ನವದೆಹಲಿ: ಲೋಕಸಭೆ ಚುನಾವಣೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು "ಭಾರತೀಯ ಉತ್ತಮ ಸ್ನೇಹಿತ" ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ಬಣ್ಣಿಸಿದ್ದಾರೆ. ಭಾರತವನ್ನು ದೃಢವಾದ ಪ್ರಜಾಪ್ರಭುತ್ವದ ಸಂಕೇತ ಎಂದು ಕರೆದಿರುವ ಅಬಾಟ್ ಅವರು, ಮುಂಬರುವ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವ್ಯವಹಾರವನ್ನು ಮುಂದುವರಿಸಲು ಆಸ್ಟ್ರೇಲಿಯಾ ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ, "ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಅತ್ಯುತ್ತಮ ಭಾರತೀಯ ಸ್ನೇಹಿತರಾಗಿದ್ದಾರೆ ಮತ್ತು ಮುಂಬರುವ ಚುನಾವಣೆಗಳಿಗೆ ನಾನು ಅವರಿಗೆ ಶುಭ ಹಾರೈಸುತ್ತೇನೆ" ಎಂದಿದ್ದಾರೆ.
ಭಾರತ- ಆಸ್ಟ್ರೇಲಿಯಾ ಸಂಬಂಧ ತುಂಬಾ ಗಟ್ಟಿ- ಅಬಾಟ್ ಹೇಳಿಕೆ:"ಭಾರತವು ದೃಢವಾದ ಪ್ರಜಾಪ್ರಭುತ್ವವಾಗಿದ್ದು, ಜೊತೆಗೆ ಕಾಲಕಾಲಕ್ಕೆ ಈ ದೇಶದಲ್ಲಿ ಸರ್ಕಾರವು ಬದಲಾಗುತ್ತಿದೆ. ನಾನು ಭಾರತೀಯ ಜನರಿಗೆ ಸಲಹೆ ನೀಡಲು ಬಯಸುವುದಿಲ್ಲ. ಮುಂದಿನ ಹಲವು ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವ್ಯವಹಾರ ಮುಂದುವರಿಸಲು ತುಂಬಾ ಉತ್ಸುಕರಾಗಿದ್ದೇವೆ" ಎಂದ ಅವರು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವು ತುಂಬಾ ಗಟ್ಟಿಯಾಗಿದೆ. ಅದು ಸಾರ್ವಕಾಲಿಕವಾಗಿ ಬಲಗೊಳ್ಳುತ್ತಲೇ ಸಾಗುತ್ತಿದೆ'' ಎಂದು ತಿಳಿಸಿದರು.
ಆರ್ಥಿಕತೆಯ ರನ್‌ವೇಯಲ್ಲಿ ಟೇಕ್ ಆಫ್ ಆದ ಭಾರತ - ಅಬಾಟ್:ಭಾರತವು ನಾನು ಹೇಳುತ್ತಿರುವಂತೆ, ಪ್ರಪಂಚದ ಉದಯೋನ್ಮುಖ ಪ್ರಜಾಪ್ರಭುತ್ವದ ಸೂಪರ್ ಪವರ್ ಆಗಿದೆ. ಇದೀಗ ಭಾರತವು ಸಂಪೂರ್ಣ ಆರ್ಥಿಕತೆಯ ರನ್‌ವೇಯಲ್ಲಿ ಘರ್ಜಿಸುತ್ತಾ ಟೇಕ್‌ಆಫ್ ಆಗಿದೆ ಎಂದು ನಾನು ಭಾವಿಸುತ್ತೇನೆ. ಅದನ್ನು ಅರಿಯಲು ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ಮೂಲಸೌಕರ್ಯವನ್ನು ನಿರ್ಮಿಸುತ್ತಿರುವ ವಿಧಾನವನ್ನು ಮಾತ್ರ ನೋಡಬೇಕು" ಎಂದು ಅಬಾಟ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆ: ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ದೇಶದ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿವೆ. ಜೊತೆಗೆ ಸ್ಥಾಪಿತವಾದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಸವಾಲು ಹಾಕಲು I.N.D.I.A (Indian National Developmental Inclusive Alliance) ಒಕ್ಕೂಟವು ಸಜ್ಜಾಗುತ್ತಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 353 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಯುಪಿಎ 91 ಸ್ಥಾನಗಳನ್ನು ಗಳಿಸಿತ್ತು. ಮತ್ತು ಇತರರು 98 ಸ್ಥಾನಗಳನ್ನು ಪಡೆದುಕೊಂಡಿದ್ದರು.
ಏಪ್ರಿಲ್ 11 ಮತ್ತು ಮೇ 19 ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಇದರಲ್ಲಿ ಸುಮಾರು 900 ಮಿಲಿಯನ್ ಅರ್ಹರಲ್ಲಿ ಸುಮಾರು 67 ಪ್ರತಿಶತದಷ್ಟು ಜನರು ಲೋಕಸಭೆಯ 542 ಸದಸ್ಯರನ್ನು ಆಯ್ಕೆ ಮಾಡಲು ತಮ್ಮ ಹಕ್ಕು ಚಲಾಯಿಸಿದ್ದರು. ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಇದನ್ನೂ ಓದಿ:ಮಿಲಿಟರಿ ಸಹಕಾರ ಇನ್ನಷ್ಟು ಹೆಚ್ಚಳ ಮಾಡುವ ಕುರಿತು ಭಾರತ- ಅಮೆರಿಕ ಚರ್ಚೆ