ಢಾಕಾ (ಬಾಂಗ್ಲಾದೇಶ) :ರಾಜಕೀಯವಾಗಿ ಅಸ್ಥಿರಗೊಂಡಿರುವ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ನಿಲ್ಲುತ್ತಿಲ್ಲ. ಇದೀಗ, ರೈಲ್ವೆ ಸಿಬ್ಬಂದಿ ಮುಷ್ಕರ ಆರಂಭಿಸಿದ್ದು, ದೇಶದೆಲ್ಲೆಡೆ ರೈಲು ಸಂಚಾರ ಸ್ಥಗಿತವಾಗಿದೆ. ಇದರಿಂದ ಸಾರ್ವಜನಿಕರ ಪ್ರಯಾಣ ಮತ್ತು ಸರಕು ಸಾಗಣೆಯ ಮೇಲೆ ಭಾರೀ ಪರಿಣಾಮ ಉಂಟಾಗಿದೆ.
ಮಂಗಳವಾರದಿಂದ ದೇಶಾದ್ಯಂತ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಪಿಂಚಣಿ ಮತ್ತು ಇತರ ಸವಲತ್ತುಗಳನ್ನು ಒದಗಿಸಲು ಕೋರಿ ರೈಲ್ವೆ ಸಿಬ್ಬಂದಿ ಮುಷ್ಕರ ಆರಂಭಿಸಿದ್ದಾರೆ. ರೈಲ್ವೆ ಸಿಬ್ಬಂದಿಯ ಮುಖಂಡರ ಜೊತೆ ಸರ್ಕಾರ ನಡೆಸಿದ ಮಾತುಕತೆ ವಿಫಲವಾಗಿದೆ.
"ಮೊಹಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ರೈಲ್ವೆ ಸಿಬ್ಬಂದಿ ಜೊತೆ ಸೋಮವಾರ ಸಭೆ ನಡೆಸಿದ್ದು, ಯಾವುದೇ ಫಲ ಕಂಡಿಲ್ಲ. ಇದರಿಂದಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಮುಷ್ಕರ ಅನಿರ್ದಿಷ್ಟಾವಧಿಗೆ ಮುಂದುವರಿಯುತ್ತದೆ" ಎಂದು ಬಾಂಗ್ಲಾದೇಶ ರೈಲ್ವೆ ರನ್ನಿಂಗ್ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್‌ನ ಹಂಗಾಮಿ ಅಧ್ಯಕ್ಷ ಸೈದೂರ್ ರೆಹಮಾನ್ ಎಚ್ಚರಿಕೆ ರವಾನಿಸಿದ್ದಾರೆ.
ಪ್ರಯಾಣಿಕರ ಪರದಾಟ :ರೈಲ್ವೆ ಸಿಬ್ಬಂದಿಯ ಮುಷ್ಕರದ ಬಗ್ಗೆ ಮಾಹಿತಿ ಇಲ್ಲದ ಪ್ರಯಾಣಿಕರು ರೈಲು ನಿಲ್ದಾಣಗಳಿಗೆ ಆಗಮಿಸುತ್ತಿದ್ದಾರೆ. ರಾಜಧಾನಿ ಢಾಕಾದ ಕಮಲಾಪುರ ರೈಲು ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ರೈಲಿಗಾಗಿ ಕಾದು ಕುಳಿತಿದ್ದರು. ಬಳಿಕ ಮುಷ್ಕರದ ಬಗ್ಗೆ ತಿಳಿದು ಮನೆಯ ಹಾದಿ ಹಿಡಿದರು. ಈ ವೇಳೆ ರೈಲ್ವೆ ವ್ಯವಹಾರಗಳ ಸಲಹೆಗಾರ ಫೌಜುಲ್ ಕಬೀರ್ ಖಾನ್ ಸ್ಥಳಕ್ಕೆ ಭೇಟಿ ನೀಡಿದಾಗ, ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಮಾಧ್ಯಮಗಳ ಜೊತೆ ಮಾತನಾಡಿದ ದೇಶದ ರೈಲ್ವೆ ವ್ಯವಹಾರಗಳ ಸಲಹೆಗಾರರು, ರಾಷ್ಟ್ರವ್ಯಾಪಿ ನಡೆಯುತ್ತಿರುವ ಮುಷ್ಕರವು ವಿಷಾದನೀಯ. ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದ್ದು, ಅದನ್ನು ನಿಭಾಯಿಸಲು ಪ್ರಯತ್ನಿಸಲಾಗುತ್ತಿದೆ. ಪ್ರತಿಭಟನಾಕಾರರು ಮುಷ್ಕರವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದರು. ಬಿಕ್ಕಟ್ಟು ಪರಿಹಾರಕ್ಕೆ ಸರ್ಕಾರದ ಜೊತೆ ಮಾತುಕತೆಗೆ ಬರಲು ಪ್ರತಿಭಟನಾಕಾರರಿಗೆ ಮನವಿ ಮಾಡಿದರು.