ಕರ್ನಾಟಕ

karnataka

ETV Bharat / international

ಲೆಬನಾನ್‌ ರಾಜಧಾನಿ ಬೈರುತ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 11 ಜನರ ಸಾವು, ಹಲವರಿಗೆ ಗಾಯ - ISRAELI AIRSTRIKES ON BEIRUT

ಲೆಬನಾನ್‌ ರಾಜಧಾನಿ ಬೈರುತ್‌ನಲ್ಲಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದಾರೆ.

ಬೈರುತ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ
ಬೈರುತ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ (AP)

By ANI

Published : Nov 23, 2024, 10:31 PM IST

ಬೈರುತ್‌(ಲೆಬನಾನ್‌): ರಾಜಧಾನಿ ಬೈರುತ್​ನಲ್ಲಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಶನಿವಾರ ಮುಂಜಾನೆ 4 ಗಂಟೆಗೆ ನಡೆದ ದಾಳಿಯಲ್ಲಿ ಎಂಟು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಮತ್ತೊಂದೆಡೆ ಡ್ರೋನ್ ದಾಳಿಯಿಂದ ದಕ್ಷಿಣ ಬಂದರು ನಗರವಾದ ಟೈರ್‌ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲೆಬನಾನ್‌ನ ಸಿವಿಲ್ ಡಿಫೆನ್ಸ್, ಅವಶೇಷಗಳ ಅಡಿ ಸಿಲುಕಿರುವವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುತ್ತಿದೆ. ಒಂದು ವಾರದ ಅವಧಿಯಲ್ಲಿ ಬೈರುತ್ ಮೇಲೆ ಇಸ್ರೇಲ್‌ ನಡೆಸಿದ ನಾಲ್ಕನೇ ವೈಮಾನಿಕ ದಾಳಿ ಇದಾಗಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಹೋರಾಟವನ್ನು ಕೊನೆಗೊಳಿಸಲು, ಕದನ ವಿರಾಮ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ರಾಯಭಾರಿ ಅಮೋಸ್ ಹೊಚ್ಸ್ಟೈನ್ ಇತ್ತೀಚಿಗೆ ಈ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸಂಘರ್ಷ ಮತ್ತೆ ಉಲ್ಬಣಗೊಂಡಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಕಳೆದ ಎರಡು ತಿಂಗಳುಗಳಲ್ಲಿ ಪೂರ್ಣ ಪ್ರಮಾಣದ ಯುದ್ಧದ ಸ್ವರೂಪ ಪಡೆದು ಕೊಂಡಿದೆ.

ಯುದ್ಧ ಆರಂಭವಾದಾಗಿನಿಂದ ಇದುವರೆಗೂ 3500 ಜನರ ಸಾವು: ಲೆಬನಾನ್​ನಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ 3,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 15,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್ ದಾಳಿ ಪರಿಣಾಮ ಸುಮಾರು 1.2 ಮಿಲಿಯನ್ ಅಥವಾ ಲೆಬನಾನ್ ಜನಸಂಖ್ಯೆಯ ಕಾಲು ಭಾಗದಷ್ಟು ಜನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ. ಉತ್ತರ ಇಸ್ರೇಲ್​ನಲ್ಲಿ ಮತ್ತು ಲೆಬನಾನ್​ನಲ್ಲಿ ನಡೆದ ರಾಕೆಟ್​, ಡ್ರೋನ್​ ಮತ್ತು ಕ್ಷಿಪಣಿ ದಾಳಿಯಿಂದ ಸುಮಾರು 90 ಮಂದಿ ಸೈನಿಕರು ಮತ್ತು ಸುಮಾರು 50 ನಾಗರಿಕರು ಸಾವನ್ನಪ್ಪಿದ್ದಾರೆ.

ಇಸ್ರೇಲ್ ಸೇನೆ ಪ್ರತಿಕ್ರಿಯಿಸಿ, ಹಿಜ್ಬುಲ್ಲಾ ಭದ್ರಕೋಟೆಯಾದ ದಹಿಯೆಹ್‌ನಲ್ಲಿ ಹಲವಾರು ಕಮಾಂಡ್ ಸೆಂಟರ್‌ಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದಾಳಿಗೂ ಮುನ್ನ ಆ ಪ್ರದೇಶದಲ್ಲಿನ ನಾಗರಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ತಿಳಿಸಿದೆ.

ಗಾಜಾದಲ್ಲಿಯೂ ಮುಂದುವರಿದ ದಾಳಿ:ಶನಿವಾರ ಗಾಜಾದಲ್ಲಿಯೂ ದಾಳಿಗಳು ಮುಂದುವರಿದಿದ್ದು, ಖಾನ್ ಯೂನಿಸ್​ನಲ್ಲಿ ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ನಾಸೆರ್ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

ಸ್ಥಳೀಯ ಆರೋಗ್ಯ ಅಧಿಕಾರಿಗಳ ಪ್ರಕಾರ, ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಹೋರಾಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈ ವಾರ 44 ಸಾವಿರ ದಾಟಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ನೆತನ್ಯಾಹು, ಗ್ಯಾಲಂಟ್​, ಹಮಾಸ್​ ಮುಖ್ಯಸ್ಥ ದೀಫ್ ವಿರುದ್ಧ ಐಸಿಸಿ ಅರೆಸ್ಟ್ ವಾರಂಟ್

ABOUT THE AUTHOR

...view details