ಹರ್ಬಿನ್(ಚೀನಾ): ಜಾಗತಿಕವಾಗಿ ಕಾಡು ಹುಲಿಗಳ ಸಂಖ್ಯೆ 2010ರಲ್ಲಿ ಇದ್ದ ಸುಮಾರು 3,200ರಿಂದ 2024ರಲ್ಲಿ ಸುಮಾರು 5,500ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್) ತಿಳಿಸಿದೆ. ಚೀನಾ, ರಷ್ಯಾ, ಭಾರತ ಮತ್ತು ನೇಪಾಳ ಮುಂತಾದ ದೇಶಗಳಲ್ಲಿ ಕೂಡ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ ಅದು ಹೇಳಿದೆ.
ಈಶಾನ್ಯ ಚೀನಾದ ಹೀಲಾಂಗ್ ಜಿಯಾಂಗ್ ಪ್ರಾಂತ್ಯದ ಹರ್ಬಿನ್ ನಗರದಲ್ಲಿ ನಡೆಯುತ್ತಿರುವ ಹುಲಿಗಳು ಮತ್ತು ಚಿರತೆಗಳ ಸಂರಕ್ಷಣೆ ಮತ್ತು ಚೇತರಿಕೆ (Conservation and Recovery of Tigers and Leopards) ಕುರಿತ 2ನೇ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಈ ಅಂಕಿಅಂಶಗಳನ್ನು ಪ್ರಕಟಿಸಲಾಗಿದೆ.
ಜಾಗತಿಕ ಕಾಡು ಹುಲಿಗಳ ಸಂಖ್ಯೆ ಕುಸಿತವಾಗುತ್ತಿರುವುದು ನಿಂತು ಹೋಗಿದ್ದು, ಕಳೆದ ದಶಕದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ಚೀನಾದಲ್ಲಿ, ಕಾಡು ಹುಲಿಗಳ ಆವಾಸಸ್ಥಾನಗಳನ್ನು ಪರಿಣಾಮಕಾರಿಯಾಗಿ ಪುನಃಸ್ಥಾಪಿಸಲಾಗಿದೆ ಮತ್ತು ಸುಧಾರಿಸಲಾಗಿದೆ. ಇದು ಕಾಡು ಹುಲಿಗಳ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಡಬ್ಲ್ಯುಡಬ್ಲ್ಯುಎಫ್ ಬೀಜಿಂಗ್ ಪ್ರತಿನಿಧಿ ಕಚೇರಿಯ ಉಪ ಮಹಾನಿರ್ದೇಶಕ ಝೌ ಫೀ ಅವರು ಸೋಮವಾರ ಸಮಾವೇಶದಲ್ಲಿ ಹೇಳಿದರು.
ಹುಲಿಗಳು ಆಹಾರ ಸರಪಳಿಯ ಮೇಲ್ಭಾಗದಲ್ಲಿರುವ ಪ್ರಭೇದಗಳಲ್ಲಿ ಒಂದಾಗಿರುವುದರಿಂದ ಅವು ಆರೋಗ್ಯಕರ ಪರಿಸರ ವ್ಯವಸ್ಥೆಯ ಸೂಚಕವಾಗಿವೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಉದ್ಯಾನವನಗಳ ಸ್ಥಾಪನೆ, ಬೇಟೆಯಾಡುವಿಕೆ ನಿಷೇಧ ಮತ್ತು ಔಷಧಕ್ಕಾಗಿ ಹುಲಿ ಮೂಳೆಗಳ ವ್ಯಾಪಾರ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಸೇರಿದಂತೆ ವಿವಿಧ ಪ್ರಯತ್ನಗಳ ಮೂಲಕ ಚೀನಾ ಕಾಡು ಹುಲಿಗಳ ರಕ್ಷಣೆಗೆ ಗಮನಾರ್ಹ ಒತ್ತು ನೀಡಿದೆ.