ಕರ್ನಾಟಕ

karnataka

ETV Bharat / international

ಕುವೈತ್‌ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ಕೋರಿದ ಅರಬ್​ ದೊರೆ - PM MODI ARRIVES IN KUWAIT

ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುವೈತ್​​ನ ಮೊದಲ ಉಪ ಪ್ರಧಾನಿ ಶೇಖ್ ಫಹಾದ್ ಯೂಸುಫ್ ಸೌದ್ ಅಲ್-ಸಬಾಹ್ ಅವರು ಸ್ವಾಗತ ನೀಡಿದರು.

ಕುವೈತ್‌ಗೆ ಬಂದಿಳಿದ ಪ್ರಧಾನಿ ಮೋದಿ
ಕುವೈತ್‌ಗೆ ಬಂದಿಳಿದ ಪ್ರಧಾನಿ ಮೋದಿ (modi X handle)

By PTI

Published : Dec 21, 2024, 4:59 PM IST

ಕುವೈತ್:ತಮ್ಮ ವಿಶೇಷ ಆಹ್ವಾನದ ಮೇರೆಗೆ ಕುವೈತ್​ಗೆ ಎರಡು ದಿನಗಳ ಭೇಟಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರಬ್​ ದೇಶದ ದೊರೆ ಶೇಖ್ ಮೆಶಾಲ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್ ಅದ್ಧೂರಿಯಾಗಿ ಸ್ವಾಗತಿಸಿದರು.

ಕುವೈತ್​ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭಾರತದ ಪ್ರಧಾನಿಯನ್ನು ಉಪ ಪ್ರಧಾನ ಮಂತ್ರಿ, ರಕ್ಷಣಾ ಮತ್ತು ಆಂತರಿಕ ಸಚಿವ ಶೇಖ್ ಫಹಾದ್ ಯೂಸುಫ್ ಸೌದ್ ಅಲ್-ಸಬಾಹ್ ಆತ್ಮೀಯವಾಗಿ ಬರಮಾಡಿಕೊಂಡರು.

ಮೋದಿಗೆ ಆತ್ಮೀಯ ಸ್ವಾಗತ:ಕುವೈತ್​​ನಲ್ಲಿ ತಮಗೆ ಸಿಕ್ಕ ಸ್ವಾಗತವನ್ನು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರಗಳ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. 'ಕುವೈತ್‌ಗೆ ಬಂದಿಳಿದಾಗ ಆತ್ಮೀಯ ಸ್ವಾಗತ ಸಿಕ್ಕಿತು. 43 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಒಬ್ಬರ ಮೊದಲ ಭೇಟಿಯಾಗಿದೆ. ಇದು ನಿಸ್ಸಂದೇಹವಾಗಿ ವಿವಿಧ ಕ್ಷೇತ್ರಗಳಲ್ಲಿ ಭಾರತ-ಕುವೈತ್ ಸ್ನೇಹವನ್ನು ಬಲಪಡಿಸುತ್ತದೆ. ಇಂದು ಮತ್ತು ನಾಳೆಯ ಕಾರ್ಯಕ್ರಮಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್​ ಖಾತೆಯಲ್ಲೂ ಈ ಬಗ್ಗೆ ಪೋಸ್ಟ್​ ಹಂಚಿಕೊಂಡಿದ್ದು, "ಹೊಸ ಅಧ್ಯಾಯ ಆರಂಭ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶೇಖ್ ಫಹಾದ್ ಯೂಸುಫ್ ಸೌದ್ ಅಲ್ ಸಬಾಹ್ ಅವರು ವಿಧ್ಯುಕ್ತ ಸ್ವಾಗತ ಕೋರಿದರು. ವಿವಿಧ ಗಣ್ಯರು ಇದ್ದರು" ಎಂದು ತಿಳಿಸಿದ್ದಾರೆ.

ಪ್ರಯಾಣಕ್ಕೂ ಮೊದಲು ಪೋಸ್ಟ್​ ಹಂಚಿಕೊಂಡಿದ್ದ ಪ್ರಧಾನಿ, ಎರಡು ದಿನಗಳ ಭೇಟಿಗಾಗಿ ಗಲ್ಫ್ ರಾಷ್ಟ್ರಕ್ಕೆ ಶನಿವಾರ ಪ್ರಯಾಣಿಸುತ್ತಿದ್ದೇನೆ. ಅಲ್ಲಿನ ಭಾರತೀಯ ವಲಸಿಗರೊಂದಿಗೆ ಭೇಟಿ, ಮಾತುಕತೆ ನಡೆಯಲಿದೆ. ಕುವೈತ್ ದೊರೆಯ ಜೊತೆ ಉಭಯ ರಾಷ್ಟ್ರಗಳ ಹಿತಾಸಕ್ತಿಯ ಕುರಿತು ಮಾತುಕತೆ ನಡೆಸಲಿದ್ದೇನೆ. ವಿವಿಧ ವಲಯಗಳಲ್ಲಿ ಭಾರತ-ಕುವೈತ್ ಸ್ನೇಹವನ್ನು ಬಲಪಡಿಸಲಾಗುವುದು ಎಂದು ತಿಳಿಸಿದ್ದರು.

ಭಾರತೀಯ ಕಾರ್ಮಿಕರ ಭೇಟಿ:ಪ್ರವಾಸದ ಆರಂಭದಲ್ಲಿ ಕುವೈತ್​ನ ಕಾರ್ಮಿಕ ಶಿಬಿರದಲ್ಲಿ ಭಾರತೀಯ ಉದ್ಯೋಗಿಗಳನ್ನು ಪ್ರಧಾನಿ ಭೇಟಿ ಮಾಡಲಿದ್ದಾರೆ. ಈ ವೇಳೆ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾರತದ ಸಂಬಂಧ ವೃದ್ಧಿಯಲ್ಲಿ ವಿದೇಶಿ ನಾಗರಿಕರ ಕೊಡುಗೆಯನ್ನು ಅವರು ತಿಳಿಸಲಿದ್ದಾರೆ.

ಪ್ರಧಾನಿ ಪ್ರವಾಸ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯ, ಈ ಭೇಟಿಯು ಎರಡು ದೇಶಗಳ ನಡುವೆ ಮತ್ತಷ್ಟು ಸಂಬಂಧ ವೃದ್ದಿಗೆ ಅವಕಾಶ ನೀಡುತ್ತದೆ ಎಂದು ತಿಳಿಸಿದೆ. ಈ ಪ್ರವಾಸದಲ್ಲಿ ಪ್ರಧಾನಿ, ವ್ಯಾಪಾರ, ಹೂಡಿಕೆ, ಇಂಧನ ಸಹಕಾರ ಸೇರಿದಂತೆ ಪ್ರಮುಖ ವಿಚಾರ ಕುರಿತು ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ:ಇಂದಿನಿಂದ ಎರಡು ದಿನಗಳ ಕಾಲ ಮೋದಿ ಕುವೈತ್​ ಪ್ರವಾಸ: ದ್ವಿಪಕ್ಷೀಯ ಸಂಬಂಧ ವೃದ್ಧಿ ಸಂಬಂಧ ಮಾತುಕತೆ

ABOUT THE AUTHOR

...view details