ನವದೆಹಲಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಯಾರೂ ಹತ್ಯೆ ಮಾಡಲು ಪ್ರಯತ್ನಿಸುತ್ತಿಲ್ಲವೇಕೆ ಎಂದು ಪ್ರಶ್ನಿಸುವ ಮೂಲಕ ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ವಿವಾದಕ್ಕೀಡಾಗಿದ್ದಾರೆ . ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಎರಡನೇ ಬಾರಿಗೆ ಹತ್ಯೆ ಯತ್ನ ನಡೆದ ನಂತರ ಮಸ್ಕ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಫ್ಲೋರಿಡಾದ ಗಾಲ್ಫ್ ಕೋರ್ಸ್ ಹೊರಗೆ ಟ್ರಂಪ್ ಮೇಲೆ ಭಾನುವಾರ ಗುಂಡಿನ ದಾಳಿ ನಡೆದಿದ್ದು, ಇದು ಅವರ ಮೇಲೆ ನಡೆದ ಎರಡನೇ ಗುಂಡಿನ ದಾಳಿಯಾಗಿದೆ.
ಟ್ರಂಪ್ ಅವರನ್ನು ಕೊಲ್ಲುವ ಉದ್ದೇಶದಿಂದಲೇ ಗುಂಡಿನ ದಾಳಿ ನಡೆಸಲಾಗಿತ್ತು ಎಂದು ಎಫ್ಬಿಐ ಹೇಳಿದೆ. ಈ ಹತ್ಯಾ ಪ್ರಯತ್ನದಲ್ಲಿ ಅವರಿಗೆ ಯಾವುದೇ ಅಪಾಯವಾಗಿಲ್ಲ ಹಾಗೂ ಅವರು ಸುರಕ್ಷಿತವಾಗಿದ್ದಾರೆ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಟ್ರಂಪ್ ಅವರ ಪ್ರಚಾರ ಮತ್ತು ಕಾನೂನು ಜಾರಿ ಕಚೇರಿ ವರದಿ ಮಾಡಿದೆ.
'ಯಾರೋ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಏಕೆ ಬಯಸುತ್ತಿದ್ದಾರೆ?' ಎಂದು ಬಳಕೆದಾರರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಟೆಸ್ಲಾ ಸಿಇಒ ಮಸ್ಕ್, '...ಆದರೆ ಯಾರೊಬ್ಬರೂ ಬೈಡನ್ ಅಥವಾ ಕಮಲಾ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿಲ್ಲವೇಕೆ' ಎಂದು ಬರೆದಿದ್ದಾರೆ. ಎಲೋನ್ ಮಸ್ಕ್ ಟ್ರಂಪ್ ಅವರ ಬೆಂಬಲಿಗರಾಗಿದ್ದು, ಆಗಾಗ ಅವರ ಪರವಾಗಿ ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ.