ಕೊಲಂಬೊ(ಶ್ರೀಲಂಕಾ):ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಶ್ರೀಲಂಕಾದಲ್ಲಿ ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ದಾಖಲೆಯ ಪ್ರಮಾಣದಲ್ಲಿ ಅಭ್ಯರ್ಥಿಗಳು ಮುಂದೆ ಬಂದಿದ್ದಾರೆ. ವಿಶೇಷವೆಂದರೆ, ಅಲ್ಪಸಂಖ್ಯಾತರಾಗಿರುವ ಮೂವರು ತಮಿಳರು, ಇಬ್ಬರು ಬೌದ್ಧ ಸನ್ಯಾಸಿಗಳು ಕೂಡ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 21ರಂದು ಚುನಾವಣೆ: ಈ ಬಾರಿಯ ಅತಿ ಹೆಚ್ಚು ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದಾರೆ. ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಪದಚ್ಯುತಿಗೆ ದೇಶಾದ್ಯಂತ ಹೋರಾಟ ರೂಪಿಸಿದ್ದ ಅರಗಲಾಯ ಸೇರಿದಂತೆ 39 ಜನರು ನಾಮಪತ್ರ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 21ರಂದು ಚುನಾವಣೆ ನಡೆಯಲಿದೆ. ಇಷ್ಟು ಪ್ರಮಾಣದ ಆಕಾಂಕ್ಷಿಗಳ ಪೈಕಿ ಒಬ್ಬ ಮಹಿಳಾ ಅಭ್ಯರ್ಥಿ ಇಲ್ಲ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಇದಕ್ಕೂ ಮೊದಲು, 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ 35 ಅಭ್ಯರ್ಥಿಗಳು ಕಣದಲ್ಲಿದ್ದರು. ಇದು ಈವರೆಗಿನ ಅತ್ಯಧಿಕ ದಾಖಲೆಯಾಗಿತ್ತು. ಅತಿ ಕಡಿಮೆ ಎಂದರೆ 1982ರಲ್ಲಿ ನಡೆದ ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ 6 ಮಂದಿ ಮಾತ್ರ ಅಭ್ಯರ್ಥಿಗಳಿದ್ದರು.
ನಾಮಪತ್ರ ಸಲ್ಲಿಕೆಗೆ ಇಂದು(ಆಗಸ್ಟ್ 15) ಕೊನೆಯ ದಿನವಾಗಿತ್ತು. ಕಣಕ್ಕಿಳಿಯಲು ಬಯಸಿದವರು ಬುಧವಾರದೊಳಗೆ ಠೇವಣಿ ಪಾವತಿಸಲು ಸೂಚಿಸಲಾಗಿತ್ತು. ಸ್ಥಳೀಯ ಕಾಲಮಾನ ಬೆಳಿಗ್ಗೆ 9ರಿಂದ 11 ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 40 ಠೇವಣಿಗಳು ಬಂದಿವೆ. ಆದರೆ ಅವರಲ್ಲಿ ಒಬ್ಬರು ನಾಮಪತ್ರ ಸಲ್ಲಿಸಿಲ್ಲ.