ವಾಷಿಂಗ್ಟನ್ ಡಿಸಿ, ಅಮೆರಿಕ: ಅಮೆರಿಕ ಅಧ್ಯಕ್ಷ ಜೋ ಬೈಡನ್, ಪ್ರಧಾನಿ ನರೇಂದ್ರ ಅವರ ಪೋಲೆಂಡ್ ಮತ್ತು ಉಕ್ರೇನ್ ಭೇಟಿಯನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಪ್ರಧಾನಿ ಮೋದಿ ಜತೆ ದೂರವಾಣಿ ಸಂಭಾಷಣೆ ನಡೆಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಈ ಭೇಟಿ ಶಾಂತಿಯ ಸಂದೇಶದ ಧ್ಯೋತಕ ಎಂದು ಶ್ಲಾಘಿಸಿದ್ದಾರೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಫೋನ್ ಸಂಭಾಷಣೆ ವೇಳೆ ಉಭಯ ನಾಯಕರು, ಯುರೋಪಿಯನ್ ರಾಷ್ಟ್ರಗಳ ಪ್ರವಾಸ ಮತ್ತು ಸೆಪ್ಟೆಂಬರ್‌ನಲ್ಲಿ ಮುಂಬರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆಯುವ ಸಂವಾದ ಮತ್ತು ಚರ್ಚೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಪೋಲೆಂಡ್ ಮತ್ತು ಉಕ್ರೇನ್‌ಗೆ ಐತಿಹಾಸಿಕ ಭೇಟಿ ನೀಡಿದ್ದಾರೆ. ಈ ವೇಳೆ, ಪ್ರಧಾನಿ ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿರುವುದನ್ನು ಬೈಡನ್ ಪ್ರಶಂಸಿದರು. ಮತ್ತು ಇಂಧನ ಕ್ಷೇತ್ರ ಸೇರಿದಂತೆ ಉಕ್ರೇನ್‌ಗೆ ಮಾನವೀಯ ಬೆಂಬಲ ಘೋಷಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.
ಪಿಎಂ ಮೋದಿ ಮತ್ತು ಅಧ್ಯಕ್ಷ ಬೈಡನ್ ವಿಶ್ವಸಂಸ್ಥೆ ಸನ್ನದು ಆಧಾರದ ಮೇಲೆ ಅಂತಾರಾಷ್ಟ್ರೀಯ ಕಾನೂನಿನ ಅನುಸಾರವಾಗಿ ಸಂಘರ್ಷದ ಶಾಂತಿಯುತ ಪರಿಹಾರ ಕ್ಕೆ ತಮ್ಮ ನಿರಂತರ ಬೆಂಬಲವನ್ನು ವ್ಯಕ್ತಪಡಿಸಿದರು. ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಕ್ವಾಡ್‌ನಂತಹ ಪ್ರಾದೇಶಿಕ ಗುಂಪುಗಳನ್ನು ಒಳಗೊಂಡಂತೆ ಒಟ್ಟಾಗಿ ಕೆಲಸ ಮಾಡುವ ತಮ್ಮ ನಿರಂತರ ಬದ್ಧತೆಯನ್ನು ಇದೇ ವೇಳೆ ಉಭಯ ನಾಯಕರು ವ್ಯಕ್ತಪಡಿಸಿದರು. ಇದಕ್ಕೂ ಮುನ್ನ, ಪ್ರಧಾನಿ ಮೋದಿ ಅವರು ಬೈಡನ್ರ ಇತ್ತೀಚಿನ ಉಕ್ರೇನ್ ಭೇಟಿಯ ಬಗ್ಗೆ ವಿವರಿಸಿದರು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಯ ಪರವಾಗಿ ಭಾರತದ ಸ್ಥಿರವಾದ ನಿಲುವನ್ನು ಪುನರುಚ್ಚರಿಸಿದರು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.