ಕರ್ನಾಟಕ

karnataka

ETV Bharat / international

ಇರಾನ್​ನಲ್ಲಿ ಪೆಜೆಶ್ಕಿಯಾನ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ: 19 ಸದಸ್ಯರ ಸಚಿವ ಸಂಪುಟಕ್ಕೆ ಸಂಸತ್ ಅನುಮೋದನೆ - Iran New Government - IRAN NEW GOVERNMENT

ಇರಾನ್​ನಲ್ಲಿ ಮಸೂದ್ ಪೆಜೆಶ್ಕಿಯಾನ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಇರಾನ್​ ಸಂಸತ್ ಕಲಾಪ
ಇರಾನ್​ ಸಂಸತ್ ಕಲಾಪ (IANS)

By ETV Bharat Karnataka Team

Published : Aug 21, 2024, 7:57 PM IST

ಟೆಹ್ರಾನ್: ಇರಾನ್​ನಲ್ಲಿ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ನೇತೃತ್ವದ ಹೊಸ ಸರ್ಕಾರ ಬುಧವಾರದಿಂದ ಅಸ್ತಿತ್ವಕ್ಕೆ ಬಂದಿದೆ. ಪ್ರಸ್ತಾಪಿಸಲಾದ ಎಲ್ಲಾ 19 ಸಚಿವರ ಹೆಸರುಗಳನ್ನು ಇರಾನ್ ಸಂಸತ್ತು ಬುಧವಾರ ಅನುಮೋದಿಸಿದೆ.

ಮಾಜಿ ಉಪ ವಿದೇಶಾಂಗ ಸಚಿವ ಮತ್ತು ಪರಮಾಣು ಮಾತುಕತೆ ಸಮಾಲೋಚಕ ಅಬ್ಬಾಸ್ ಅರಾಕ್ಚಿ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸಲು ಸಂಸತ್ ಅನುಮೋದನೆ ನೀಡಿದೆ. ಇವರು ಕಲಾಪದಲ್ಲಿ ಹಾಜರಿದ್ದ ಮತ್ತು ಮತ ಚಲಾಯಿಸಿದ 285 ಸಂಸದರ ಪೈಕಿ 244 ಮತಗಳನ್ನು ಪಡೆದರು. ಇನ್ನು ಹಾಲಿ ಗುಪ್ತಚರ ಇಲಾಖೆ ಸಚಿವರಾಗಿದ್ದ ಇಸ್ಮಾಯಿಲ್ ಖತೀಬ್ 261 ಮತಗಳನ್ನು ಪಡೆಯುವ ಮೂಲಕ ಅದೇ ಖಾತೆಯನ್ನು ಉಳಿಸಿಕೊಂಡಿದ್ದಾರೆ. ಧರ್ಮಗುರುಗಳಿಗೆ ಮಾತ್ರ ಈ ಸಚಿವ ಸ್ಥಾನವನ್ನು ಮೀಸಲಿಡಲಾಗಿದೆ.

ಸಶಸ್ತ್ರ ಪಡೆಗಳ ಉಪ ಮುಖ್ಯಸ್ಥ ಮತ್ತು ವಾಯುಪಡೆಯ ಮಾಜಿ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಅಜೀಜ್ ನಾಸಿರ್ ಜಾದೆ 281 ಮತಗಳನ್ನು ಪಡೆದು ಹೊಸ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಅಧ್ಯಕ್ಷ ಹಸನ್ ರೌಹಾನಿ ಅವರ ಎರಡನೇ ಆಡಳಿತದಲ್ಲಿ ಸಚಿವರಾಗಿದ್ದ ಸಯ್ಯದ್ ಅಬ್ಬಾಸ್ ಸಲೇಹಿ 271 ಮತಗಳನ್ನು ಪಡೆದು ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವರಾಗಿದ್ದಾರೆ.

ಸೆಂಟ್ರಲ್ ಬ್ಯಾಂಕ್​ನ ಮಾಜಿ ಗವರ್ನರ್ ಅಬ್ದೋಲ್ ನಾಸರ್ ಹೆಮ್ಮಾಟಿ 192 ಮತಗಳನ್ನು ಪಡೆದು ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸಚಿವರಾಗಿ ಮತ್ತು 259 ಮತಗಳನ್ನು ಪಡೆದ ಮಾಜಿ ಐಆರ್​ಜಿಸಿ ಅಧಿಕಾರಿ ಎಸ್ಕಂದರ್ ಮೊಮೆನಿ ಆಂತರಿಕ ಸಚಿವರಾಗಿ ನೇಮಕಗೊಂಡಿದ್ದಾರೆ. 230 ಮತಗಳನ್ನು ಪಡೆದ ಏಕೈಕ ಮಹಿಳಾ ಅಭ್ಯರ್ಥಿ ಫರ್ಜಾನೆ ಸಾದೆಕ್ ರಸ್ತೆ ಮತ್ತು ನಗರಾಭಿವೃದ್ಧಿ ಸಚಿವರಾಗಲಿದ್ದಾರೆ. ಅವರು ಇರಾನ್​ನಲ್ಲಿ ಮಂತ್ರಿಯಾದ ಎರಡನೇ ಮಹಿಳೆಯಾಗಿದ್ದಾರೆ.

ಸರ್ಕಾರ ಮತ್ತು ಸಂಸತ್ತಿನ ನಡುವೆ ಸಹಯೋಗ, ಸಹಕಾರದ ಮೂಲಕ ತಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ವಿಶ್ವಾಸ ಮತ ಯಾಚನೆಯ ಅಧಿವೇಶನದ ಆರಂಭದಲ್ಲಿ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹೇಳಿದರು.

ಸಂಸತ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್ ಮೊಹಮ್ಮದ್ ಬಕೇರಿ ಖಲಿಬಾಫ್, ವಿಶ್ವಾಸ ಮತ ಕಲಾಪದಲ್ಲಿ 285 ಶಾಸಕರು ಹಾಜರಿರುವುದಾಗಿ ಘೋಷಿಸಿ, ಸಂಸದರು ತಮ್ಮ ಮತಗಳನ್ನು ಚಲಾಯಿಸುವ ಸಂದರ್ಭದಲ್ಲಿ ಕಲಾಪದಿಂದ ಹೊರಹೋಗುವಂತೆ ಅಧ್ಯಕ್ಷರಿಗೆ ಸೂಚಿಸಿದರು. ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸುಮಾರು ಎರಡು ವಾರಗಳ ನಂತರ ಆಗಸ್ಟ್ 11 ರಂದು ಪೆಜೆಶ್ಕಿಯಾನ್ ತಮ್ಮ ಸಚಿವರ ಪಟ್ಟಿಯನ್ನು ಸಂಸತ್ತಿಗೆ ಸಲ್ಲಿಸಿದ್ದರು.

ಇದನ್ನೂ ಓದಿ : ಇರಾನ್​ನಲ್ಲಿ ಭೀಕರ ಬಸ್ ಅಪಘಾತ: 28 ಪಾಕಿಸ್ತಾನಿ ಶಿಯಾ ಯಾತ್ರಾರ್ಥಿಗಳು ಸಾವು - Iran Bus Accident

ABOUT THE AUTHOR

...view details