ ಬಂದಿದೆ ಮತ್ತು ಗೆಲುವಿನ ಗೌರವ ಕೈರ್ ಸ್ಟಾರ್ಮರ್ ಅವರ ನಾಯಕತ್ವಕ್ಕೆ ಸಲ್ಲುತ್ತದೆ.
ಲೇಬರ್ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವ ಮೊದಲು, ಕೈರ್ ಸ್ಟಾರ್ಮರ್ ಮಾನವ ಹಕ್ಕುಗಳ ವಕೀಲರಾಗಿ ಮತ್ತು ಕ್ರೌನ್ ಪ್ರಾಸಿಕ್ಯೂಷನ್ ಸೇವೆಯಲ್ಲಿ ಮುಖ್ಯ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ, ಕೈರ್ ಸ್ಟಾರ್ಮರ್ "ರಾಷ್ಟ್ರದಲ್ಲಿ ಪರಿವರ್ತನೆ ಮತ್ತು ಸಾರ್ವಜನಿಕ ಸೇವೆಯ ರಾಜಕೀಯಕ್ಕೆ ಮರಳುವ" ಕಡೆಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಪಕ್ಷಗಳು, ಮತ ಹಂಚಿಕೆ ಮತ್ತು ಸ್ಥಾನ ಹಂಚಿಕೆ : ಸಂಸತ್ತಿನಲ್ಲಿ ಲೇಬರ್ ಪಕ್ಷದ ಸಂಖ್ಯೆ ಗಮನಾರ್ಹವಾಗಿ ಸುಧಾರಿಸಿದ್ದರೂ, ಅನೇಕ ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಕಡಿಮೆಯಾಗಿದೆ. 2019 ರಲ್ಲಿ ಲೇಬರ್ ಪಕ್ಷದ ಮತ ಹಂಚಿಕೆ ಶೇಕಡಾ 32 ರಷ್ಟಿತ್ತು. ಈ ಬಾರಿ, ಲೇಬರ್ ಪಕ್ಷದ ಮತ ಹಂಚಿಕೆ ಶೇಕಡಾ 33.8ಕ್ಕೆ ಏರಿಕೆಯಾಗಿದೆ. ಈ ಮೂಲಕ ಅದು ಸಂಸತ್ತಿನಲ್ಲಿ ಶೇಕಡಾ 63ರಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ.
ಮತ್ತೊಂದೆಡೆ, ಕನ್ಸರ್ವೇಟಿವ್ ಪಕ್ಷದ ಮತಗಳ ಶೇಕಡಾವಾರು ಪ್ರಮಾಣ 2019 ರಲ್ಲಿ ಇದ್ದ ಸುಮಾರು 43 ಪ್ರತಿಶತದಿಂದ 23.7 ಪ್ರತಿಶತಕ್ಕೆ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಕನ್ಸರ್ವೇಟಿವ್ ಪಕ್ಷವು ಸುಮಾರು 121 ಸ್ಥಾನಗಳನ್ನು ಗೆದ್ದಿದ್ದು, ಅದು ಕಳೆದ ಬಾರಿ ಹೊಂದಿದ್ದ ಸುಮಾರು 244 ಸ್ಥಾನಗಳನ್ನು ಕಳೆದುಕೊಂಡಿದೆ. ಮಾಜಿ ಕನ್ಸರ್ವೇಟಿವ್ ಪ್ರಧಾನಿ ಲಿಜ್ ಟ್ರಸ್, ರಕ್ಷಣಾ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್ ಮತ್ತು ಇತರ ಪ್ರಮುಖ ಸಚಿವರು ಚುನಾವಣೆಯಲ್ಲಿ ಸೋತಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಅನೇಕರು ಚುನಾವಣಾ ಸೋಲಿಗೆ ಒಳಜಗಳವೇ ಕಾರಣ ಎಂದು ಹೇಳಿದ್ದಾರೆ. ಕನ್ಸರ್ವೇಟಿವ್ ಪಕ್ಷದಿಂದ ಕಳೆದ ಎಂಟು ವರ್ಷಗಳಲ್ಲಿ ಐವರು ಪ್ರಧಾನ ಮಂತ್ರಿಗಳಾಗಿದ್ದು, ಈ ವಾದಕ್ಕೆ ಇಂಬು ನೀಡುವಂತಿದೆ. ಅಕ್ರಮ ವಲಸೆ ಮತ್ತು ಹಣದುಬ್ಬರದಂತಹ ಪ್ರಮುಖ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಾಧ್ಯವಾಗದ್ದರಿಂದ ಅನೇಕ ಸಂಪ್ರದಾಯವಾದಿ ಮತದಾರರು ಕನ್ಸರ್ವೇಟಿವ್ ಪಕ್ಷದಿಂದ ದೂರವಾಗಿದ್ದಾರೆ ಎನ್ನಲಾಗಿದೆ.
ದೊಡ್ಡ ಪ್ರಮಾಣದಲ್ಲಿ ತೆರಿಗೆ ಇಳಿಕೆ ಮಾಡುವ, ಅಕ್ರಮ ವಲಸೆ ತಡೆಗೆ ಕಟ್ಟುನಿಟ್ಟಾದ ಗಡಿ ನಿಯಂತ್ರಣ ಕಾನೂನು ಜಾರಿ ಮತ್ತು ಬ್ರಿಟಿಷ್ ಸಂಸ್ಕೃತಿ, ಗುರುತು ಮತ್ತು ಮೌಲ್ಯಗಳಿಗಾಗಿ ಹೋರಾಡುವುದಾಗಿ ಭರವಸೆ ನೀಡಿದ ರಿಫಾರ್ಮ್ ಯುಕೆ ಪಕ್ಷದತ್ತ (Reform UK Party) ಅನೇಕ ಕನ್ಸರ್ವೇಟಿವ್ ಪಕ್ಷದ ಮತದಾರರು ವಾಲಿದ್ದಾರೆ. ಈ ಪಕ್ಷವು ಶೇಕಡಾ 14.3 ರಷ್ಟು ಮತ ಗಳಿಕೆಯೊಂದಿಗೆ ಐದು ಸ್ಥಾನಗಳನ್ನು ಗೆದ್ದರೆ, ಸರಿಸುಮಾರು 103 ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ರಿಫಾರ್ಮ್ ಯುಕೆ ಪಕ್ಷದ ಉತ್ತಮ ಸಾಧನೆಯು ಯುರೋಪಿಯನ್ ದೇಶಗಳಲ್ಲಿನ ಮನಸ್ಥಿತಿಗೆ ಅನುಗುಣವಾಗಿದೆ. ಇಲ್ಲಿ ವಲಸೆ ಸಮಸ್ಯೆಯ ಬಗ್ಗೆ ಆತಂಕಗೊಂಡ ಅನೇಕರು ಬಲಪಂಥೀಯ ಪಕ್ಷಗಳಿಗೆ ಮತ ಚಲಾಯಿಸುತ್ತಿದ್ದಾರೆ. ರಿಫಾರ್ಮ್ ಯುಕೆ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಕನ್ಸರ್ವೇಟಿವ್ ಪಕ್ಷದ ಸಾಧನೆ ಇನ್ನೂ ಉತ್ತಮವಾಗಿರುತ್ತಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.
ಲಿಬರಲ್ ಡೆಮಾಕ್ರಟಿಕ್ ಪಕ್ಷವು ಸಂಸತ್ತಿನ 71 ಸದಸ್ಯರೊಂದಿಗೆ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2019 ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷವು ಸುಮಾರು 11.5 ಪ್ರತಿಶತದಷ್ಟು ಮತ ಗಳಿಕೆಯೊಂದಿಗೆ 11 ಸ್ಥಾನಗಳನ್ನು ಗೆದ್ದಿತ್ತು ಎಂಬುದು ಗಮನಾರ್ಹ. 2024 ರಲ್ಲಿ, ಲಿಬರಲ್ ಡೆಮೋಕ್ರಾಟ್ಗಳ ಮತ ಹಂಚಿಕೆ ಸುಮಾರು 12.2 ಪ್ರತಿಶತಕ್ಕೆ ಏರಿಕೆಯಾಗಿ, ಅದು 71 ಸ್ಥಾನಗಳನ್ನು ಗೆದ್ದಿದೆ. ಕನ್ಸರ್ವೇಟಿವ್ ಮತಗಳು ವಿಭಜನೆಯಾಗಿರುವುದು ಮತ್ತು ರಿಫಾರ್ಮ್ ಯುಕೆ ಪಕ್ಷವು ಕನ್ಸರ್ವೇಟಿವ್ ಮತದಾರರ ಮತಗಳನ್ನು ಪಡೆದಿದ್ದರಿಂದಲೇ ಲಿಬರಲ್ ಡೆಮೋಕ್ರಾಟ್ ಅಭೂತಪೂರ್ವ ಜಯಗಳಿಸಲು ಸಾಧ್ಯವಾಗಿದೆ.
ಚುನಾವಣೆಯ ಪ್ರಾದೇಶಿಕ ಮಟ್ಟದ ವಿಶ್ಲೇಷಣೆಯು ಆಸಕ್ತಿದಾಯಕ ಫಲಿತಾಂಶಗಳನ್ನು ತೋರಿಸುತ್ತದೆ. ದೇಶದ ಉತ್ತರ ಭಾಗದಲ್ಲಿ, ಸ್ಕಾಟ್ಲೆಂಡ್ನ ಸ್ವಾತಂತ್ರ್ಯಕ್ಕಾಗಿ ಕರೆ ನೀಡುವ ಸ್ಕಾಟಿಷ್ ನ್ಯಾಷನಲ್ ಪಾರ್ಟಿ (ಎಸ್ಎನ್ಪಿ) ಸುಮಾರು 9 ಸಂಸತ್ ಸದಸ್ಯ ಸ್ಥಾನಗಳನ್ನು ಗೆದ್ದಿದೆ. 2019 ಕ್ಕೆ ಹೋಲಿಸಿದರೆ, ಎಸ್ಎನ್ಪಿ ಸುಮಾರು 39 ಸ್ಥಾನಗಳನ್ನು ಕಳೆದುಕೊಂಡಿದೆ. ಸ್ಕಾಟ್ಲೆಂಡ್ನ ಸ್ವಾತಂತ್ರ್ಯದ ಎಸ್ಎನ್ಪಿಯ ಕಾರ್ಯಸೂಚಿಯು ಸದ್ಯಕ್ಕೆ ಹಿನ್ನೆಲೆಗೆ ಸರಿದಿದ್ದರೂ, ಸ್ಕಾಟಿಷ್ ಸಂಸತ್ತಿನ 2026 ರ ಚುನಾವಣೆಯಲ್ಲಿ ಅದು ಮತ್ತೊಮ್ಮೆ ಪರಿಶೀಲನೆಗೆ ಒಳಪಡಲಿದೆ. ಮತ್ತೊಂದೆಡೆ, 2019 ರಲ್ಲಿ ಕೇವಲ ಒಂದು ಸ್ಥಾನ ಗೆದ್ದ ಲೇಬರ್ ಪಕ್ಷವು ಈ ಬಾರಿ ಸ್ಕಾಟ್ಲೆಂಡ್ನಲ್ಲಿ 37 ಸ್ಥಾನಗಳನ್ನು ಗೆದ್ದಿದೆ. ವೇಲ್ಸ್ ಪ್ರದೇಶದಲ್ಲಿ ಕನ್ಸರ್ವೇಟಿವ್ ಪಕ್ಷವು ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ಉತ್ತರ ಐರ್ಲೆಂಡ್ನಲ್ಲಿ, ಸಿನ್ ಫೆನ್ 7 ಸಂಸತ್ ಸದಸ್ಯ ಸ್ಥಾನಗಳನ್ನು ಗೆದ್ದರೆ, ಡೆಮಾಕ್ರಟಿಕ್ ಯೂನಿಯನಿಸ್ಟ್ ಪಕ್ಷವು 5 ಸ್ಥಾನಗಳನ್ನು ಗೆದ್ದಿದೆ.
ಭಾರತದ ಮೇಲಾಗಬಹುದಾದ ಪರಿಣಾಮಗಳು: ಹೊಸ ಹೌಸ್ ಆಫ್ ಕಾಮನ್ಸ್ನಲ್ಲಿ ಸರಿಸುಮಾರು 28 ಸಂಸತ್ ಸದಸ್ಯರು ಭಾರತೀಯ ಮೂಲದವರಾಗಿದ್ದಾರೆ. ಅವರ ಆಯ್ಕೆ ಸ್ವಾಗತಾರ್ಹ ಬೆಳವಣಿಗೆಯಾಗಿದ್ದರೂ, ಯುಕೆ ಸಂಸತ್ತಿನಲ್ಲಿ ಭಾರತೀಯ ಮೂಲದ ಜನರ ಹೆಚ್ಚಿದ ಉಪಸ್ಥಿತಿಯು ಸ್ವಯಂಚಾಲಿತವಾಗಿ ಭಾರತದೊಂದಿಗೆ ಉತ್ತಮ ಸಂಬಂಧಕ್ಕೆ ಕಾರಣವಾಗುತ್ತದೆ ಎಂಬುದು ವಾಸ್ತವವಲ್ಲ. ಭಾರತೀಯ ಮೂಲದ ಸಂಸದರು ವಿಶ್ವದಾದ್ಯಂತ ಬ್ರಿಟಿಷ್ ಹಿತಾಸಕ್ತಿಗಳನ್ನು ಕಾಪಾಡಲು ಪ್ರಯತ್ನಿಸುವುದು ಇದಕ್ಕೆ ಕಾರಣವಾಗಿದೆ. ಇದಲ್ಲದೇ , ಅವರು ಭಾರತದೊಂದಿಗಿನ ಸಂವಹನದಲ್ಲಿ ತಮ್ಮ ಸ್ಥಳೀಯ ಮತ ಬ್ಯಾಂಕುಗಳ ಆದ್ಯತೆಗಳನ್ನು ಪರಿಗಣಿಸಬೇಕಾಗುತ್ತದೆ.
2019 ರಲ್ಲಿ, ಜೆರೆಮಿ ಕಾರ್ಬಿನ್ ನೇತೃತ್ವದ ಲೇಬರ್ ಪಕ್ಷವು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಹಸ್ತಕ್ಷೇಪಕ್ಕೆ ಕರೆ ನೀಡಿತ್ತು. ಇದು ಭಾರತದಲ್ಲಿ ಸಾಕಷ್ಟು ನಿರಾಶೆ ಮೂಡಿಸಿತ್ತು. ಆದಾಗ್ಯೂ, ಲೇಬರ್ ಪಕ್ಷದ ನಾಯಕತ್ವವನ್ನು ವಹಿಸಿಕೊಂಡ ನಂತರ, ಕೈರ್ ಸ್ಟಾರ್ಮರ್ "ಭಾರತದಲ್ಲಿನ ಯಾವುದೇ ಸಾಂವಿಧಾನಿಕ ಸಮಸ್ಯೆಗಳು ಭಾರತೀಯ ಸಂಸತ್ತಿಗೆ ಸಂಬಂಧಿಸಿದ ವಿಷಯವಾಗಿದೆ, ಮತ್ತು ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ಮಧ್ಯದ ದ್ವಿಪಕ್ಷೀಯ ವಿಷಯವಾಗಿದೆ" ಎಂದು ಹೇಳಿದ್ದಾರೆ.