ಢಾಕಾ(ಬಾಂಗ್ಲಾದೇಶ):ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೀಸಲಾತಿ ವಿರೋಧಿ ಹೋರಾಟಕ್ಕೆ ಪ್ರಧಾನಿ ಶೇಖ್ ಹಸೀನಾ ತಲೆದಂಡವಾಗಿದೆ. ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ದೇಶ ತೊರೆದಿದ್ದಾರೆ. ಸೇನೆಯ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ವಕಾರ್ ಉಜ್ ಜಮಾನ್ ಹೇಳಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, "ರಾಷ್ಟ್ರವ್ಯಾಪಿ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಿ. ಸರ್ಕಾರವನ್ನು ವಜಾ ಮಾಡಲಾಗಿದೆ. ಸೇನಾಡಳಿತ ಇರಲಿದೆ. ಇಂದು ರಾತ್ರಿಯೊಳಗೆ ಎಲ್ಲ ಪ್ರತಿಭಟನಾಕಾರರು ಹೋರಾಟ ಹಿಂಪಡೆದು ವಾಪಸ್ ತೆರಳಬೇಕು" ಎಂದು ಮನವಿ ಮಾಡಿದ್ದಾರೆ.
ಸೇನೆಯ ಮೇಲೆ ನಂಬಿಕೆ ಇಡಿ:"ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿ. ಪ್ರತಿಭಟನಾಕಾರರು ಸೇನೆಯ ಮೇಲೆ ನಂಬಿಕೆ ಇಡಿ. ಸಂಘರ್ಷ ಮತ್ತು ಅದರಿಂದಾಗುವ ಹಾನಿ ತಪ್ಪಿಸಿ. ಆಕ್ಷೇಪಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ. ದೇಶದ ಒಳಿತಿಗಾಗಿ ಸಹಾಯ ಮಾಡಿ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕು. ದೇಶದಾದ್ಯಂತ ಕರ್ಫ್ಯೂ ವಿಧಿಸುವ ಅಥವಾ ತುರ್ತು ಪರಿಸ್ಥಿತಿ ಘೋಷಿಸುವ ಅಗತ್ಯವಿಲ್ಲ" ಎಂದರು.
ಬಾಂಗ್ಲಾ ಸಂಘರ್ಷಕ್ಕೇನು ಕಾರಣ?:ಬಾಂಗ್ಲಾದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ನಿವೃತ್ತ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 30ರಷ್ಟು ಮೀಸಲಿಡುವ ವಿವಾದಾತ್ಮಕ ಕಾನೂನನ್ನು ಹಿಂಪಡೆಯಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ನಡೆದ ಹೋರಾಟದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ಘರ್ಷಣೆಗಳು ಭುಗಿಲೆದ್ದಿವೆ. ಅಂದಿನಿಂದ, 11,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.