ನವದೆಹಲಿ/ಕಜಾನ್: ರಷ್ಯಾದ ಕಜಾನ್‌ನಲ್ಲಿ ನಡೆದ 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಎರಡು ದಿನಗಳ "ಪರಿಣಾಮಕಾರಿ" ಭೇಟಿಯನ್ನು ಮುಗಿಸಿ ದೆಹಲಿಗೆ ವಾಪಸ್ ಆಗಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಪ್ರಧಾನಿ ಮೋದಿ ಬುಧವಾರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.
ಮೋದಿ ಟ್ವೀಟ್ನಲ್ಲಿ ಹೇಳಿದ್ದೇನು?:"PM @narendramodi ಕಜಾನ್‌ನ ಪರಿಣಾಮಕಾರಿ ಭೇಟಿಯನ್ನು ಪೂರ್ಣಗೊಳಿಸಿದ್ದಾರೆ, ಶೃಂಗಸಭೆ ಪಾಲ್ಗೊಂಡು ನವದೆಹಲಿಗೆ ವಾಪಸ್ ಆಗುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಪ್ರಧಾನಿ ಮೋದಿ ಅವರ ರಷ್ಯಾ ಭೇಟಿ ಫಲಪ್ರದವಾಗಿದೆ ಎಂದು ವಿದೇಶಾಂಗ ಇಲಾಖೆ ಬಣ್ಣಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾದ ಜನರು ಮತ್ತು ಅವರ ಆತಿಥ್ಯಕ್ಕಾಗಿ ಅಲ್ಲಿನ ಸರ್ಕಾರಕ್ಕೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ.
ರಷ್ಯಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷತೆಯಲ್ಲಿ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಎರಡು ಅಧಿವೇಶನಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಬಗ್ಗೆ ಅವರು ತಮ್ಮ X ಹ್ಯಾಂಡಲ್ನಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. "ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ತುಂಬಾ ಫಲಪ್ರದವಾಗಿದೆ. ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ನಾನಾ ವಿಶ್ವ ನಾಯಕರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತು. ಅವರ ಆತಿಥ್ಯಕ್ಕಾಗಿ ನಾನು ಅಧ್ಯಕ್ಷ ಪುಟಿನ್, ರಷ್ಯಾದ ಜನರು ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
30 ಟ್ರಿಲಿಯನ್ ಆರ್ಥಿಕತೆ:"ಬ್ರಿಕ್ಸ್ ರಾಷ್ಟ್ರಗಳು $30 ಟ್ರಿಲಿಯನ್‌ಗಿಂತಲೂ ದೊಡ್ಡ ಆರ್ಥಿಕತೆ ಹೊಂದಿವೆ. ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಮತ್ತು ಬ್ರಿಕ್ಸ್ ಮಹಿಳಾ ಉದ್ಯಮ ಒಕ್ಕೂಟವು ನಮ್ಮ ಆರ್ಥಿಕ ಸಹಕಾರವನ್ನು ಹೆಚ್ಚಿಸುವಲ್ಲಿ ವಿಶೇಷ ಪಾತ್ರ ವಹಿಸಿದೆ. WTO ಸುಧಾರಣೆಗಳು, ವ್ಯಾಪಾರದ ಕುರಿತು ಈ ವರ್ಷ ಬ್ರಿಕ್ಸ್‌ನಲ್ಲಿ ಒಮ್ಮತವನ್ನು ತಲುಪಿದೆ. ಕೃಷಿ, ಸ್ಥಿತಿಸ್ಥಾಪಕತ್ವ ಪೂರೈಕೆ ಸರಪಳಿಗಳು, ಇ - ಕಾಮರ್ಸ್ ಮತ್ತು ವಿಶೇಷ ಆರ್ಥಿಕ ವಲಯಗಳು ಈ ಎಲ್ಲ ಉಪಕ್ರಮಗಳ ನಡುವೆ, ನಾವು ಬ್ರಿಕ್ಸ್ ಸ್ಟಾರ್ಟ್ಅಪ್ ಫೋರಮ್ ಪ್ರಸ್ತಾಪಿಸಿದ್ದಕ್ಕೆ ಸಂತೋಷಪಡುತ್ತೇವೆ. 2021 ರಲ್ಲಿ ಭಾರತದ ಅಧ್ಯಕ್ಷರ ಅವಧಿಯಲ್ಲಿ ಭಾರತವು ನೀಡಿದ ರೈಲ್ವೇ ರಿಸರ್ಚ್ ನೆಟ್‌ವರ್ಕ್ ಉಪಕ್ರಮವು ಬ್ರಿಕ್ಸ್ ದೇಶಗಳ ನಡುವೆ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ‘‘ ಎಂದು ಪ್ರಧಾನಿ ಹೇಳಿದ್ದಾರೆ.
ಹಲವು ಗಣ್ಯರೊಂದಿಗೆ ಪ್ರಧಾನಿ ಮಾತುಕತೆ: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಸೇರಿದಂತೆ ಹಲವಾರು ವಿಶ್ವ ನಾಯಕರನ್ನು ಪ್ರಧಾನಿ ಮೋದಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.
ಅಷ್ಟೇ ಅಲ್ಲ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರನ್ನು ಕಜಾನ್‌ನಲ್ಲಿ ಭೇಟಿಯಾದರು. ಎಕ್ಸ್‌ನಲ್ಲಿನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಕಜಾನ್‌ನಲ್ಲಿ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೆ ಸಂವಹನ ನಡೆಸಲು ಸಂತಸವಾಗುತ್ತಿದೆ‘‘ ಎಂದು ಹೇಳಿದ್ದಾರೆ.
ಚೀನಾ ಅಧ್ಯಕ್ಷರ ಭೇಟಿಯೇ ಶೃಂಗದ ಪ್ರಮುಖ ಹೈಲೈಟ್ಸ್: ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿ ಗಮನ ಸೆಳೆದರು. ಸುಮಾರು ಐದು ವರ್ಷಗಳ ಬಳಿಕ ಉಭಯ ನಾಯಕರು ಭೇಟಿಯಾಗಿದ್ದಾರೆ. ಗಲ್ವಾನ್ ಕಣಿವೆ ಘರ್ಷಣೆ ಬಳಿಕ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಮಾತುಕತೆಗಳು ಬಹುತೇಕ ನಿಂತು ಹೋಗಿದ್ದವು. ಪೂರ್ವ ಲಡಾಖ್‌ನಲ್ಲಿರುವ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ನಿಯಮಿತವಾದ ಗಸ್ತು ತಿರುಗುವಿಕೆಯನ್ನು ಪುನರಾರಂಭಿಸುವ ಕುರಿತು ಉಭಯ ದೇಶಗಳು ಒಪ್ಪಂದಕ್ಕೆ ಬಂದ ನಂತರ ನಡೆದ ಮೊದಲ ಸಭೆ ಇದಾಗಿದೆ.