ಸಿಂಗಾಪುರ್:ಅಪರೂಪದ ಘಟನೆಯೊಂದರಲ್ಲಿ ಆಗಸದಲ್ಲೇ ವಿಮಾನ ಭಾರೀ ಪ್ರಮಾಣದಲ್ಲಿ ಅಲುಗಾಡಿ ಓರ್ವ ಪ್ರಯಾಣಿಕ ಸಾವನ್ನಪ್ಪಿ, 30 ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ದುತಂರದ ಬಗ್ಗೆ ಸಿಂಗಾಪುರ ಏರ್ಲೈನ್ಸ್ ದೃಢಪಡಿಸಿದೆ.
ಸಿಂಗಾಪುರ ಏರ್ಲೈನ್ಸ್ಗೆ ಸೇರಿದ ವಿಮಾನವು ಲಂಡನ್‌ನಿಂದ ಸಿಂಗಾಪುರಕ್ಕೆ ಬರುತ್ತಿತ್ತು. ಈ ವೇಳೆ ವಿಮಾನದಲ್ಲಿ ದಿಢೀರ್ ಪ್ರಕ್ಷುಬ್ಧತೆ ಉಂಟಾಗಿ ಅಲುಗಾಡಿದೆ. ಇದರಿಂದ ಓರ್ವ ಪ್ರಯಾಣಿಕ ವಿಮಾನದಲ್ಲೇ ಸಾವನ್ನಪ್ಪಿದ್ದಾನೆ. ಹಲವು ಪ್ರಯಾಣಿಕರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಂಗಾಪುರ ವಿಮಾನಯಾನ ಸಂಸ್ಥೆ, ಸೋಮವಾರ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟ ಬೋಯಿಂಗ್ 777-300 ಇಆರ್ ವಿಮಾನವು, ಸಿಂಗಾಪುರದತ್ತ ಬರುತ್ತಿರುವಾಗ ಮಾರ್ಗಮಧ್ಯದಲ್ಲಿ ಏಕಾಏಕಿ ಅಲುಗಾಡಿದೆ. ಪ್ರಯಾಣಿಕರು ಆಘಾತಕ್ಕೀಡಾಗಿದ್ದಾರೆ. ತಕ್ಷಣವೇ ವಿಮಾನವನ್ನು ಬ್ಯಾಂಕಾಕ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ 3.45 ಕ್ಕೆ ಇಳಿಸಲಾಯಿತು ಎಂದು ಹೇಳಿಕೆ ನೀಡಿದೆ.
ವಿಮಾನದಲ್ಲಿ 18 ಸಿಬ್ಬಂದಿ ಸೇರಿ, 211 ಪ್ರಯಾಣಿಕರು ಇದ್ದರು. ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ ವಿಮಾನಯಾನ ಸಂಸ್ಥೆಯು, ವಿಮಾನ ಅವಘಡದಲ್ಲಿ ಗಾಯಗೊಂಡ ಎಲ್ಲಾ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಅವರಿಗೆ ಬೇಕಾದ ಎಲ್ಲ ಸಹಾಯ ಒದಗಿಸಲಾಗುತ್ತಿದೆ. ಥಾಯ್ಲೆಂಡ್ನ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅಗತ್ಯವಿರುವ ಹೆಚ್ಚುವರಿ ಸಹಾಯವನ್ನೂ ಒದಗಿಸಲು ಬ್ಯಾಂಕಾಕ್‌ಗೆ ತಂಡವನ್ನು ಕಳುಹಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಯಾಣದ ವೇಳೆ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸದೇ ಇರುವಾಗ ಇಂತಹ ಸಂದರ್ಭಗಳಲ್ಲಿ ಅನಾಹುತ ಉಂಟಾಗುವ ಸಾಧ್ಯತೆ ಇರುತ್ತದೆ. ವಿಮಾನ ಪೈಲಟ್‌ಗೆ ಮುನ್ನೆಚ್ಚರಿಕೆ ನೀಡಲು ಸಾಧ್ಯವಾಗಿಲ್ಲ. ಹವಾಮಾನ ವೈಪರೀತ್ಯದ ಬಗ್ಗೆ ರಾಡಾರ್ ಮೊದಲೇ ಮಾಹಿತಿ ನೀಡುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈ ವೇಳೆ ಪ್ರಯಾಣಿಕರು ಕಾಕ್‌ಪಿಟ್‌ನಲ್ಲಿ ಬಿದ್ದು, ಗಾಯಕ್ಕೀಡಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಬೊಕೊ ಹರಾಮ್ ಉಗ್ರರ ಬಳಿ ಒತ್ತೆಯಾಳಾಗಿದ್ದ 209 ಮಕ್ಕಳು ಸೇರಿ 350 ಜನರ ರಕ್ಷಣೆ - Boko Haram