ವಾಷಿಂಗ್ಟನ್:ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಗೆಲವು ಸಾಧಿಸಿದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ತೈವಾನ್ ಅಧ್ಯಕ್ಷ ಲೈ ಚಿಂಗ್-ಟೆ ಶುಭಾಶಯ ವಿನಿಮಯ ಮಾಡಿಕೊಂಡಿದ್ದರು. ಇದನ್ನು ಚೀನಾ ತೀವ್ರವಾಗಿ ಪ್ರತಿಭಟಿಸಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್, ''ಇಬ್ಬರು ವಿದೇಶಿ ನಾಯಕರ ನಡುವಿನ ಇಂತಹ ಅಭಿನಂದನಾ ಸಂದೇಶಗಳು ರಾಜತಾಂತ್ರಿಕ ವ್ಯವಹಾರದ ಒಂದು ಭಾಗವಾಗಿದೆ'' ಎಂದು ಹೇಳಿದೆ.
ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಿದ ನಂತರ, ತೈವಾನ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಲು ಎದುರು ನೋಡುತ್ತಿದ್ದೇನೆ ಎಂಬ ಮೋದಿಯವರ ಹೇಳಿಕೆಗೆ ಚೀನಾ ಪ್ರತಿಭಟಿಸುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ''ಇಂತಹ ಅಭಿನಂದನಾ ಸಂದೇಶಗಳು ರಾಜತಾಂತ್ರಿಕ ವ್ಯವಹಾರದ ಸಾಮಾನ್ಯ ಭಾಗವಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ'' ಎಂದು ಹೇಳಿದರು.
ತೈವಾನ್ ಅಧ್ಯಕ್ಷ ಲೈ ಚಿಂಗ್-ಟೆಯಿಂದ ಮೋದಿಗೆ ಅಭಿನಂದನೆ: ಕಳೆದ ತಿಂಗಳು ತೈವಾನ್ನ ಅಧ್ಯಕ್ಷರಾಗಿ ಆಯ್ಕೆಯಾದ ಲೈ ಚಿಂಗ್-ಟೆ ಅವರು, ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್ನಲ್ಲಿ, ''ಚುನಾವಣಾ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಅಭಿನಂದನೆಗಳು. ವೇಗವಾಗಿ ಬೆಳೆಯುತ್ತಿರುವ ತೈವಾನ್- ಭಾರತ ಪಾಲುದಾರಿಕೆಯನ್ನು ಹೆಚ್ಚಿಸಲು ನಾವು ಎದುರುನೋಡುತ್ತಿದ್ದೇವೆ. ಇಂಡೋಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ವಲಯಗಳಲ್ಲಿ ನಮ್ಮ ಸಹಯೋಗವನ್ನು ವಿಸ್ತರಿಸುತ್ತೇವೆ'' ಎಂದು ಬರೆದುಕೊಂಡಿದ್ದಾರೆ.