ಸಿಂಗಾಪುರ:ಬ್ರೂನೈ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ಸಿಂಗಾಪೂರ್ಗೆ ಬಂದಿಳಿದಿದ್ದಾರೆ. ಸಿಂಗಾಪೂರ್ ಪ್ರಧಾನಿ ಲಾರೆನ್ಸ್ ವೊಂಗ್ ಆಮಂತ್ರಣದ ಮೇಲೆ ಅವರು ಈ ಭೇಟಿ ನೀಡಿದ್ದಾರೆ. ಮಧ್ಯಾಹ್ನ ಪ್ರಧಾನಿ ಮೋದಿ ಸಿಂಗಾಪೂರ್ಗೆ ಬಂದಿಳಿಯುತ್ತಿದ್ದಂತೆ ಅಲ್ಲಿನ ಭಾರತೀಯರು ಆತ್ಮೀಯ ಸ್ವಾಗತ ಕೋರಿದರು. ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ನೃತ್ಯ ಮತ್ತು ವಾದ್ಯದ ಮೂಲಕ ಸಂಪ್ರದಾಯಕವಾಗಿ ಅವರನ್ನು ಬರಮಾಡಿಕೊಳ್ಳಲಾಯಿತು. ಈ ವೇಳೆ, ನೆರೆದವರ ಉತ್ಸಾಹ ಕಂಡ ಪ್ರಧಾನಿ ಮೋದಿ ಅವರು, ಕೂಡ ಡೋಲು ಬಾರಿಸಿ, ಸಂಭ್ರಮ ಪಟ್ಟರು.
ಭೇಟಿ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಸಿಂಗಾಪೂರಕ್ಕೆ ಬಂದಿಳಿದಿದ್ದು, ಎರಡು ದೇಶಗಳ ನಡುವಿನ ಸ್ನೇಹವನ್ನು ವೃದ್ಧಿಸುವ ಅನೇಕ ಸಭೆಗಳತ್ತ ಎದುರು ನೋಡುತ್ತಿದ್ದೇನೆ. ಭಾರತದ ಸುಧಾರಣೆ ಮತ್ತು ಯುವ ಶಕ್ತಿಯ ಪ್ರತಿಭೆಗಳಿಂದಾಗಿ ನಮ್ಮ ದೇಶ ಉತ್ತಮ ಹೂಡಿಕೆಯ ತಾಣವಾಗಿ ರೂಪುಗೊಂಡಿದೆ. ಇದರ ಜೊತೆಗೆ ಸಾಂಸ್ಕೃತಿಕ ಸಂಬಂಧಗಳತ್ತಲೂ ಗಮನ ಹರಿಸುವುದಾಗಿ ಅವರು ತಿಳಿಸಿದ್ದಾರೆ.
ಸಿಂಗಾಪೂರ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಸಹಭಾಗಿತ್ವ ಮತ್ತಷ್ಟು ಬಲಗೊಳಿಸುವ ಗುರಿ ಹೊಂದಿದ್ದು, ಅನೇಕ ಸಭೆಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಈ ಸಭೆಗಳಲ್ಲಿ ಸಾಂಸ್ಕೃತಿಕ ಸಂಪರ್ಕ ಮತ್ತು ಸಂಬಂಧಗಳ ಬೆಸೆಯುವಲ್ಲಿ ಅಂಶಗಳು ಒಳಗೊಂಡಿರಲಿದೆ. ಜೊತೆಗೆ ಡಿಜಿಟಲ್ ಅವಿಷ್ಕಾರ, ಕೌಶಲ್ಯಾಭಿವೃದ್ಧಿ, ಸುಸ್ಥಿರತೆ, ಆರೋಗ್ಯ ಸೇವೆ, ಸಂಪರ್ಕ ಮತ್ತು ಅಭಿವೃದ್ಧಿ ಉತ್ಪಾದನೆ ಕುರಿತು ಎರಡು ದೇಶಗಳ ನಡುವಿನ ಸಹಕಾರ ಬೆಳವಣಿಗೆ ಕುರಿತು ಚರ್ಚೆಯಾಗಲಿದೆ.