ಕರ್ನಾಟಕ

karnataka

ETV Bharat / international

ಭೀಕರ ಬರ: ಜನರ ಹಸಿವು ನೀಗಿಸಲು ನೂರಾರು ಆನೆಗಳ ಹತ್ಯೆಗೆ ಜಿಂಬಾಬ್ವೆ ನಿರ್ಧಾರ - Terrible Drought In Zimbabwe - TERRIBLE DROUGHT IN ZIMBABWE

ಆಫ್ರಿಕಾದ ಕೆಲವು ದೇಶಗಳಲ್ಲಿ ಭೀಕರ ಬರಗಾಲ ಆವರಿಸಿದೆ. ಅನ್ನ, ನೀರಿಗಾಗಿ ಜನರು ಇನ್ನಿಲ್ಲದ ಪಡಿಪಾಟಲು ಅನುಭವಿಸುತ್ತಿದ್ದಾರೆ. ಜನರ ಹಸಿವು ನೀಗಿಸಲು ಅಲ್ಲಿನ ಸರ್ಕಾರಗಳು ಆನೆ ಸೇರಿದಂತೆ ಇನ್ನಿತರ ವನ್ಯಜೀವಿಗಳನ್ನು ಕೊಲ್ಲಲು ನಿರ್ಧರಿಸಿವೆ. ಕಾಡು ಪ್ರಾಣಿಗಳ ಮಾಂಸದಿಂದ ಜನರ ಹಸಿವು ನೀಗಿಸುವುದು ಇದರ ಉದ್ದೇಶ. ಇತ್ತೀಚೆಗಷ್ಟೇ ನಮೀಬಿಯಾ ನೂರಾರು ಅನೆಗಳನ್ನು ಕೊಲ್ಲಲು ತೀರ್ಮಾನಿಸಿತ್ತು. ಇದೀಗ ಜಿಂಬಾಬ್ವೆ ಕೂಡಾ ಇದೇ ದಾರಿ ತುಳಿದಿದೆ.

ಆನೆಗಳು
ಆನೆಗಳು (AP)

By ETV Bharat Karnataka Team

Published : Sep 18, 2024, 8:39 AM IST

Updated : Sep 18, 2024, 10:03 AM IST

ಹರಾರೆ(ಜಿಂಬಾಬ್ವೆ): ಆಫ್ರಿಕಾ ಖಂಡದ ದಕ್ಷಿಣ ಭಾಗದ ದೇಶಗಳು ಕಂಡರಿಯದ ಬರಗಾಲ ಎದುರಿಸುತ್ತಿವೆ. ಜನರು ಹಸಿವಿನಿಂದ ವಿಲವಿಲ ಒದ್ದಾಡುವ ಪರಿಸ್ಥಿತಿ ತಲೆದೋರಿದೆ. ಜನರ ಹಸಿವು ನೀಗಿಸುವ ಉದ್ದೇಶದಿಂದ ಇದೀಗ ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ನೂರಾರು ಕಾಡಾನೆಗಳು ಹಾಗು ಇತರೆ ಪ್ರಾಣಿಗಳ ಹತ್ಯೆಗೆ ನಿರ್ಧಾರ ಕೈಗೊಂಡಿವೆ. ಇವುಗಳ ಮಾಂಸದಿಂದ ಜನರ ಹಸಿವು ನೀಗಿಸಲು ಮುಂದಾಗಿವೆ.

"ನಾವು ಸುಮಾರು 200 ಆನೆಗಳನ್ನು ಕೊಲ್ಲುತ್ತೇವೆ. ಅವುಗಳ ಮಾಂಸವನ್ನು ಅವಶ್ಯವಿರುವ ಸಮುದಾಯಗಳ ಜನರಿಗೆ ಹಂಚುತ್ತೇವೆ" ಎಂದು ಜಿಂಬಾಬ್ವೆ ಸೋಮವಾರ ತಿಳಿಸಿದೆ. ಇದೇ ರೀತಿ ನಮೀಬಿಯಾ ದೇಶ ಕೂಡಾ ವಾರದ ಹಿಂದೆ ಇಂಥದ್ದೇ ಕ್ರಮಕ್ಕೆ ಮುಂದಾಗಿತ್ತು. 700ಕ್ಕೂ ಹೆಚ್ಚು ಕಾಡುಪ್ರಾಣಿಗಳನ್ನು ಕೊಲ್ಲಲು ನಿರ್ಧರಿಸಿತ್ತು. ಈ ಪೈಕಿ 83 ಆನೆಗಳನ್ನು ಕೊಲ್ಲುವ ಕಾರ್ಯ ಅಲ್ಲಿ ನಡೆಯುತ್ತಿದೆ.

ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ನಿರ್ವಹಣಾ ಪ್ರಾಧಿಕಾರದ ವಕ್ತಾರ ತಿನಶೆ ಫರವೊ ಪ್ರತಿಕ್ರಿಯಿಸಿ, "ನಾವು ಅವಶ್ಯವಿರುವ ಸಮುದಾಯದ ಜನರಿಗೆ ಪ್ರಾಣಿಗಳನ್ನು ಬೇಟೆಯಾಡಲು ಅನುಮತಿ ನೀಡುತ್ತೇವೆ. ಅದೇ ರೀತಿ ಹಂಚಿಕೆಯಾದ 200 ಪ್ರಾಣಿಗಳನ್ನು ನಮ್ಮ ಪ್ರಾಧಿಕಾರ ಕೊಲ್ಲಲಿದೆ. ಅನುಮತಿ ಪತ್ರ ವಿತರಿಸಿದ ನಂತರ ಪ್ರಾಣಿಗಳನ್ನು ಹತ್ಯೆ ಮಾಡುವ ಕೆಲಸ ಪ್ರಾರಂಭಿಸುತ್ತೇವೆ" ಎಂದು ಹೇಳಿದರು.

ಈ ಆನೆಗಳನ್ನು ಜನರು ಬದುಕಲು ಕಷ್ಟಪಡುತ್ತಿರುವ ಪ್ರದೇಶಗಳಿಗೆ ಕೊಂಡೊಯ್ಯಲಾಗುವುದು ಎಂದು ಫರವೊ ತಿಳಿಸಿದರು. ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿರುವ ಹಾಗು ಮಾನವ ಮತ್ತು ವನ್ಯಜೀವಿಗಳ ನಡುವೆ ಆಹಾರ ಮತ್ತು ನೀರಿಗೆ ಸಂಘರ್ಷ ನಡೆಯುತ್ತಿರುವ ದೇಶದ ಪಶ್ಚಿಮ ಶುಷ್ಕ ಪ್ರದೇಶವಾದ ಹ್ವಾಂಗೆ ರಾಷ್ಟ್ರೀಯ ಉದ್ಯಾನವನ ಮುಂತಾದೆಡೆ ಆನೆಗಳ ಹತ್ಯೆ ಕೆಲಸ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.

ಹ್ವಾಂಗೆ ಪ್ರದೇಶ 45,000ಕ್ಕೂ ಹೆಚ್ಚು ಆನೆಗಳನ್ನು ಹೊಂದಿದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಕೇವಲ 15,000 ಆನೆಗಳನ್ನು ಹೊಂದುವ ಸಾಮರ್ಥ್ಯವಷ್ಟೇ ಇದೆ. ದೇಶದಲ್ಲಿ ಒಟ್ಟು 100,000 ಆನೆಗಳಿದ್ದು, ಇದು ದೇಶದ ರಾಷ್ಟ್ರೀಯ ಉದ್ಯಾನವನ ಸಾಮರ್ಥ್ಯದ ಎರಡು ಪಟ್ಟು ಹೆಚ್ಚು ಎಂದು ಉದ್ಯಾನವನದ ಅಧಿಕಾರಿಗಳು ಹೇಳಿದ್ದಾರೆ.

ಎಲ್ ನಿನೋ ಹವಾಮಾನ ಪ್ರಕ್ರಿಯೆಯು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಉದ್ಯಾನವನದ ಅಧಿಕಾರಿಗಳು ಕಳೆದ ಡಿಸೆಂಬರ್‌ನಲ್ಲಿ ಹೇಳಿರುವಂತೆ, ಬರಗಾಲದಿಂದಾಗಿ 100ಕ್ಕೂ ಹೆಚ್ಚು ಆನೆಗಳನ್ನು ಸಾವನ್ನಪ್ಪಿವೆ. ದೇಶವು ಮುಂಬರುವ ದಿನಗಳಲ್ಲಿ ಅತ್ಯಂತ ಹೆಚ್ಚು ತಾಪಮಾನ ಎದುರಿಸಲಿದ್ದು, ನೀರು, ಆಹಾರ ಸಿಗದೆ ಇನ್ನೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಫರವೊ ತಿಳಿಸಿದರು.

ಜಿಂಬಾಬ್ವೆಯ ಪರಿಸರ ಖಾತೆ ಸಚಿವೆ ಸಿಥೆಂಬಿಸೊ ನ್ಯಾನಿ, ಕಳೆದ ವಾರ ಸಂಸತ್ತಿನಲ್ಲಿ ಮಾತನಾಡುತ್ತಾ, ದೇಶದಲ್ಲಿ ನಮ್ಮ ಅವಶ್ಯಕತೆಗಿಂತ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳನ್ನು ನಮ್ಮ ಅರಣ್ಯ ಪ್ರದೇಶಗಳು ತಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಆನೆಗಳನ್ನು ಕೊಲ್ಲಲು ಅನುಮತಿ ನೀಡಿದ್ದೇನೆ ಎಂದು ಹೇಳಿದ್ದಾರೆ. ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಒಣಗಿಸಿ ಪೊಟ್ಟಣದಲ್ಲಿ ಪ್ಯಾಕ್ ಮಾಡಿ ಅವಶ್ಯವಿರುವ ಸಮುದಾಯದ ಜನರಿಗೆ ವಿತರಿಸುತ್ತೇವೆ. ಈ ಮೂಲಕ ಹಸಿವಿನಿಂದ ನರಳುತ್ತಿರುವ ಜನರಿಗೆ ಕೆಲವು ಪ್ರಮಾಣದ ಪ್ರೋಟೀನ್ ದೊರೆಯುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ:'ಯುದ್ಧ ಆರಂಭವಾಗಲಿದೆ, ಜಾಗ ಖಾಲಿ ಮಾಡಿ': ಲೆಬನಾನ್​ ಗಡಿ ನಿವಾಸಿಗಳಿಗೆ ಇಸ್ರೇಲ್ ಎಚ್ಚರಿಕೆ - Israel Hezbollah War

Last Updated : Sep 18, 2024, 10:03 AM IST

ABOUT THE AUTHOR

...view details