ಮಾಸ್ಕೋ (ರಷ್ಯಾ):ಉಕ್ರೇನ್ ಮೇಲೆ ಯುದ್ಧ, ಪಾಶ್ಚಿಮಾತ್ಯ ರಾಷ್ಟ್ರಗಳಿಂದ ನಿರ್ಬಂಧ, ವ್ಯಾಪಾರ ಒಪ್ಪಂದಕ್ಕೆ ಹೊಡೆತ. ಇದೆಲ್ಲರ ಮಧ್ಯೆಯೂ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ 5ನೇ ಅವಧಿಗೆ ಆಯ್ಕೆಯಾಗಿದ್ದಾರೆ. ಉನ್ನತ ನ್ಯಾಯಾಲಯದ ಮುಖ್ಯಸ್ಥ ವ್ಯಾಲೆರಿ ಜೋರ್ಕಿನ್ ಅವರು ಪುಟಿನ್ ಅವರಿಗೆ ರಷ್ಯಾದ ಅಧ್ಯಕ್ಷರಾಗಿ 6 ವರ್ಷಗಳ ಅವಧಿಗೆ ಅಧಿಕಾರ ಬೋಧನೆ ಮಾಡಿದರು. ಕ್ರೆಮ್ಲಿನ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ದಾಖಲೆಯ ಐದನೇ ಅವಧಿಗೆ ಪುಟಿನ್ ಪ್ರಮಾಣ ವಚನ ಸ್ವೀಕರಿಸಿದರು.
ಜನರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಪುಟಿನ್ಗೆ, ಜೋರ್ಕಿನ್ ಅವರು ಅಧ್ಯಕ್ಷೀಯ ಸಂಕೇತಗಳನ್ನು ನೀಡಿದರು. ಅಂದರೆ ಸೇಂಟ್ ಜಾರ್ಜ್ ಅವರ ಚಿನ್ನದ ಶಿಲುಬೆ, ರಷ್ಯಾದ ಕೋಟ್ ಆಫ್ ಆರ್ಮ್ಸ್ ಮತ್ತು ಸದ್ಗುಣ ಮತ್ತು ಪ್ರಾಮಾಣಿಕತೆಯ ಗುರುತಾದ ಚಿನ್ನದ ಸರಪಳಿಯನ್ನು ಪಡೆದರು.
ಅಧಿಕಾರಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ:ರಷ್ಯಾದ ಪ್ರಭಾವಿ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. ಈ ಹಿಂದೆ ಅಧ್ಯಕ್ಷರ ಅಧಿಕಾರವಧಿ 4 ವರ್ಷಗಳಿದ್ದವು. ಇದಕ್ಕೆ ತಿದ್ದುಪಡಿ ತರಲಾಗಿದ್ದು, ಈಗ ಅದು 6 ವರ್ಷಕ್ಕೆ ಹೆಚ್ಚಿಸಲಾಗಿದೆ.