ದೇರ್ ಅಲ್-ಬಾಲಾಹ್, ಗಾಜಾ ಪಟ್ಟಿ:ಪ್ಯಾಲೆಸ್ಟ್ರೈನ್ ಮೇಲೆ ಇಸ್ರೇಲ್ ಗುರುವಾರ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್ ಸೆಂಟ್ರಲ್ ಗಾಜಾ ಸ್ಟ್ರಿಪ್ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 25 ಪ್ಯಾಲೆಸ್ಟೈನಿಯನ್ನರು ಮೃತಪಟ್ಟಿದ್ದಾರೆ. ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟೈನಿಯನ್ ವೈದ್ಯರ ಹೇಳಿಕೆ ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಅಧ್ಯಕ್ಷ ಜೋ ಬೈಡನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಕದನ ವಿರಾಮ ಒಪ್ಪಂದದ ಬಗ್ಗೆ ಭರವಸೆ ಮೂಡಿಸಿದ ಕೆಲವೇ ಗಂಟೆಗಳ ಬಳಿಕ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ನುಸಿರಾತ್ ನಲ್ಲಿರುವ ನಿರಾಶ್ರಿತರ ಬಹುಮಹಡಿ ವಸತಿ ಕಟ್ಟಡದಿಂದ ಒಟ್ಟು 25 ದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾ ಪಟ್ಟಿಯಲ್ಲಿರುವ ಎರಡು ಆಸ್ಪತ್ರೆಗಳಾಗಿರುವ ಉತ್ತರದಲ್ಲಿರುವ ಅಲ್-ಅವ್ದಾ ಮತ್ತು ಮಧ್ಯ ಗಾಜಾದ ಅಲ್-ಅಕ್ಸಾ ಆಸ್ಪತ್ರೆಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಎರಡು ಆಸ್ಪತ್ರೆಗಳಲ್ಲಿ 40 ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ಯಾಲೇಸ್ಟೈನ್ ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯ ಬಗ್ಗೆ ಇಸ್ರೇಲ್ ಮಿಲಿಟರಿ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್ ಪ್ಯಾಲೇಸ್ಟೈನ್ನಿಂದ ಹಮಾಸ್ ತೊಡೆದು ಹಾಕುವ ಕೆಲಸ ಮಾಡುತ್ತಿದೆ. ಅಕ್ಟೋಬರ್ 2023 ರಲ್ಲಿ ಹಮಾಸ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ವೇಳೆ 1200ಕ್ಕೂ ಹೆಚ್ಚು ಇಸ್ರೇಲಿಗಳು ಹತರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಪ್ಯಾಲೇಸ್ಟೈನ್ ಮೇಲೆ ಯುದ್ಧ ಸಾರಿತ್ತು. ಅದು ಈಗಲೂ ಮುಂದುವರೆದಿದೆ.