ನವದೆಹಲಿ: ಪರಮಾಣು ಶಕ್ತಿಯಿಂದ ಬೆಂಬಲಿತವಾಗಿರುವ ಯಾವುದೇ ರಾಷ್ಟ್ರವು ರಷ್ಯಾದ ಮೇಲೆ ಸಾಂಪ್ರದಾಯಿಕ ದಾಳಿಯನ್ನು ಜಂಟಿ ದಾಳಿ ಎಂದು ಪರಿಗಣಿಸಲಾಗುವುದು ಎಂದು ರಷ್ಯಾ ಘೋಷಿಸಿದೆ. ಈ ಸಂಬಂಧ ರೆಡಿ ಮಾಡಲಾದ ಪರಿಷ್ಕೃತ ಪರಮಾಣು ಸಿದ್ಧಾಂತಕ್ಕೆ ಮಾಸ್ಕೋ ಸಹಿ ಹಾಕಿದೆ. ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ಪ್ರಕಟಿಸಿದೆ. ಭಾರತ ಶೀಘ್ರದಲ್ಲೇ ದಿನಾಂಕಗಳನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.
ನವದೆಹಲಿಯಲ್ಲಿ ಮಂಗಳವಾರ ರಷ್ಯಾದ ಸ್ಪುಟ್ನಿಕ್ ಸುದ್ದಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, "ನಾವು ಈ ವರ್ಷ ಎರಡು ಬಾರಿ ನಮ್ಮ ದೇಶದಲ್ಲಿ ಪ್ರಧಾನಿ (ನರೇಂದ್ರ) ಮೋದಿ ಅವರನ್ನು ಸ್ವಾಗತಿಸಿದ್ದೇವೆ" ಎಂದು ಹೇಳಿದರು. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ದಿನಾಂಕಗಳನ್ನು ಶೀಘ್ರದಲ್ಲೇ ನಾವು ತಿಳಿಸುತ್ತೇವೆ. ದಿನಾಂಕಗಳು ಹಾಗೂ ಲಭ್ಯತೆಯನ್ನು ಆಧರಿಸಿ ಭೇಟಿಯ ದಿನವನ್ನು ಘೋಷಣೆ ಮಾಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಈ ವರ್ಷದ ಜುಲೈನಲ್ಲಿ ಮೋದಿ ಮತ್ತು ಪುಟಿನ್ ಭಾರತ - ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗಾಗಿ ಮಾಸ್ಕೋದಲ್ಲಿ ಭೇಟಿಯಾಗಿದ್ದರು. ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ನಂತರ ಮೋದಿಯವರ ಮೊದಲ ರಷ್ಯಾ ಭೇಟಿ ಇದಾಗಿದೆ. ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ರಷ್ಯಾ - ಉಕ್ರೇನ್ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿಕೊಂಡು ಬರುತ್ತಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಸೋವಿಯತ್ ಒಕ್ಕೂಟದ ವಿಭಜನೆಯ ನಂತರ ಹಾಗೂ ಉಕ್ರೇನ್ ದೇಶದ ರಚನೆಯಾದ ಬಳಿಕ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಆ ದೇಶಕ್ಕೆ ಭೇಟಿ ನೀಡಿದರು. ಉಕ್ರೇನ್‌ನಲ್ಲಿ ಭಾರತವು ಶಾಂತಿ ಶೃಂಗಸಭೆ ಆಯೋಜಿಸಲು ಬಯಸುವುದಾಗಿ ಮೋದಿಯವರಿಗೆ ತಿಳಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದರು.
ಕಜಾನ್ನಲ್ಲಿ ಸಿದ್ದವಾಗಿತ್ತು ಮಹತ್ವದ ವೇದಿಕೆ:ಕಳೆದ ತಿಂಗಳು ಟಾಟರ್ಸ್ತಾನನ ಕಜಾನ್ ನಗರದಲ್ಲಿ ರಷ್ಯಾ ಆಯೋಜಿಸಿದ್ದ ಬ್ರಿಕ್ಸ್ ಶೃಂಗಸಭೆ ವೇಳೆ ಮೋದಿ ಮತ್ತು ಪುಟಿನ್ ಮತ್ತೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಪುಟಿನ್ ಅವರ ಭಾರತ ಭೇಟಿಯ ಕ್ರೆಮ್ಲಿನ್ ಘೋಷಣೆಯು "ಶೀಘ್ರದಲ್ಲೇ" ಮಹತ್ವ ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇದರರ್ಥ ಎರಡು ದೇಶಗಳ ನಡುವಿನ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆ ಸಾಮಾನ್ಯವಾಗಿ ವರ್ಷದ ಮಧ್ಯಂತರದಲ್ಲಿ ನಡೆಯುತ್ತದೆ. ಈ ಬಾರಿ ಒಂದು ವರ್ಷದೊಳಗೆ ನಡೆಯಲಿದೆ ಎಂಬುದು ಈಗಾಗಲೇ ರಷ್ಯಾ ವಕ್ತಾರರ ಘೋಷಣೆಯಿಂದ ದೃಢಪಟ್ಟಿದೆ.
2000ನೇ ಇಸ್ವಿಯಿಂದ ನಡೆದುಕೊಂಡ ಬಂದ ಸಂಪ್ರದಾಯ:2000ನೇ ಇಸ್ವಿಯಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಭಾರತ-ರಷ್ಯಾ ಸ್ಟ್ರಾಟೆಜಿಕ್ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವೆ ವಾರ್ಷಿಕ ಶೃಂಗಸಭೆಗಳ ಸಂಪ್ರದಾಯವು ಪ್ರಾರಂಭವಾಯಿತು. ಈ ಒಪ್ಪಂದವು ಎರಡು ರಾಷ್ಟ್ರಗಳ ನಡುವಿನ ಉನ್ನತ ಮಟ್ಟದ ಸಂವಹನಗಳನ್ನು ಸಾಂಸ್ಥಿಕಗೊಳಿಸಿತು. ಅಷ್ಟೇ ಅಲ್ಲ ಸಂಬಂಧಗಳನ್ನು ಬಲಪಡಿಸಲು ಅವರ ಪರಸ್ಪರ ಬದ್ಧತೆ ತೋರುವ ಬಗ್ಗೆ ಒತ್ತಿ ಹೇಳಿತು. 2010 ರಲ್ಲಿ ಈ ಸಂಬಂಧ ಮತ್ತಷ್ಟು ಗಟ್ಟಿಯಾಯಿತು. ಎರಡೂ ರಾಷ್ಟ್ರಗಳ ನಡುವೆ ಪಾಲುದಾರಿಕೆಯನ್ನು ವಿಶೇಷ ಮತ್ತು ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲಾಯಿತು.
ಕೋವಿಡ್ನಿಂದ ಕೆಲ ಕಾಲ ಅಡೆತಡೆ:ಆದರೆ, 2019 ರ ಬಳಿಕ ಅಂದರೆ ಕೋವಿಡ್ ಸಾಂಕ್ರಮಿಕವು ಎರಡೂ ರಾಷ್ಟ್ರಗಳ ಈ ಸಾಂಸ್ಥಿಕ ಸಂವಹನಕ್ಕೆ ಅಡ್ಡಿಯಾಗಿ ಪರಿಣಮಿಸಿತು. ನಂತರ ಈ ಸಭೆ 2021ರಲ್ಲಿ ನಡೆಸಲಾಯಿತು. ಒಟ್ಟಿನಲ್ಲಿ ನವದೆಹಲಿ - ಮಾಸ್ಕೋ ಸಂಬಂಧವು ಬಲವಾಗಿಯೇ ಉಳಿದಿದೆ. ಉಕ್ರೇನ್ ಯುದ್ಧದ ಮುಖಾಂತರ ರಷ್ಯಾದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳ ಪ್ರಭಾವದಂತಹ ಸವಾಲುಗಳ ನಡುವೆ ಭಾರತದ ಜೊತೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿದೆ. ಅತ್ತ ಚೀನಾದೊಂದಿಗೆ ರಷ್ಯಾ ಸಾಮೀಪ್ಯವು ಹೆಚ್ಚುತ್ತಿದೆ. ಹೀಗಗಿ ಭಾರತ ಭಾರಿ ಎಚ್ಚರಿಕೆಯಿಂದ ಈ ಸಂಬಂಧವನ್ನು ನಿರ್ವಹಣೆ ಮಾಡುವ ಅಗತ್ಯವಿದೆ. ವೇಗವಾಗಿ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗಳ ನಡುವೆ ತಮ್ಮ ಪಾಲುದಾರಿಕೆ ಉಳಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಗುರುತಿಸುತ್ತಾರೆ.
ಹರ್ಷ್ ವಿ ಪಂತ್ ದೃಷ್ಟಿಕೋನದಲ್ಲಿ ಪುಟಿನ್ ಭಾರತ ಭೇಟಿ:ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಕಿಂಗ್ಸ್ ಇಂಡಿಯಾ ಇನ್‌ಸ್ಟಿಟ್ಯೂಟ್‌ನ ಇಂಟರ್ನ್ಯಾಷನಲ್ ರಿಲೇಶನ್ಸ್ ಪ್ರೊಫೆಸರ್ ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಥಿಂಕ್ ಟ್ಯಾಂಕ್‌ನ ಉಪಾಧ್ಯಕ್ಷ (ಅಧ್ಯಯನ ಮತ್ತು ವಿದೇಶಾಂಗ ನೀತಿ) ಹರ್ಷ್ ವಿ ಪಂತ್ ಈ ಬಗ್ಗೆ ಮಾತನಾಡಿದ್ದು, ಅವರ ಪ್ರಕಾರ ಪುಟಿನ್ ಅವರ ಮುಂಬರುವ ಭಾರತ ಭೇಟಿಯನ್ನು ನಾವು ಡೊನಾಲ್ಡ್ ಟ್ರಂಪ್ ಅವರ ಬೆಳಕಿನಲ್ಲಿ ನೋಡಬೇಕಾಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಆ ಬಳಿಕ ನಡೆಯುವ ಬೆಳವಣಿಗೆಗಳು ಭಾರಿ ಮಹತ್ವ ಪಡೆದುಕೊಂಡಿದೆ.
ಉಕ್ರೇನ್ ಯುದ್ಧದ ಆರಂಭದಿಂದಲೂ ಪುಟಿನ್ ಭಾರತಕ್ಕೆ ಭೇಟಿ ನೀಡಿಲ್ಲ ಎಂಬ ವಿಚಾರವವನ್ನು ಪಂತ್ ಅವರು ETV ಭಾರತ್‌ದೊಂದಿಗೆ ಹಂಚಿಕೊಂಡಿದ್ದಾರೆ. “ಮೋದಿ ಈ ವರ್ಷ ಎರಡು ಬಾರಿ ರಷ್ಯಾಕ್ಕೆ ಭೇಟಿ ನೀಡುವುದರೊಂದಿಗೆ, ಭಾರತಕ್ಕೆ ಪರಸ್ಪರ ಭೇಟಿ ನೀಡುವ ಸಮಯ ಬಂದಿದೆ ಎಂದು ಪುಟಿನ್ ಭಾವಿಸಿದ್ದಾರೆ. ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಅಂತಾರೆ ಅವರು. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಅನಿಶ್ಚಿತತೆಗಳು ಉಂಟಾಗುತ್ತವೆ ಎಂಬುದು ಪಂತ್ ಅವರ ಅಭಿಪ್ರಾಯವಾಗಿದೆ.
ಪುಟಿನ್ ಅವರು ಟ್ರಂಪ್ ಯುಗದಲ್ಲಿ ಭಾರತ-ರಷ್ಯಾ ಸಂಬಂಧಗಳ ಮಾರ್ಗಸೂಚಿ ಹೇಗಿರಬೇಕು ಎಂಬುದನ್ನು ತಿಳಿಸಲಿದ್ದಾರೆ ಎಂಬುದು ಅವರ ಅನಿಸಿಕೆಯಾಗಿದೆ. ಪುಟಿನ್ ಅವರ ಮುಂಬರುವ ಭೇಟಿಗೆ ಸಂಬಂಧಿಸಿದಂತೆ ಪಂತ್ ಚೀನಾದ ಬೆಳವಣಿಗೆಗಳ ಬಗ್ಗೆಯೂ ತಿಳಿಸಿದ್ದಾರೆ.
ಪ್ರಸ್ತುತ ಭಾರತ ರಷ್ಯಾ ಉತ್ತಮ ಬಾಂಧವ್ಯ ಹೊಂದಿವೆ.ಇನ್ನು ಇತ್ತೀಚಿನ ಬ್ರಿಕ್ಸ್ ಶೃಂಗದ ವೇಳೆ, ಚೀನಾ - ಭಾರತ ಗಡಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನೂ ಮಾಡಿವೆ. ಆದರೆ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಚೀನಾದ ಮೇಲೆ ಸಾಕಷ್ಟು ಒತ್ತಡವಿರುತ್ತದೆ. ಇಂತಹ ಸನ್ನಿವೇಶದಲ್ಲಿ ಭಾರತ ಅತ್ಯಂತ ಪ್ರಭಾವಶಾಲಿಯಾಗಲಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ರಷ್ಯಾ ಅಸ್ತಿತ್ವದಲ್ಲಿಲ್ಲ. ಇಲ್ಲಿ ಚೀನಾ ವಿರುದ್ಧ ಅಮೆರಿಕ ಸೆಣಸಬೇಕಾದರೆ ಭಾರತದ ನೆರವು ಬೇಕಾಗುತ್ತದೆ.