ವಾಷಿಂಗ್ಟನ್ ಡಿಸಿ:ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಫ್ಲೋರಿಡಾ ಪ್ರತಿನಿಧಿ ಮೈಕ್ ವಾಲ್ಟ್ಜ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಾಲ್ಟ್ಜ್ ನಿವೃತ್ತ ಆರ್ಮಿ ಗ್ರೀನ್ ಬೆರೆಟ್ ಆಗಿದ್ದು, ನ್ಯಾಷನಲ್ ಗಾರ್ಡ್‌ನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದರು. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುವ ವಿಮರ್ಶಕರಾಗಿರುವ ಇವರು, ಈ ಪ್ರದೇಶದಲ್ಲಿ ಸಂಭಾವ್ಯ ಸಂಘರ್ಷಕ್ಕೆ ಯುನೈಟೆಡ್ ಸ್ಟೇಟ್ಸ್ ಸಿದ್ಧವಾಗಬೇಕಾದ ಅಗತ್ಯತೆಯ ಬಗ್ಗೆ ನಿರಂತರವಾಗಿ ಕಳವಳ ವ್ಯಕ್ತಪಡಿಸುವುದರ ಜೊತೆಗೆ, ಧ್ವನಿ ಎತ್ತಿದವರು.
ಪ್ರಮುಖ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಟ್ರಂಪ್‌ಗೆ ಮಾಹಿತಿ ನೀಡುವ ಮತ್ತು ವಿವಿಧ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.
2021ರಲ್ಲಿ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಸೇನೆಯನ್ನು ವಾಪಸ್ ಕರೆದುಕೊಂಡ ಬೈಡನ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದ ವಾಲ್ಟ್ಜ್, ಟ್ರಂಪ್ ಅವರ ವಿದೇಶಾಂಗ ನೀತಿ ದೃಷ್ಟಿಕೋನಗಳನ್ನು ಸಾರ್ವಜನಿಕವಾಗಿ ಹೊಗಳಿದ್ದರು.