ನವದೆಹಲಿ:ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಆಗಲಿದೆ. ಆ ನಿಟ್ಟಿನಲ್ಲಿ ನಾವು ಸಾಗುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬುಧವಾರ ಆಸ್ಟ್ರಿಯಾದ ವ್ಯಾಪಾರ ಒಕ್ಕೂಟದೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಮಂತ್ರಿಗಳು ಆಸ್ಟ್ರಿಯಾಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಮತ್ತು ಇದರೊಂದಿಗೆ ಅವರು 41 ವರ್ಷಗಳ ನಂತರ ಆಸ್ಟ್ರಿಯಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರು ಎಂಬ ಹೆಗ್ಗಳಿಕೆ ಪ್ರಧಾನಿ ಮೋದಿ ಅವರಿಗೆ ಸಂದಿದೆ. ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಬೇಟಿ ನೀಡಿ 40 ವರ್ಷಗಳೇ ಕಳೆದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು ಮೂಲಸೌಕರ್ಯ, ಆಟೋಮೊಬೈಲ್, ಇಂಧನ, ಇಂಜಿನಿಯರಿಂಗ್ ಮತ್ತು ಸ್ಟಾರ್ಟ್ ಅಪ್‌ಗಳು ಸೇರಿದಂತೆ ವಿವಿಧ ವಲಯಗಳ ಪ್ರಮುಖ ಆಸ್ಟ್ರಿಯನ್ ಮತ್ತು ಭಾರತೀಯ ಸಿಇಒಗಳ ಗುಂಪನ್ನು ಉದ್ದೇಶಿಸಿ ಮಾತನಾಡಿದರು.
ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಭಾರತ ಮತ್ತು ಆಸ್ಟ್ರಿಯಾ ನಡುವೆ ಆರ್ಥಿಕ ಸಹಕಾರವನ್ನು ಉತ್ತೇಜಿಸುವಲ್ಲಿ ಉದ್ಯಮದ ಪ್ರಮುಖರು ವಹಿಸಿದ ಪಾತ್ರವನ್ನು ಇಬ್ಬರೂ ನಾಯಕರು ಸ್ಮರಿಸಿದರು. ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ ಎಂಬ ವಿಚಾರವನ್ನು ಇಬ್ಬರೂ ನಾಯಕರು ಪ್ರಸ್ತಾಪಿಸಿದರು. ಭಾರತ - ಆಸ್ಟ್ರಿಯಾ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಹಮತ ಸೂಚಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ಭಾರತವು ಪರಿವರ್ತನಾಶೀಲ ಪ್ರಗತಿಯನ್ನು ಸಾಧಿಸಿದೆ ಮತ್ತು ರಾಜಕೀಯ ಸ್ಥಿರತೆ, ನೀತಿ ಭವಿಷ್ಯ ಮತ್ತು ಅದರ ಸುಧಾರಣಾ-ಆಧಾರಿತ ಆರ್ಥಿಕ ಕಾರ್ಯಸೂಚಿಯ ಸಾಮರ್ಥ್ಯಗಳನ್ನು ಪರಿಗಣಿಸಿ ಅದೇ ಹಾದಿಯಲ್ಲಿ ಮುಂದುವರಿಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. 'ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್' ಅನ್ನು ಸುಧಾರಿಸಲು ತಮ್ಮ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮೋದಿ ಸಭೆಯಲ್ಲಿ ವಿವರಿಸಿದರು.