ವಾಷಿಂಗ್ಟನ್, ಅಮೆರಿಕ:ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಹೆಚ್ಚುತ್ತಿರುವ ನಡುವೆ, ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರೊಂದಿಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸೋಮವಾರ ಮಾತನಾಡಿದ್ದಾರೆ. ಈ ವೇಳೆ ಉಭಯ ನಾಯಕರು ಬಾಂಗ್ಲಾದೇಶದಲ್ಲಿನ ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ರಕ್ಷಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.
ಸವಾಲಿನ ಅವಧಿಯಲ್ಲಿ ಬಾಂಗ್ಲಾದೇಶದ ನಾಯಕತ್ವ ವಹಿಸಿಕೊಂಡಿರುವುದಕ್ಕೆ ಯೂನಸ್‌ಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸುಲ್ಲಿವಾನ್ ಧನ್ಯವಾದ ಹೇಳಿದ್ದಾರೆ ಎಂದು US ಸರ್ಕಾರ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಮಾನವ ಹಕ್ಕುಗಳ ರಕ್ಷಣೆಯ ಬದ್ಧತೆ : ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರ ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ರಕ್ಷಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣಯಲ್ಲಿ ಹೇಳಲಾಗಿದೆ. ಸುಲ್ಲಿವಾನ್ ಅವರು ಸಮೃದ್ಧ, ಸ್ಥಿರ ಮತ್ತು ಪ್ರಜಾಪ್ರಭುತ್ವ ಪರವಾದ ಬಾಂಗ್ಲಾದೇಶಕ್ಕಾಗಿ ಅಮೆರಿಕ ಬೆಂಬಲ ನೀಡಲಿದೆ ಪುನರುಚ್ಚರಿಸಿದ್ದಾರೆ. ದಕ್ಷಿಣ ಏಷ್ಯಾದ ರಾಷ್ಟ್ರವು ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ತಮ್ಮ ದೇಶದ ನಿರಂತರ ಬೆಂಬಲ ನೀಡುವುದಾಗಿ ಇದೇ ವೇಳೆ ಸುಲ್ಲಿವಾನ್ ಭರವಸೆ ನೀಡಿದ್ದಾರೆ.
84 ವರ್ಷದ ಯೂನಸ್ ಅವರು ಆಗಸ್ಟ್ 8 ರಂದು ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ ಉಂಟಾದ ಅತಿದೊಡ್ಡ ಪ್ರತಿಭಟನೆ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.