IRCTC Vistadome Tour Package: ಕಾಲಕಾಲಕ್ಕೆ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(ಐಆರ್‌ಸಿಟಿಸಿ) ಪ್ರಸಿದ್ಧ ಆಧ್ಯಾತ್ಮಿಕ ಸ್ಥಳಗಳು ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರಿಗೆ ಹೊಸ ಹೊಸ ಟೂರ್ ಪ್ಯಾಕೇಜ್‌ಗಳನ್ನು ಪ್ರಕಟಿಸುತ್ತದೆ. ಇತ್ತೀಚೆಗಷ್ಟೇ ಕರ್ನಾಟಕದ ಹಲವು ತಾಣಗಳನ್ನು ನೋಡಲು ಪ್ರವಾಸದ ಪ್ಯಾಕೇಜ್ ಘೋಷಿಸಿದೆ.
ಇದು 'ಕಟೀಲು-ಧರ್ಮಸ್ಥಳ-ಕುಕ್ಕೆ ವಿಸ್ಟಾಡೋಮ್ ಪ್ಯಾಕೇಜ್' ಟೂರ್. ಪ್ರವಾಸ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಆರಂಭವಾಗುತ್ತದೆ. 2 ರಾತ್ರಿ, 3 ಹಗಲಿನ ಟೂರ್ ಇದು.
ಡಿಸೆಂಬರ್ 28ರಂದು ವಿಸ್ಟಾಡೋಮ್ ರೈಲಿನ ಮೂಲಕ ಪ್ರವಾಸ ಆರಂಭ. ಅತ್ಯಾಧುನಿಕ ಕೋಚ್‌ಗಳು ಇದರಲ್ಲಿವೆ. ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನು ಸುಲಭವಾಗಿ ಆನಂದಿಸಲು ಅನುವಾಗುವಂತೆ ರೈಲನ್ನು ವಿನ್ಯಾಸಗೊಳಿಸಲಾಗಿದೆ.
ಸಕಲೇಶಪುರ - ಸುಬ್ರಹ್ಮಣ್ಯ ಘಾಟ್: ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ ವಿಸ್ಟಾಡೋಮ್ ಕೋಚ್‌ನಲ್ಲಿ ಪ್ರಯಾಣಿಸುವ ಮೂಲಕ ಹಸಿರು ಮತ್ತು ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ರಮಣೀಯ ಸಕಲೇಶಪುರ - ಸುಬ್ರಹ್ಮಣ್ಯ ಘಾಟ್ ವಿಭಾಗ ಪ್ರಯಾಣದ ಪ್ರಮುಖ ಆಕರ್ಷಣೆ.
ಸೋಮೇಶ್ವರ ಬೀಚ್:ಸೋಮೇಶ್ವರ ಬೀಚ್ ಕರಾವಳಿ ಕರ್ನಾಟಕದ ಮಂಗಳೂರು ನಗರದ ಹೊರವಲಯದಲ್ಲಿರುವ ಕಲ್ಲಿನ ಬೀಚ್. ಕಡಲತೀರಕ್ಕೆ ಸೋಮೇಶ್ವರ ದೇವಸ್ಥಾನ ಸಮೀಪದಲ್ಲಿರುವುದರಿಂದ ಈ ಹೆಸರು ಬಂದಿದೆ. ಸಮುದ್ರತೀರದಿಂದ ಆಕರ್ಷಕ ಸೂರ್ಯಾಸ್ತ ನೋಡಬಹುದು.
ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ನಂದಿನಿ ನದಿ ದಡದಲ್ಲಿವೆ. ದೇವಾಲಯವು ಉದ್ಭವ ಮೂರ್ತಿಯ ರೂಪದಲ್ಲಿದೆ. ದೇವಾಲಯದ ಕಂಬಗಳು ಸುಂದರವಾದ ಶಿಲ್ಪಗಳನ್ನು ಹೊಂದಿವೆ. ಇದು ಭಾರತದ ಪವಿತ್ರ ಹಿಂದೂ ದೇವಾಲಯಗಳ ಪೈಕಿ ಒಂದಾಗಿದೆ.
ಧರ್ಮಸ್ಥಳ: ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿಯ ದಡದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ. ಇದು ಕರ್ನಾಟಕದಲ್ಲಿ ಅತೀ ಹೆಚ್ಚು ಭಕ್ತರು ಭೇಟಿ ನೀಡುವ ಧಾರ್ಮಿಕ ಸ್ಥಳವೂ ಹೌದು. ಧಾರ್ಮಿಕ ಮತ್ತು ಸಾಂಸ್ಕೃತಿಕ ಸೌಹಾರ್ದತೆಗೂ ಹೆಸರುವಾಸಿ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಬೆಟ್ಟಗಳ ಮಧ್ಯೆ ನೆಲೆಸಿರುವ ಈ ಯಾತ್ರಾ ಕೇಂದ್ರವು ಕುಮಾರಧಾರ ನದಿ ದಡದಲ್ಲಿದೆ. ಅಂದಾಜು 5,000 ವರ್ಷಗಳಷ್ಟು ಹಳೆಯದು. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ಸರ್ಪದ ರೂಪದಲ್ಲಿ ಪೂಜಿಸಲಾಗುತ್ತದೆ. ಯಾವುದೇ ರೀತಿಯ ನಾಗ ದೋಷಗಳಿಂದ ಮುಕ್ತಿ ಪಡೆಯಲು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಪ್ರಯಾಣದ ವಿವರ:
1ನೇ ದಿನ: ಡಿಸೆಂಬರ್ 28ರಂದು (ಶನಿವಾರ) ಯಶವಂತಪುರ ರೈಲು ನಿಲ್ದಾಣದಿಂದ ಬೆಳಿಗ್ಗೆ 7ಕ್ಕೆ ರೈಲು (ರೈಲು ಸಂಖ್ಯೆ- 16539, ವಿಸ್ಟಾಡೋಮ್ ಕೋಚ್) ಹೊರಡುತ್ತದೆ. ಮಧ್ಯಾಹ್ನದವರೆಗೆ ವಿಸ್ಟಾಡೋಮ್ ಕೋಚ್‌ನಲ್ಲಿ ಪ್ರಕೃತಿಯ ಸೌಂದರ್ಯ ಕಣ್ತುಂಬಿಕೊಳ್ಳಿ. ಮಧ್ಯಾಹ್ನ 3.40 ಗಂಟೆಗೆ ಬಂಟ್ವಾಳ ನಿಲ್ದಾಣದಲ್ಲಿ ಇಳಿಯಬೇಕು. ಮೊದಲೇ ಗೊತ್ತುಪಡಿಸಿದ ಕ್ಯಾಬ್ ಚಾಲಕರನ್ನು ಭೇಟಿ ಮಾಡಿ ಹಾಗೂ ಸೋಮೇಶ್ವರ ಬೀಚ್‌ಗೆ ಹೋಗುವುದು. ಇಲ್ಲಿ ಸಂಜೆವರೆಗೆ ಸಮಯ ಕಳೆಯುವುದು. ರಾತ್ರಿ ತಂಗಲು ನಂತರ ಹೋಟೆಲ್‌ನಲ್ಲಿ ಚೆಕ್ಇನ್ ಮಾಡಬೇಕಾಗುತ್ತದೆ.
2ನೇ ದಿನ: ಡಿಸೆಂಬರ್ 29 (ಭಾನುವಾರ), ಹೋಟೆಲ್‌ನಿಂದ ಚೆಕ್ ಔಟ್ ಮಾಡಿದ ನಂತರ, ಕಟೀಲು ದೇವಸ್ಥಾನಕ್ಕೆ ತೆರಳುವುದು. ನಂತರ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ. ಬಳಿಕ ಕುಕ್ಕೆಗೆ ಪ್ರಯಾಣ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವುದು. ಸಂಜೆ 7.30 ಗಂಟೆಗೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ರಾತ್ರಿ ಡ್ರಾಪ್ ಮಾಡಲಾಗುತ್ತದೆ. ರೈಲು ಸಂಖ್ಯೆ 16586 ಮೂಲಕ ಬೆಂಗಳೂರಿಗೆ ರಾತ್ರಿ 8.40 ಗಂಟೆಗೆ ನಿರ್ಗಮನ. ಇಡೀ ರಾತ್ರಿ ಪ್ರಯಾಣ.
3ನೇ ದಿನ: ಸೋಮವಾರ ಬೆಳಿಗ್ಗೆ 6.15 ಗಂಟೆಗೆ ಬೆಂಗಳೂರಿಗೆ ತಲುಪಿದ ನಂತರ ಪ್ರವಾಸ ಮುಕ್ತಾಯ.
ಪ್ಯಾಕೇಜ್ನ ದರಗಳು:
- ಕಂಪರ್ಟ್ನಲ್ಲಿ (ಪ್ರತೀ ವ್ಯಕ್ತಿಗೆ ಟಿಕೆಟ್ ಬೆಲೆ)ಸಿಂಗಲ್ ಸೀಟ್ ಹಂಚಿಕೆ- ₹18,060
- ಡಬಲ್ ಸೀಟ್ ಹಂಚಿಕೆಗೆ ₹11,100
- ಟ್ರಿಪಲ್ ಸೀಟು ಹಂಚಿಕೆಗಾಗಿ ₹9,080
- 5-11 ವರ್ಷದೊಳಗಿನ ಮಕ್ಕಳು ಹಾಸಿಗೆ ಸಹಿತ ₹7,230, ಹಾಸಿಗೆ ರಹಿತ ₹6,670
- ಪ್ಯಾಕೇಜ್ನಲ್ಲಿ ಏನೆಲ್ಲಾ ಒಳಗೊಂಡಿದೆ?:
- ರೈಲು ಟಿಕೆಟ್‌ಗಳು- EC (Vistadome)ನಲ್ಲಿ ರೈಲು ಪ್ರಯಾಣ ಮತ್ತು 3ACನಲ್ಲಿ ಹಿಂತಿರುಗುವ ರೈಲು ಪ್ರಯಾಣ
- ಮಂಗಳೂರಿನಲ್ಲಿ 1 ರಾತ್ರಿ ವಸತಿ
- ಹೋಟೆಲ್‌ನಲ್ಲಿ ಮಾತ್ರ ಉಚಿತ ಉಪಹಾರ
- ಪ್ರಯಾಣದ ಪ್ರಕಾರ ಎಲ್ಲಾ ದೃಶ್ಯವೀಕ್ಷಣೆಯ ಮತ್ತು ವಿಹಾರಕ್ಕಾಗಿ AC ಮಿಡ್ ಸೆಗ್ಮೆಂಟ್ ಕ್ಯಾಬ್.
- ಪ್ರಯಾಣ ವಿಮೆ.
- ಮೇಲಿನ ಸೇವೆಗೆ ಟೋಲ್, ಪಾರ್ಕಿಂಗ್ ಮತ್ತು ಎಲ್ಲಾ ಅನ್ವಯವಾಗುವ ತೆರಿಗೆಗಳು.
- ಪ್ರವಾಸದ ಬುಕ್ಕಿಂಗ್, ಈ ಪ್ಯಾಕೇಜ್‌ಗೆ ಸಂಬಂಧಿಸಿದಷರತ್ತುಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗೆ ಈ ವೆಬ್ಸೈಟ್ ವೀಕ್ಷಿಸಿ:https://www.irctctourism.com/pacakage_description?packageCode=SBR035
ಇದನ್ನೂ ಓದಿ:ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾ, ಏಕತೆಯ ಪ್ರತಿಮೆ ವೀಕ್ಷಿಸಲು IRCTC 'ಸುಂದರ ಸೌರಾಷ್ಟ್ರ ಪ್ಯಾಕೇಜ್'