ಉಡುಪಿ:ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಅಂಗ ಸಂಸ್ಥೆ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ.ಅಂಜು ಶುಕ್ಲಾ ನೇತೃತ್ವದ ತಂಡವು ಅಮೆರಿಕದ ಮಿಚಿಗನ್ ವಿವಿಯ ಸ್ವೀಪನಿ ಬಿಲಾಸ್, ಪಿಟ್ಸ್ಬರ್ಗ್ ವಿವಿಯ ಡಾ.ಕ್ಲಾಸರ್ ಪ್ಯಾಡಿಟ್ ಸಹಭಾಗಿತ್ವದಲ್ಲಿ ನಡೆಸಿದ ಸಂಶೋಧನೆಯಲ್ಲಿ ಇಪಿಬಿ-41 ಎಲ್-3 (ಇಪಿಬಿ41 ಎಲ್3) ಅನುವಂಶಿಕ ಅಸಹಜ ಜೀನ್ನಲ್ಲಿ (ಧಾತುವಿನ) ನ್ಯೂನತೆಗೆ ಸಂಬಂಧಿಸಿ ಹೊಸ ಅನುವಂಶೀಯ ಮೆದುಳಿನ ಅಸ್ವಸ್ಥತೆ (ನ್ಯೂ ಜೆನಿಟಿಕ್ ಡಿಸ್ ಆರ್ಡರ್) ಶೋಧಿಸಿದ್ದಾರೆ.
ಸಂಶೋಧನೆ ಏನು ಹೇಳುತ್ತೆ?: ಈ ಅವಿಷ್ಕಾರವು ಮೆದುಳಿನ ರೋಗಗ್ರಸ್ತವಾಗುವಿಕೆ, ಬೆಳವಣಿಗೆಯ ವಿಳಂಬ ಮತ್ತು ಮೈಲೀನೇಶನ್ನಲ್ಲಿನ ದೋಷಗಳನ್ನು ಉಂಟು ಮಾಡುವ ಅಸ್ವಸ್ಥತೆಯ ಮೇಲೆ ಬೆಳಕು ಚೆಲ್ಲುತ್ತದೆ. ಮೆದುಳಿನಲ್ಲಿನ ನರಗಳ ರಕ್ಷಣೆ ಮತ್ತು ತಡೆಗಟ್ಟುವಿಕೆಯು ಇದು ಪ್ರಮುಖ ಪ್ರಕ್ರಿಯೆಯಾಗಿದೆ. ಇಪಿಬಿ-41 ಎಲ್-3 (ಇಪಿಬಿ- 41 ಎಲ್-3) ಅನುವಂಶಿಕ ಅಸಹಜ ಜೀನ್ನಲ್ಲಿ (ಧಾತುವಿನ) ಆಗುವ ಬದಲಾವಣೆ ಮಿದುಳಿನ ಕಾಯಿಲೆಗೆ ಸಂಬಂಧಿಸಿದೆ. ಅನುವಂಶೀಯ ಮೆದುಳಿನ ಕಾಯಿಲೆಗೆ ಸಂಬಂಧಿಸಿದಂತೆ ಹೊಸ ಆವಿಷ್ಕಾರವನ್ನು ಪ್ರಥಮ ಬಾರಿಗೆ ಕಂಡು ಹಿಡಿಯಲಾಗಿದೆ. ಈ ಸಂಶೋಧನೆಯಲ್ಲಿ ಡಾ.ಪೂರ್ವಿ ಮಜೇತಿಯ, ಡಾ.ಎಲಿಜಬೆತ್ ವೆರ್ನ್, ಡಾ.ಗ್ಯುಲಿರ್ಮೋ ರೋಡ್ರಿಗಸ್ ಬೇ ಪಾಲ್ಗೊಂಡಿದ್ದರು.
ಜೊತೆಗೆ ಜಗತ್ತಿನಾದ್ಯಂತ ಅನೇಕ ತಜ್ಞರು ಈ ಸಂಶೋಧನೆಗೆ ಅನನ್ಯ ಕೊಡುಗೆ ನೀಡಿದ್ದಾರೆ. ಸಂಶೋಧನೆಯು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಂಶೋಧನಾ ಕಾರ್ಯಗಳಿಗೆ ವಿಶೇಷ ಪ್ರೋತ್ಸಾಹ ಮತ್ತು ಪೂರಕ ಸಂಶೋಧನಾ ವಾತಾವರಣ ಇರುವುದನ್ನು ಸೂಚಿಸುತ್ತದೆ ಎಂದು ಕೆಎಂಸಿಯ ಸಂಶೋಧನ ತಂಡದ ಮುಖ್ಯಸ್ಥ ಡಾ.ಅಂಜು ಶುಕ್ಲಾ ತಿಳಿಸಿದ್ದಾರೆ.
ಜೀನೋಮ್ ವಿಶ್ಲೇಷಣೆ:ಡಾ.ಅಂಜು ಶುಕ್ಲಾ ಮತ್ತು ಅವರ ತಂಡವು ನಾಲ್ಕು ವರ್ಷದ ಬಾಲಕನೊಬ್ಬನ ಕುಂಠಿತ ಬೆಳವಣಿಗೆ ಮತ್ತು ಪೂರ್ಣ ದತ್ತಾಂಶ (ಜೀನೋಮ್)ದ ಅಧ್ಯಯನ ರೋಗನಿರೋಧಕ ಶಕ್ತಿಯ ಕೊರತೆಗೆ ಸಂಬಂಧಿಸಿದಂತೆ ಈ ಸಂಶೋಧನಾ ಪಯಣ ಆರಂಭ ಗೊಂಡಿತ್ತು. ತಂಡದ ಜೀನೋಮ್ ವಿಶ್ಲೇಷಣೆಯು ಇಪಿಬಿ-41 ಎಲ್-3 (ಇಪಿಬಿ41 ಎಲ್3) ನ್ಯೂನತೆಯ ಸಂಭವನೀಯತೆಯನ್ನು ಪ್ರಸ್ತಾವಿಸಿತ್ತು. ಅಂತಾರಾಷ್ಟ್ರೀಯ ಸಂಶೋಧಕರ ಸಹಭಾಗಿತ್ವದಿಂದಾಗಿ ಫ್ರಾನ್ಸ್, ಈಜಿಪ್ಟ್, ಪಾಕಿಸ್ತಾನ ದೇಶಗಳಲ್ಲಿಯೂ ಸಮಾನ ಸಮಸ್ಯೆ ಇರುವಂತ ರೋಗಿಗಳನ್ನು ಗುರುತಿಸಿ ಈ ಸಮಸ್ಯೆಗೆ ಸಂಬಂಧಿಸಿದ ಕಾರಣವು ದೃಢಪಟ್ಟಿತ್ತು.