ಇಸ್ಲಾಮಾಬಾದ್ : ಕರ್ತಾರ್ಪುರ್ ಕಾರಿಡಾರ್ ಮಾದರಿಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ಕಾರಿಡಾರ್ ನಿರ್ಮಾಣದ ಬಗ್ಗೆ ಸಿಂಧ್ ಪ್ರವಾಸೋದ್ಯಮ ಸಚಿವ ಜುಲ್ಫಿಕರ್ ಅಲಿ ಶಾ ಗುರುವಾರ ಪ್ರಸ್ತಾಪ ಮಾಡಿದ್ದಾರೆ. ಪಾಕಿಸ್ತಾನದ ಉಮರ್ಕೋಟ್ ಮತ್ತು ನಾಗರ್ ಪಾರ್ಕರ್ ಗಳಲ್ಲಿ ಇರುವ ಹಿಂದೂ ದೇವಾಲಯಗಳಿಗೆ ಭಾರತದ ಗುಜರಾತ್ ಮತ್ತು ರಾಜಸ್ಥಾನದ ಭಕ್ತರು ಭೇಟಿ ನೀಡಲು ಅನುಕೂಲವಾಗುವಂತೆ ಹೊಸ ಕಾರಿಡಾರ್ ನಿರ್ಮಾಣದ ಬಗ್ಗೆ ಸಿಂಧ್ ಪ್ರಾಂತ್ಯದ ಸಚಿವರು ಮಾತನಾಡಿದ್ದಾರೆ. ದುಬೈನಲ್ಲಿ ನಡೆದ ಪ್ರವಾಸೋದ್ಯಮ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಈ ಪ್ರಸ್ತಾಪ ಮಾಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಸಿಂಧ್ನಲ್ಲಿರುವ ಹಲವಾರು ದೇವಾಲಯಗಳಿಗೆ ಭೇಟಿ ನೀಡಲು ದೊಡ್ಡ ಸಂಖ್ಯೆಯ ಹಿಂದೂಗಳು ಮತ್ತು ಜೈನರು ಉತ್ಸುಕರಾಗಿದ್ದಾರೆ ಎಂದು ಶಾ ಹೇಳಿದರು. ಸಿಂಧ್ ಪ್ರಾಂತ್ಯದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಶ್ರೀ ಶಿವ ಮಂದಿರವು ಪಾಕಿಸ್ತಾನದ ಏಕೈಕ ಹಿಂದೂ ಬಹುಸಂಖ್ಯಾತ ಜಿಲ್ಲೆಯಾದ ಉಮರ್ ಕೋಟ್ನಲ್ಲಿದೆ.
ಈ ದೇವಾಲಯವನ್ನು 2,000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದ್ದರೂ, ಸ್ಥಳೀಯ ಹಿಂದೂ ಸಮುದಾಯದ ಮುಖಂಡರೊಬ್ಬರು ಇದು 5,000 ವರ್ಷಗಳಷ್ಟು ಹಳೆಯದು ಎಂದು ಹೇಳಿದರು. ಈ ದೇವಾಲಯವನ್ನು ಅಖಿಲ ಹಿಂದೂ ಪಂಚಾಯತ್ ನಿರ್ವಹಿಸುತ್ತದೆ. ನಿಯಮಿತ ದುರಸ್ತಿ ಮತ್ತು ನಿರ್ವಹಣೆಯ ಹೊರತಾಗಿ, ಪ್ರತಿವರ್ಷ ಹೆಚ್ಚುತ್ತಿರುವ ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಅತಿಥಿಗೃಹ, ಸಮುದಾಯ ಭವನ ಮತ್ತು ಇತರ ಸೌಲಭ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ.