ಗಾಜಾ: ಗಾಜಾದಲ್ಲಿ ಯುದ್ಧ ಆರಂಭವಾದಾಗಿನಿಂದ ಯುದ್ಧದಲ್ಲಿ ಕನಿಷ್ಠ 29,692 ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದು, 69,879 ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಈ ಅಂಕಿಅಂಶಗಳಲ್ಲಿ ಗಾಜಾದಲ್ಲಿ ಕೊಲ್ಲಲ್ಪಟ್ಟ ನಾಗರಿಕರು ಮತ್ತು ಹಮಾಸ್ ಸದಸ್ಯರು ಹಾಗೂ ಹಮಾಸ್ ತಾನು ಹಾರಿಸಿದ ರಾಕೆಟ್ಗಳು ದಾರಿ ತಪ್ಪಿದ್ದರಿಂದ ಸಾವಿಗೀಡಾದ ಗಾಜಾ ನಾಗರಿಕರು ಸೇರಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಅಕ್ಟೋಬರ್ 7 ರಂದು ಇಸ್ರೇಲ್ನೊಳಗೆ ಬಂದಿದ್ದ ಸುಮಾರು 1,000 ಭಯೋತ್ಪಾದಕರ ಜೊತೆಗೆ ಗಾಜಾದಲ್ಲಿ 12,000 ಕ್ಕೂ ಹೆಚ್ಚು ಹಮಾಸ್ ಉಗ್ರರನ್ನು ಕೊಂದಿರುವುದಾಗಿ ಐಡಿಎಫ್ ಭಾನುವಾರ ತಿಳಿಸಿದೆ.
ಸಿರಿಯಾ ಮೇಲೆ ಇಸ್ರೇಲ್ ದಾಳಿ: ಮಧ್ಯ ಸಿರಿಯಾದ ಹೋಮ್ಸ್ ಪ್ರಾಂತ್ಯದಲ್ಲಿ ಭಾನುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್-ವತನ್ ಪತ್ರಿಕೆಯ ವರದಿಗಳ ಪ್ರಕಾರ, ನೈಋತ್ಯ ಹೋಮ್ಸ್ನ ಅಲ್-ಖುಸೈರ್ ಪ್ರದೇಶದಲ್ಲಿ ಎರಡು ನಾಗರಿಕ ವಾಹನಗಳ ಮೇಲೆ ಈ ದಾಳಿ ನಡೆದಿವೆ. ಏತನ್ಮಧ್ಯೆ, ದಾಳಿಯಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಿರಿಯಾದಲ್ಲಿ ಇಸ್ರೇಲ್ ನಡೆಸಿದ ಸರಣಿ ದಾಳಿಗಳಲ್ಲಿ ಇದು ಇತ್ತೀಚಿನದು. ಇಸ್ರೇಲ್ ಇತ್ತೀಚೆಗೆ ಇರಾನಿನ ಮಿಲಿಶಿಯಾ ಉಗ್ರರೊಂದಿಗೆ ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಹತ್ಯೆಗೈಯುವ ಪ್ರಯತ್ನಗಳನ್ನು ನಡೆಸಿದೆ. 2024 ರ ಆರಂಭದಿಂದ ಇಸ್ರೇಲ್ ಸಿರಿಯಾ ಮೇಲೆ 16 ದಾಳಿಗಳನ್ನು ನಡೆಸಿದೆ ಎಂದು ವೀಕ್ಷಣಾಲಯ ಭಾನುವಾರ ವರದಿಯಲ್ಲಿ ತಿಳಿಸಿದೆ.
ಶಸ್ತ್ರಸಜ್ಜಿತ ಡ್ರೋನ್ ನಾಶಪಡಿಸಿದ ಸಿರಿಯಾ: ಹಮಾ ಮತ್ತು ಇದ್ಲಿಬ್ ಆಡಳಿತಾತ್ಮಕ ಪ್ರದೇಶಗಳಲ್ಲಿ ಸಿರಿಯನ್ ಸೇನೆಯು ಭಾನುವಾರ ಏಳು ಶಸ್ತ್ರಸಜ್ಜಿತ ಡ್ರೋನ್ಗಳನ್ನು ನಾಶಪಡಿಸಿದೆ ಎಂದು ಸಿರಿಯನ್ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದ್ಲಿಬ್ ಮತ್ತು ಹಮಾ ಎರಡೂ ಪ್ರದೇಶಗಳಲ್ಲಿನ ಮಿಲಿಟರಿ ನೆಲೆಗಳು, ಗ್ರಾಮಗಳು ಮತ್ತು ಪಟ್ಟಣಗಳನ್ನು ನಾಶಪಡಿಸಲು ಭಯೋತ್ಪಾದಕರು ಹಾರಿಸಿದ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರ ಸಿರಿಯಾದಲ್ಲಿ, ವಿಶೇಷವಾಗಿ ಇದ್ಲಿಬ್ನ ವಾಯುವ್ಯ ಗವರ್ನರೇಟ್ನಲ್ಲಿ ಬಂಡುಕೋರರು ಇತ್ತೀಚೆಗೆ ಸರ್ಕಾರಿ ನಿಯಂತ್ರಿತ ಪ್ರದೇಶಗಳ ಮೇಲೆ ಡ್ರೋನ್ ದಾಳಿಯನ್ನು ತೀವ್ರಗೊಳಿಸಿದ್ದಾರೆ. 2023ರ ಅಕ್ಟೋಬರ್ನಲ್ಲಿ ಹೋಮ್ಸ್ ಗವರ್ನರೇಟ್ನ ಮಿಲಿಟರಿ ಅಕಾಡೆಮಿಯಲ್ಲಿ ನಡೆಯುತ್ತಿದ್ದ ಪದವಿ ಪ್ರದಾನ ಸಮಾರಂಭದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ 80 ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದರು.
ಇದನ್ನೂ ಓದಿ : ಇಸ್ರೇಲ್-ಹಮಾಸ್ ಸಂಘರ್ಷ: ಮಾರ್ಚ್ 10ಕ್ಕೂ ಮುನ್ನ ಕದನ ವಿರಾಮ ಸಾಧ್ಯತೆ