ಇಸ್ಲಾಮಾಬಾದ್, ಪಾಕಿಸ್ತಾನ:ಸ್ಫೋಟಕ ತುಂಬಿದ್ದ ವಾಹನವನ್ನು ಪಾಕಿಸ್ತಾನದ ಸೇನಾ ಕೇಂದ್ರಕ್ಕೆ ನುಗ್ಗಿಸಿದ ಎಲ್ಲ 10 ಉಗ್ರರನ್ನು 18 ಗಂಟೆಗಳ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಮಿಲಿಟರಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ಆತ್ಮಹತ್ಯಾ ಬಾಂಬರ್ ತನ್ನ ಸ್ಫೋಟಕ ತುಂಬಿದ ವಾಹನವನ್ನು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನುನಲ್ಲಿರುವ ಸೇನಾ ವಸತಿ ಸಂಕೀರ್ಣದ ಹೊರ ಗೋಡೆಗೆ ಡಿಕ್ಕಿ ಹೊಡೆದಾಗ ಎಂಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನಿ ಮಿಲಿಟರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಉಗ್ರಗಾಮಿ ಕಮಾಂಡರ್ ಗುಲ್ ಬಹದ್ದೂರ್ ನೇತೃತ್ವದ ಪಾಕಿಸ್ತಾನಿ ತಾಲಿಬಾನ್‌ನ ವಿಭಜಿತ ಗುಂಪು ದಾಳಿ ಹೊಣೆಯನ್ನು ಹೊತ್ತುಕೊಂಡಿದೆ. ಇದನ್ನು ದೇಶದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಮತ್ತು ಇತರ ಅಧಿಕಾರಿಗಳು ಖಂಡಿಸಿದ್ದಾರೆ. ಆತ್ಮಾಹುತಿ ದಾಳಿಯಲ್ಲಿ ಗೋಡೆಯ ಒಂದು ಭಾಗ ಕುಸಿದು ಸಮೀಪದ ಮೂಲಸೌಕರ್ಯಕ್ಕೆ ಹಾನಿಯುಂಟಾಗಿದ್ದು, ಎಂಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.
ದಾಳಿಗೆ ಪ್ರತಿಕ್ರಿಯಿಸಿದ ಭದ್ರತಾ ಪಡೆಗಳು, ಎಲ್ಲ ಹತ್ತು ದಾಳಿಕೋರರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿವೆ. "ಭದ್ರತಾ ಪಡೆಗಳ ಸಮಯೋಚಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ ಎಂದು ಮಿಲಿಟರಿ ಹೇಳಿದೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದೊಂದಿಗೆ ಈ ಬಗ್ಗೆ ಪಾಕಿಸ್ತಾನ ಸರ್ಕಾರ ತನ್ನ ಕಳವಳವನ್ನು ನಿರಂತರವಾಗಿ ವ್ಯಕ್ತಪಡಿಸುತ್ತಲೇ ಬಂದಿದೆ. "ಭಯೋತ್ಪಾದಕರು ಆಫ್ಘನ್ ಮಣ್ಣನ್ನು ನಿರಂತರವಾಗಿ ಬಳಸುವುದನ್ನು ನಿರಾಕರಿಸುವಂತೆ ಮತ್ತು ಅಂತಹ ಅಂಶಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರನ್ನು ಕೇಳಿಕೊಳ್ಳುತ್ತಿದೆ" ಎಂದು ಮಿಲಿಟರಿ ಹೇಳಿದೆ.
ಪಾಕಿಸ್ತಾನದ ಸಶಸ್ತ್ರ ಪಡೆಗಳು "ಈ ಭಯೋತ್ಪಾದನೆ ಬೆದರಿಕೆ ವಿರುದ್ಧ ಮಾತೃಭೂಮಿ ಮತ್ತು ಅದರ ಜನರನ್ನು ರಕ್ಷಿಸುತ್ತಲೇ ಇರುತ್ತವೆ ಮತ್ತು ಅಫ್ಘಾನಿಸ್ತಾನದಿಂದ ಹೊರಹೊಮ್ಮುವ ಈ ಬೆದರಿಕೆಗಳ ವಿರುದ್ಧ ಸೂಕ್ತವೆಂದು ಪರಿಗಣಿಸಲಾದ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಮಿಲಿಟರಿ ಹೇಳಿದೆ.
ಈ ಬಗ್ಗೆ ಕಾಬೂಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪಾಕಿಸ್ತಾನ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದ ಗಡಿಯಲ್ಲಿರುವ ವಾಯುವ್ಯದಲ್ಲಿ ಉಗ್ರಗಾಮಿಗಳ ದಾಳಿಯ ಉಲ್ಬಣಕ್ಕೆ ಸಾಕ್ಷಿಯಾಗಿದೆ. 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ಅಫ್ಘಾನ್ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ TTP (ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ) ದೇಶಾದ್ಯಂತ ಭದ್ರತಾ ಪಡೆಗಳ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದೆ.
ಇದನ್ನೂ ಓದಿ :ಭಯೋತ್ಪಾದಕರ ಒಳನುಸುಳುವಿಕೆ ಯತ್ನ ವಿಫಲ: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ - Encounter In LoC