ವಾಷಿಂಗ್ಟನ್,ಅಮೆರಿಕ:ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಭೆ ನಡೆಸಲು ಪ್ರಧಾನಿ ಮೋದಿ ಬುಧವಾರ ವಾಷಿಂಗ್ಟನ್ ಗೆ ಬಂದಿಳಿದಿದ್ದಾರೆ. ಯುಎಸ್ ರಾಜಧಾನಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಿದರು.
ಫ್ರಾನ್ಸ್ ಪ್ರವಾಸ ಪೂರ್ಣಗೊಳಿಸಿದ ಮೋದಿ ಅಲ್ಲಿಂದಾ ಸೀದಾ ಬೋಯಿಂಗ್ 777 ರಲ್ಲಿ 24 ಗಂಟೆಗಳ ಬಿರುಗಾಳಿ ಭೇಟಿಗಾಗಿ ವಾಷಿಂಗ್ಟನ್ ಗೆ ಬಂದಿಳಿದರು. ಈ ಸಂದರ್ಭದಲ್ಲಿ ಭಾರತೀಯರು ಮತ್ತು ಇತರ ಉತ್ಸಾಹಿ ಗುಂಪುಗಳು ಅವರನ್ನು ಅತ್ಯಂತ ಸಂಭ್ರಮದಿಂದ ಬರ ಮಾಡಿಕೊಂಡವು.
ಅನಿವಾಸಿ ಭಾರತೀಯರಿಗೆ ಅಭಿನಂದನೆ ಸಲ್ಲಿಸಿದ ಪಿಎಂ:ತೀವ್ರ ಶೀತಗಾಳಿಯ ನಡುವೆ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ಅನಿವಾಸಿಯರು ನನ್ನನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಎಂದು ಪ್ರಧಾನಿ ಮೋದಿ ತಮ್ಮ X ನಲ್ಲಿ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ವಾಷಿಂಗ್ಟನ್‌ಗೆ ತೆರಳುವ ಮೊದಲು, ಎಕ್ಸ್ ಪೋಸ್ಟ್ ವೊಂದನ್ನು ಹಾಕಿದ ಪ್ರಧಾನಿ ಮೋದಿ "ಈ ಭೇಟಿ ಭಾರತ - ಅಮೆರಿಕದ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಮತ್ತು ವೈವಿಧ್ಯಮಯ ವಲಯಗಳಲ್ಲಿ ಸಂಬಂಧಗಳನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಅಧ್ಯಕ್ಷ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದನ್ನು ನಾನು ಹೃತ್ಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಫ್ರಾನ್ಸ್‌ನಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕೃತಕ ಬುದ್ಧಿಮತ್ತೆ ಶೃಂಗಸಭೆಯ ಸಹ-ಆತಿಥ್ಯ ವಹಿಸಿದ್ದರು. ಇದೇ ವೇಳೆ ಅವರು ಮಾರ್ಸಿಲ್ಲೆಯಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಉದ್ಘಾಟಿಸಿದರು.
ಟ್ರಂಪ್ ತಮ್ಮ ಎರಡನೇ ಅವಧಿಯ ಅಧಿಕಾರವನ್ನು ಪ್ರಾರಂಭಿಸಿದ ನಂತರ, ಅಮೆರಿಕಕ್ಕೆ ಅಧಿಕೃತವಾಗಿ ಭೇಟಿ ಮಾಡಿದ ನಾಲ್ಕನೇ ಅಂತಾರಾಷ್ಟ್ರೀಯ ನಾಯಕ ಪ್ರಧಾನಿ ಮೋದಿ ಅವರಾಗಿದ್ದಾರೆ. ಇದಕ್ಕೂ ಮೊದಲು, ಇಸ್ರೇಲ್‌ನ ಪ್ರಧಾನ ಮಂತ್ರಿಗಳಾದ ಬೆಂಜಮಿನ್ ನೆತನ್ಯಾಹು ಮತ್ತು ಜಪಾನ್‌ನ ಶಿಗೇರು ಇಶಿಬಾ ಮತ್ತು ಜೋರ್ಡಾನ್‌ನ ರಾಜ ಅಬ್ದುಲ್ಲಾ II ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರು.