ಕ್ಯಾಲಿಫೋರ್ನಿಯಾ(ಅಮೆರಿಕ): ಇಲ್ಲಿನ ಮೆಗಾ ಮಿಲಿಯನ್‌ಗಳ ಜಾಕ್‌ಪಾಟ್ ಲಾಟರಿ ಫಲಿತಾಂಶ ಪ್ರಕಟವಾಗಿದೆ. ಹೌದು, 3, 7, 37, 49, 55 ಸಂಖ್ಯೆಗಳ ವೈಟ್ ಬಾಲ್ಗಳು ಮತ್ತು 6ನೇ ಸಂಖ್ಯೆಯ ಗೋಲ್ಡನ್ ಮೆಗಾ ಬಾಲ್ ಹೊಂದಿಕೆಯಾದ ಲಾಟರಿ ಟಿಕೆಟ್ 1.22 ಬಿಲಿಯನ್ ಡಾಲರ್ (ಸುಮಾರು ರೂ. 10,418 ಕೋಟಿ) ಬೃಹತ್ ಮೊತ್ತದ ಜಾಕ್‌ಪಾಟ್ ಗೆದ್ದಿದೆ. ಈ ಟಿಕೆಟ್ ಕ್ಯಾಲಿಫೋರ್ನಿಯಾದಲ್ಲಿ ಮಾರಾಟ ಮಾಡಲಾಗಿದೆ ಎಂದು ಮೆಗಾ ಮಿಲಿಯನ್ಸ್ ವೆಬ್‌ಸೈಟ್ ತಿಳಿಸಿದೆ.
ಅಮೆರಿಕದ ಮೆಗಾ ಮಿಲಿಯನ್ ಲಾಟರಿಗಳ ಇತಿಹಾಸದಲ್ಲಿ ಇದು ಮೂರನೇ ಅತಿದೊಡ್ಡ ಲಾಟರಿ ಮೊತ್ತವಾಗಿದೆ. ಕಳೆದ ಮೂರು ತಿಂಗಳಿಂದ ಪ್ರತಿ ಬಾರಿ ಲಾಟರಿ ಹೊಡೆದಾಗಲೂ ಗೆಲ್ಲುವ ಸಂಖ್ಯೆ ಯಾರಿಗೂ ಹೊಂದಾಣಿಕೆಯಾಗದ ಕಾರಣ ಟಿಕೆಟ್ ಮಾರಾಟ ಮುಂದುವರಿದಿತ್ತು. ಅದರಿಂದ ಗೆಲುವಿನ ಮೊತ್ತ 10,000 ಕೋಟಿ ರೂ. ದಾಟಿತ್ತು. ಕ್ಯಾಲಿಫೋರ್ನಿಯಾದ ಕಾಟನ್‌ವುಡ್ ನಗರದ ರೋಂಡಾ ರಸ್ತೆಯಲ್ಲಿರುವ ಸರ್ಕಲ್ ಕೆ ನಲ್ಲಿರುವ ಸನ್‌ಶೈನ್ ಫುಡ್ ಮತ್ತು ಗ್ಯಾಸ್ ಸ್ಟೋರ್‌ನಲ್ಲಿ ಈ ಲಾಟರಿ ಟಿಕೆಟ್ ಮಾರಾಟವಾಗಿದೆ.
ಈ ಕುರಿತು ಸ್ಟೋರ್ ಮಾಲೀಕರ ಮಗ ಇಶಾರ್ ಗಿಲ್ ಮಾತನಾಡಿ, "ಸುಮಾರು 6,000 ಜನರಿರುವ ಸಣ್ಣ ಗ್ರಾಮೀಣ ಪಟ್ಟಣಕ್ಕೆ ಈ ಬಹುಮಾನದ ಟಿಕೆಟ್ ವರವಾಗಿದೆ. ಯಾರು ಲಾಟರಿ ಗೆದ್ದಿರಬಹುದು ಎಂಬುದರ ಬಗ್ಗೆ ನಮಗೆ ಸಣ್ಣ ಸುಳಿವು ಇಲ್ಲ. ಆದರೆ ಮುಂಚಿತವಾಗಿಯೇ ವಿಜೇತರಿಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ.