ಇಸ್ಲಾಮಾಬಾದ್ :ಸುಮಾರು 10 ಲಕ್ಷ ಅಫ್ಘಾನ್ ನಿರಾಶ್ರಿತರನ್ನು ಅವರ ತಾಯ್ನಾಡಿಗೆ ವಾಪಸ್ ಕಳುಹಿಸುವ ಎರಡನೇ ಹಂತದ ಕಾರ್ಯಾಚರಣೆ ಪ್ರಾರಂಭಿಸಲು ಪಾಕಿಸ್ತಾನ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕಾರ್ಯಾಚರಣೆ ಭಾಗವಾಗಿ ಅಫ್ಘಾನ್ ಸಿಟಿಜನ್ ಕಾರ್ಡ್ (ಎಸಿಸಿ) ಹೊಂದಿರುವವರ ಮ್ಯಾಪಿಂಗ್ ಅನ್ನು ತ್ವರಿತಗೊಳಿಸಲು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಡಾನ್ ವರದಿ ಮಾಡಿದೆ.
ಅಫ್ಘಾನ್ ಪ್ರಜೆಗಳನ್ನು ವಾಪಸ್ ಕಳುಹಿಸುವ ಯಾವುದೇ ಗಡುವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ, ಲಕ್ಷಾಂತರ ಎಸಿಸಿ ಹೋಲ್ಡರ್ಗಳನ್ನು ಸ್ವದೇಶಕ್ಕೆ ಕಳುಹಿಸುವ ಅಭಿಯಾನವು ಬೇಸಿಗೆಯ ಆರಂಭದಲ್ಲಿ ಪ್ರಾರಂಭವಾಗಬಹುದು ಎಂದು ವರದಿಗಳು ಹೇಳಿವೆ. ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಯುಎನ್ಎಚ್ಸಿಆರ್ ಪ್ರಕಾರ, ಪಾಕಿಸ್ತಾನದಲ್ಲಿ 2.18 ಮಿಲಿಯನ್ ದಾಖಲಿತ ಅಫ್ಘಾನ್ ನಿರಾಶ್ರಿತರಿದ್ದಾರೆ. ಇದರಲ್ಲಿ 2006-07ರಲ್ಲಿ ನಡೆಸಿದ ಜನಗಣತಿಯ ಪ್ರಕಾರ ನೋಂದಣಿ ಪುರಾವೆ (ಪಿಒಆರ್) ಕಾರ್ಡ್ಗಳನ್ನು ಹೊಂದಿರುವ 1.3 ಮಿಲಿಯನ್ ನಿರಾಶ್ರಿತರು ಮತ್ತು 2017 ರಲ್ಲಿ ನೋಂದಣಿಯ ಆರಂಭದ ನಂತರ ಎಸಿಸಿಗಳನ್ನು ಪಡೆದ ಹೆಚ್ಚುವರಿ 8,80,000 ನಿರಾಶ್ರಿತರು ಸೇರಿದ್ದಾರೆ.
ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಜೀವಭಯದಿಂದ ಲಕ್ಷಾಂತರ ಅಫ್ಘನ್ನರು ಮತ್ತೊಮ್ಮೆ ಪಾಕಿಸ್ತಾನಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಈ ಸಮಯದಲ್ಲಿ ಸುಮಾರು 6 ರಿಂದ 8 ಲಕ್ಷ ಅಫ್ಘಾನಿಸ್ತಾನ ಪ್ರಜೆಗಳು ಪಾಕಿಸ್ತಾನಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದರಲ್ಲಿ ಕೆಲವರು ಮಾನ್ಯ ಪ್ರಯಾಣ ದಾಖಲೆಗಳನ್ನು ಹೊಂದಿದ್ದರೂ, ಅವರ ಭವಿಷ್ಯ ಈಗ ಪಾಕಿಸ್ತಾನದಲ್ಲಿ ಅನಿಶ್ಚಿತವಾಗಿದೆ.