ಜೆರುಸಲೇಂ: ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಹಮಾಸ್ ಉಗ್ರರನ್ನು ಅಲ್ಲಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಅಂತಿಮ ಹಂತದಲ್ಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಕಾಲೇಜಿನ ಕೆಡೆಟ್ಗಳೊಂದಿಗಿನ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಹಮಾಸ್ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವತ್ತ ನಾವು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ನೆತನ್ಯಾಹು ಇತ್ತೀಚೆಗೆ ಗಾಜಾ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಸೇನೆಯ ಹಿರಿಯ ಕಮಾಂಡ್ನೊಂದಿಗೆ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಒಂಬತ್ತು ತಿಂಗಳ ಸುದೀರ್ಘ ಯುದ್ಧದ ಫಲಿತಾಂಶಗಳ ಬಗ್ಗೆ ಮೌಲ್ಯಮಾಪನ ಸಭೆ ನಡೆಸಿದ್ದರು. ಅದಾಗಿ ಒಂದು ದಿನದ ನಂತರ ಹಮಾಸ್ ಅನ್ನು ನಿರ್ಮೂಲನೆಗೊಳಿಸುವ ಅಂತಿಮ ಹಂತಕ್ಕೆ ಬಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ ಖಾನ್ ಯೂನಸ್ ಪ್ರದೇಶವನ್ನು ಖಾಲಿ ಮಾಡಿ ಬೇರೆ ಕಡೆ ತೆರಳುವಂತೆ ಇಸ್ರೇಲ್ ಮಿಲಿಟರಿ ಅಲ್ಲಿನ ನಾಗರಿಕರಿಗೆ ಸೋಮವಾರ ಸೂಚನೆ ನೀಡಿದೆ. ಈ ಪ್ರದೇಶದಲ್ಲಿ ಮತ್ತೆ ಗುಂಪುಗೂಡಿರುವ ಹಮಾಸ್ ಪಡೆಗಳ ವಿರುದ್ಧ ಹೋರಾಡಲು ಇಸ್ರೇಲ್ ಪಡೆಗಳು ನೆಲದ ಮೂಲಕ ಕಾರ್ಯಾಚರಣೆ ನಡೆಸಲು ಸಿದ್ಧವಾಗಿವೆ ಎಂದು ಅಂದಾಜಿಸಲಾಗಿದೆ. ಇಸ್ರೇಲ್ ಏಪ್ರಿಲ್ ಆರಂಭದಲ್ಲಿ ಖಾನ್ ಯೂನಿಸ್ನಲ್ಲಿ ನಡೆಸಿದ ದೊಡ್ಡ ಪ್ರಮಾಣದ ದಾಳಿಯನ್ನು ಪೂರ್ಣಗೊಳಿಸಿ, ತನ್ನ ಬಹುತೇಕ ಪಡೆಗಳನ್ನು ಅಲ್ಲಿಂದ ಹಿಂತೆಗೆದುಕೊಂಡಿತ್ತು.