ವಾಶಿಂಗ್ಟನ್: ಬುಧವಾರದಿಂದ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಜಾರಿಯಾಗಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ಲೆಬನಾನ್ನ ಹಿಜ್ಬುಲ್ಲಾ ಜೊತೆಗೆ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಒಪ್ಪಿಕೊಂಡಿದ್ದು, ಇದು ಬುಧವಾರ ಮುಂಜಾನೆಯಿಂದ (ಇಸ್ರೇಲ್ ಸಮಯ) ಜಾರಿಗೆ ಬಂದಿದೆ. ಹಿಜ್ಬುಲ್ಲಾ ನಾಯಕರು ಒಪ್ಪಂದಕ್ಕೆ ಪ್ರಾಥಮಿಕ ಬೆಂಬಲವನ್ನು ಸೂಚಿಸಿದ್ದಾರೆ. ಈ ಮೂಲಕ ಎರಡೂ ಪಕ್ಷಗಳು ಈಗ ಯುದ್ಧದಿಂದ ಹಿಂದೆ ಸರಿಯುವ ನಿರ್ಣಾಯಕ ಹಂತಕ್ಕೆ ತಲುಪಿವೆ.
ಈ ಒಪ್ಪಂದದ ಪ್ರಕಾರ, 60 ದಿನಗಳ ಕಾಲ ಕದನ ವಿರಾಮ ಜಾರಿಯಲ್ಲಿ ಇರಲಿದೆ. ಇಸ್ರೇಲಿ ಪಡೆಗಳು ಲೆಬನಾನ್ನಿಂದ ಹಿಂದೆ ಸರಿಯಬೇಕು ಮತ್ತು ಹಿಜ್ಬುಲ್ಲಾ ದಕ್ಷಿಣ ಲೆಬನಾನ್ ನಿಂದ ಹಿಂದೆ ಸರಿಯಬೇಕೆಂಬ ಷರತ್ತು ವಿಧಿಸಲಾಗಿದೆ. ಏತನ್ಮಧ್ಯೆ, ಹಿಜ್ಬುಲ್ಲಾ ಒಪ್ಪಂದವನ್ನು ಉಲ್ಲಂಘಿಸಿದರೆ ಅದರ ವಿರುದ್ಧ ಮತ್ತೆ ಕ್ರಮ ಕೈಗೊಳ್ಳುವ ಹಕ್ಕು ತನಗಿರಬೇಕೆಂದು ಇಸ್ರೇಲ್ ಒತ್ತಾಯಿಸಿದೆ. ಆದರೆ ಲೆಬನಾನ್ ಈ ನಿಬಂಧನೆಯನ್ನು ವಿರೋಧಿಸಿದೆ.
ಇದಕ್ಕೂ ಮುನ್ನ ಮಂಗಳವಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್ನ ಹಿಜ್ಬುಲ್ಲಾದೊಂದಿಗೆ ಯುಎಸ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬರಲು ತಮ್ಮ ಕ್ಯಾಬಿನೆಟ್ ಗೆ ಶಿಫಾರಸು ಮಾಡುವುದಾಗಿ ಹೇಳಿದರು.
ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘರ್ಷದಿಂದ 1.2 ಮಿಲಿಯನ್ ಲೆಬನಾನ್ ಜನತೆ ಮತ್ತು 50,000 ಇಸ್ರೇಲಿಗಳು ಸ್ಥಳಾಂತರಗೊಂಡಿದ್ದಾರೆ. ಇಸ್ರೇಲ್ನ ಭಾರಿ ಬಾಂಬ್ ದಾಳಿಯಿಂದ ಲೆಬನಾನ್ನಲ್ಲಿ 3,700 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಇದರಲ್ಲಿ ಹೆಚ್ಚಿನವರು ನಾಗರಿಕರು ಎಂದು ಲೆಬನಾನ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇಸ್ರೇಲ್ ಕಡೆಗೆ 130 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಒಪ್ಪಂದದ ಪ್ರಮುಖ ಷರತ್ತುಗಳು:
- ಈ ಒಪ್ಪಂದದ ಪ್ರಕಾರ 60 ದಿನಗಳ ಕಾಲ ಕದನ ವಿರಾಮ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಇಸ್ರೇಲಿ ಪಡೆಗಳು ಗಡಿಯ ತಮ್ಮ ಭಾಗಕ್ಕೆ ಹಿಂತಿರುಗುತ್ತವೆ ಮತ್ತು ಹಿಜ್ಬುಲ್ಲಾ ದಕ್ಷಿಣ ಲೆಬನಾನ್ನ ಹೆಚ್ಚಿನ ಭಾಗಗಳಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹಿಂಪಡೆಯಲಿದೆ.
- ಈ ಒಪ್ಪಂದವು ಬುಧವಾರದಿಂದ (ಸ್ಥಳೀಯ ಸಮಯ) ಜಾರಿಗೆ ಬಂದಿದೆ.
- ಲಿಟಾನಿ ನದಿಯ ದಕ್ಷಿಣದ ಪ್ರದೇಶದಲ್ಲಿ ಸಾವಿರಾರು ಲೆಬನಾನ್ ಸೈನಿಕರು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲು ಒಪ್ಪಿಕೊಳ್ಳಲಾಗಿದೆ.
- ಯುಎಸ್ ನೇತೃತ್ವದ ಅಂತರರಾಷ್ಟ್ರೀಯ ಮೇಲ್ವಿಚಾರಣಾ ಗುಂಪು ಎಲ್ಲಾ ಪಕ್ಷಗಳು ಕದನವಿರಾಮ ಪಾಲಿಸುವ ಬಗ್ಗೆ ಮೇಲ್ವಿಚಾರಣೆ ಮಾಡಲಿದೆ. ಈ ಒಪ್ಪಂದವು ಹಗೆತನಕ್ಕೆ ಶಾಶ್ವತ ಅಂತ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಅಧ್ಯಕ್ಷ ಬೈಡನ್ ಹೇಳಿದ್ದಾರೆ.
- ಹಿಜ್ಬುಲ್ಲಾ ತನ್ನ ಬದ್ಧತೆಗಳನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳುವ ಹಕ್ಕು ತನಗಿರಬೇಕೆಂದು ಇಸ್ರೇಲ್ ಒತ್ತಾಯಿಸಿದೆ. ಈ ನಿಬಂಧನೆಯನ್ನು ಲೆಬನಾನ್ ಅಧಿಕಾರಿಗಳು ಒಪ್ಪಂದದಲ್ಲಿ ಸೇರಿದಂತೆ ವಿರೋಧಿಸಿದ್ದಾರೆ.
ಒಪ್ಪಂದದ ಬಗ್ಗೆ ಹಿಜ್ಬುಲ್ಲಾ ಹೇಳಿದ್ದೇನು?: ಇಸ್ರೇಲ್ ತನ್ನ ದಾಳಿಯನ್ನು ಪುನರಾರಂಭಿಸುವುದಿಲ್ಲ ಎಂಬ ಭರವಸೆಯ ಮೇಲೆ ಈ ಒಪ್ಪಂದಕ್ಕೆ ತಾವು ಒಪ್ಪಿರುವುದಾಗಿ ಹಿಜ್ಬುಲ್ಲಾ ನಾಯಕರೊಬ್ಬರು ಹೇಳಿದ್ದಾರೆ.
"ಶತ್ರು ಸರ್ಕಾರ ಸಹಿ ಮಾಡಿದ ಒಪ್ಪಂದವನ್ನು ಪರಿಶೀಲಿಸಿದ ನಂತರ, ನಾವು ಹೇಳಿದ್ದಕ್ಕೂ ಲೆಬನಾನ್ ಅಧಿಕಾರಿಗಳು ಒಪ್ಪಿಕೊಂಡಿದ್ದಕ್ಕೂ ಹೋಲಿಕೆ ಇದೆಯೇ ಎಂದು ನಾವು ನೋಡುತ್ತೇವೆ" ಎಂದು ಹಿಜ್ಬುಲ್ಲಾದ ರಾಜಕೀಯ ಮಂಡಳಿಯ ಉಪಾಧ್ಯಕ್ಷ ಮಹಮೂದ್ ಖಮಾಟಿ ಅಲ್ ಜಜೀರಾಗೆ ತಿಳಿಸಿದರು. ನಾವು ಆಕ್ರಮಣವನ್ನು ಕೊನೆಗೊಳಿಸಲು ಬಯಸುತ್ತೇವೆ, ಆದರೆ ಲೆಬನಾನ್ ದೇಶದ ಸಾರ್ವಭೌಮತ್ವವನ್ನು ಬಲಿಕೊಡಲಾಗದು ಎಂದು ಅವರು ಹೇಳಿದರು.
ಗಾಜಾ ಬಗ್ಗೆ ಒಪ್ಪಂದದಲ್ಲಿ ಇರುವುದೇನು?: ಗಾಜಾದಲ್ಲಿನ ಮಾರಣಾಂತಿಕ ಸಂಘರ್ಷವನ್ನು ಕೊನೆಗೊಳಿಸುವ ಬಗ್ಗೆ ಈ ಒಪ್ಪಂದದಲ್ಲಿ ಏನನ್ನೂ ಹೇಳಲಾಗಿಲ್ಲ. 2023ರ ಅಕ್ಟೋಬರ್ ನಲ್ಲಿ ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿ 1,200 ಜನರನ್ನು ಬಲಿತೆಗೆದುಕೊಂಡ ನಂತರ ಪ್ರಾರಂಭವಾದ ಗಾಜಾ ಯುದ್ಧ ಈಗಲೂ ಮುಂದುವರೆದಿದೆ. ಗಾಜಾದಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕ್ರಮಗಳನ್ನು ನಿಲ್ಲಿಸಿದರೆ ಮಾತ್ರ ಇಸ್ರೇಲ್ ಮೇಲಿನ ದಾಳಿಯನ್ನು ನಿಲ್ಲಿಸುವುದಾಗಿ ಹಿಜ್ಬುಲ್ಲಾ ಈ ಹಿಂದೆ ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ : ರಣರಂಗವಾದ ಇಸ್ಲಾಮಾಬಾದ್: ಗುಂಡಿಕ್ಕುವ ಆದೇಶಕ್ಕೂ ಜಗ್ಗದ ಇಮ್ರಾನ್ ಖಾನ್ ಬೆಂಬಲಿಗರು, 6 ಪೊಲೀಸರ ಸಾವು