ಚೀಕ್ಟೊವಾಗಾ, ಅಮೆರಿಕ:ಹಾರಾಟದ ವೇಳೆ ವಿಮಾನದ ಬಾಗಿಲು ಮುರಿದು ಬಿದ್ದ ಕಾರಣ ಬಫಲೋ ನಯಾಗರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ. ವಿಮಾನವು ಚೀಕ್ಟೋವಾಗಾದಿಂದ ಬರುತ್ತಿತ್ತು. ಹಾರಾಟದ ವೇಳೆ ವಿಮಾನದ ಬಾಗಿಲು ಮುರಿದು ಬಿದ್ದಿದೆ. ಹೀಗಾಗಿ ಸಣ್ಣ ವಿಮಾನವೊಂದು ಬಫಲೋ ವಿಮಾನ ನಿಲ್ದಾಣದ ಬಳಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.
ಅಪಘಾತದ ಬಗ್ಗೆ ನಯಾಗರಾ ಫ್ರಾಂಟಿಯರ್ ಸಾರಿಗೆ ಪ್ರಾಧಿಕಾರವು ಹೇಳಿಕೆ ಬಿಡುಗಡೆ ಮಾಡಿದ್ದು, ನಿನ್ನೆ ಸಂಜೆ 6 ಗಂಟೆಗೂ ಮುನ್ನ ಆಗಸದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನದ ಹಿಂಭಾಗದ ಬಾಗಿಲು ಮುರಿದು ಬಿದ್ದಿದೆ. ವಿಮಾನದಿಂದ ಬಾಗಿಲು ಬೇರ್ಪಟ್ಟ ನಂತರ ವಿಮಾನವು ಬಫಲೋ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಗ್ನೇಚರ್ ಏವಿಯೇಷನ್ ಟರ್ಮಿನಲ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ವಕ್ತಾರರು ತಿಳಿಸಿದ್ದಾರೆ.
ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಮತ್ತು ಪೈಲಟ್ ಇದ್ದರು. ಚೀಕ್ಟೋವಾಗಾದಲ್ಲಿರುವ ಸ್ಟೀಗ್ಲ್‌ಮಿಯರ್ ಪಾರ್ಕ್‌ನಲ್ಲಿ ಹಾರಾಟ ನಡೆಸುತ್ತಿದ್ದಾಗ ವಿಮಾನದ ಬಾಗಿಲು ಮುರಿದು ಬಿದ್ದಿದೆ ಎಂದು ಪೈಲಟ್ ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ ಘಟನೆಯಿಂದ ಯಾವುದೇ ಗಾಯಗಳು ಅಥವಾ ಆಸ್ತಿ ಹಾನಿ ದೃಢಪಡಿಸಲಾಗಿಲ್ಲ. ಆಡಿಯೋ ರೆಕಾರ್ಡಿಂಗ್‌ನಲ್ಲಿ, ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲರ್‌ಗಳನ್ನು ಸಂಪರ್ಕಿಸಿದ್ದರು. "ನಾವು ತುರ್ತು ಪರಿಸ್ಥಿತಿಯಲ್ಲಿದ್ದೇವೆ, ಹಿಂತಿರುಗುತ್ತಿದ್ದೇವೆ. ವಿಮಾನದ ಹಿಂಬಾಗಿಲನ್ನು ಕಳೆದುಕೊಂಡಿದ್ದೇವೆ" ಎಂದು ಪೈಲಟ್ ಹೇಳಿದ್ದು ದಾಖಲಾಗಿದೆ.
ಪೊಲೀಸರು ವಿಮಾನದ ಬಾಗಿಲುಗಳಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದರೆ ಅವುಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಪ್ರದೇಶದ ನಿವಾಸಿಗಳು ವಿಮಾನದ ಬಾಗಿಲಿನ ಬಗ್ಗೆ ಯಾವುದೇ ಮಾಹಿತಿ ಇದ್ದರೆ (716) 686-3500 ಗೆ ಕರೆ ಮಾಡಿ ಎಂದು ಚೀಕ್ಟೋವಾಗಾ ಪೊಲೀಸರು ಮನವಿ ಮಾಡಿದ್ದಾರೆ.
ಓದಿ:ಭಾರತೀಯ ನೌಕಾಪಡೆ ಮಾಜಿ ಸಿಬ್ಬಂದಿ ಬಿಡುಗಡೆ ಬೆನ್ನಲ್ಲೇ ಫೆ.14ರಂದು ಮೋದಿ ಕತಾರ್ ಭೇಟಿ