ಹಾವೇರಿ: ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ ಮದೀನಾಗೆ ಎಲ್ಲರೂ ವಿಮಾನ, ಬಸ್, ರೈಲು, ಹಡಗುಗಳ ಮೂಲಕ ಯಾತ್ರೆಗೆ ತೆರಳುತ್ತಾರೆ. ಆದರೆ ಇಲ್ಲೊಬ್ಬ ಯುವಕ ದೂರದ ದೇಶದಲ್ಲಿರುವ ಮೆಕ್ಕಾ ಮದೀನಾಗೆ ಸೈಕಲ್ ಮೂಲಕ ಯಾತ್ರೆ ಹೊರಟಿದ್ದಾರೆ. ಬೆಂಗಳೂರಿನ ಮಹ್ಮದ್ ಹಬೀಬ್ ಖಾನ್ ಸೈಕಲ್ ಯಾತ್ರೆ ಹೊರಟಿರುವ ಯುವಕ.
ಫೆ.10 ರಂದು ಬೆಂಗಳೂರಿನಿಂದ ಸೈಕಲ್ ಯಾತ್ರೆ ಆರಂಭಿಸಿರುವ ಮಹ್ಮದ್ ಹಬೀಬ್ ನಿತ್ಯ ಇಂತಿಷ್ಟು ಕಿ.ಮೀ ಸೈಕಲ್ ಸವಾರಿ ಮಾಡುವ ಮೂಲಕ ಮೆಕ್ಕಾ ಮದೀನಾಕ್ಕೆ ಹೊರಟಿದ್ದಾರೆ. ಇದೀಗ ಇವರ ಯಾತ್ರೆ ಹಾವೇರಿಗೆ ತಲುಪಿದ್ದು, ಮೆಕ್ಕಾಗೆ ಹೋಗುವ ದಾರಿ ಮಧ್ಯೆ ಮಹ್ಮದ್ ಹಬೀಬ್ ಖಾನ್ ಹಾವೇರಿಯ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಸೈಕಲ್ನಲ್ಲೇ ಮೆಕ್ಕಾಗೆ ಭೇಟಿ ನೀಡುವ ಮಹಾದಾಸೆ ನನ್ನದು: ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, "ಮೊದಲಿನಿಂದಲೂ ಸೈಕಲ್ ಸವಾರಿ ಮಾಡಿಕೊಂಡು ಹೋಗಿ ಮೆಕ್ಕಾ ಮದೀನಾ ನೋಡಬೇಕು ಎನ್ನುವ ಆಸೆ ಇತ್ತು. 2021ರಲ್ಲಿ ಮೆಕ್ಕಾ ಮದೀನಾಕ್ಕೆ ಹೊರಟ ನಾನು ಬೆಂಗಳೂರಿನಿಂದ ಮಹರಾಷ್ಟ್ರದವರೆಗೆ ಹೋಗಿದ್ದೆ. ಆದರೆ, ಲಾಕ್ ಡೌನ್ ಘೋಷಣೆಯಾದ ಕಾರಣ ಮರಳಿ ಬೆಂಗಳೂರಿಗೆ ಬಂದಿದ್ದೆ. ಇದೀಗ ಮತ್ತೆ ಮೆಕ್ಕಾಕ್ಕೆ ಸೈಕಲ್ ಮೇಲೆ ಹೊರಟಿದ್ದು, ನನ್ನ ಯಾತ್ರೆ ಸುಗಮವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ದಾರಿಯಲ್ಲಿ ನಮಾಜ್ ಸಮಯವಾದಾಗ ಸಿಗುವ ಮಸೀದಿಗಳಿಗೆ ದರ್ಗಾಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ" ಎಂದು ತಿಳಿಸಿದರು.
ಧರ್ಮಾತೀತವಾಗಿ ಯಾತ್ರೆ ಯಶಸ್ಸಿಗೆ ಶುಭಕೋರಿದ ಜನ: ಬೆಂಗಳೂರಿನಿಂದ ಯಾತ್ರೆ ಆರಂಭಿಸಿರುವ ಇವರ ಪ್ರವಾಸಕ್ಕೆ ಅಭೂತಪೂರ್ವ ಮೆಚ್ಚುಗೆ ಸಿಗುತ್ತಿದೆ. ದಾರಿಯಲ್ಲಿ ಸಿಗುವ ಜನರು ಮಹ್ಮದ್ ಹಬೀಬ್ ಅವರಿಗೆ ಶುಭ ಕೋರುತ್ತಿದ್ದಾರೆ. ಧರ್ಮ - ಜಾತಿಯನ್ನು ವಿಚಾರಿಸದೇ ಹಬೀಬ್ ಯಾತ್ರೆ ಸುಗಮವಾಗಲಿ ಎಂದು ಆಶಿಸುತ್ತಿದ್ದಾರೆ. ಇವರ ಸೈಕಲ್ ಯಾತ್ರೆಗೆ ಪಾಕಿಸ್ತಾನದಲ್ಲಿ ಅವಕಾಶ ನೀಡದ ಕಾರಣ ಮುಂಬೈವರೆಗೆ ಸೈಕಲ್ ಯಾತ್ರೆ ಮಾಡಿ, ನಂತರ ಅಲ್ಲಿಂದ ವಿಮಾನದ ಮೂಲಕ ದುಬೈಗೆ ಹೋಗಿ ಅಲ್ಲಿಂದ ಮತ್ತೆ ಸೈಕಲ್ ಮೇಲೆ ಮೆಕ್ಕಾ ಮದೀನಾಕ್ಕೆ ಹೋಗುವುದಾಗಿ ಹಬೀಬ್ ತಿಳಿಸಿದ್ದಾರೆ.
![Bengaluru's Mohammed Habib embarks on a cycle pilgrimage to Mecca and Medinah](https://etvbharatimages.akamaized.net/etvbharat/prod-images/14-02-2025/23541460_thumbnailmeg.jpg)
ಎಲ್ಲರ ಒಳತಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ: ಆರೋಗ್ಯದ ಕಡೆಗೂ ಗಮನ ನೀಡಿರುವ ಹಬೀಬ್, "ನಿತ್ಯ 80 ರಿಂದ 120 ಕಿಲೋಮೀಟರ್ ಸೈಕಲ್ ಓಡಿಸುತ್ತೇನೆ. ಸುಮಾರು 5000 ಕಿ.ಮೀ. ಸೈಕಲ್ ಯಾತ್ರೆ ನಡೆಸಬೇಕಾಗಿದೆ. ದುಬೈಯಲ್ಲಿ ಮರಳುಗಾಡಿನ ಮಧ್ಯದಲ್ಲಿ ಸೈಕಲ್ ಓಡಿಸಬೇಕಾದರೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಸುಮಾರು 100 ರಿಂದ 200 ಕಿ.ಮೀ. ಜನವಸತಿ ಇರದ ಪ್ರದೇಶದಲ್ಲಿ ಸೈಕಲ್ ಓಡಿಸಬೇಕಾಗುತ್ತದೆ. ಅದಕ್ಕೆಲ್ಲಾ ಸರಿಯಾದ ಸಿದ್ಧತೆ ಮಾಡಿಕೊಂಡಿದ್ದೇನೆ. ಮೆಕ್ಕಾ ಮದೀನಾ ತಲುಪುತ್ತಿದ್ದಂತೆ ದೇಶಕ್ಕಾಗಿ, ಎಲ್ಲ ಧರ್ಮೀಯರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ. ಭಾರತದಲ್ಲಿ ಹಿಂದೂ, ಮುಸ್ಲಿಂ, ಇಸಾಯಿ, ಪಾರ್ಸಿ ಎಲ್ಲರೂ ಭಾವೈಕ್ಯದಿಂದ ಇದ್ದಾರೆ. ಆ ಭಾವೈಕ್ಯತೆ ಗಟ್ಟಿಯಾಗಲಿ. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಶಾಂತಿ ನೆಲೆಸಲಿ. ಜಗತ್ತಿನಲ್ಲಿ ಎಲ್ಲ ಧರ್ಮೀಯರು ಶಾಂತಿಯಿಂದ ಸಹಬಾಳ್ವೆ ನಡೆಸುವ ಬುದ್ಧಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಹಾವೇರಿಗೆ ಆಗಮಿಸಿದ ಹಬೀಬ್‌ಗೆ ಸ್ಥಳೀಯ ಮುಸ್ಲಿಂ ಯುವಕರು ಹೂವಿನಹಾರ ಹಾಕಿ ಬರಮಾಡಿಕೊಂಡರು. ಗೌರವ ಸಲ್ಲಿಸಿ ಹಬೀಬ್ ಯಾತ್ರೆ ಸುಗಮವಾಗಲಿ ಎಂದು ಶುಭಹಾರೈಸಿ ಹಬೀಬ್ ಬೀಳ್ಕೊಟ್ಟರು.